Friday, 25th May 2018

Recent News

ಸರಣಿ ಸೋಲಿನ ಬೆನ್ನಲ್ಲೇ ಕೊಹ್ಲಿಗೆ ಅಭಿಮಾನಿಗಳಿಗೆ ಸಿಹಿ ಸುದ್ದಿ

ದುಬೈ: ದಕ್ಷಿಣ ಆಫ್ರಿಕಾ ನೆಲದಲ್ಲಿ ಟೀಮ್ ಇಂಡಿಯಾದ ಸರಣಿ ಸೋಲಿನ ಬೇಸರದ ನಡುವೆಯೇ ಭಾರತೀಯ ಅಭಿಮಾನಿಗಳಿಗೆ ಐಸಿಸಿ ಸಂತಸದ ಸುದ್ದಿಯೊಂದನ್ನು ನೀಡಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) 2017ರ ವಾರ್ಷಿಕ ಪ್ರಶಸ್ತಿ ಪ್ರಕಟವಾಗಿದ್ದು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿ ಜೊತೆಗೆ, ವರ್ಷದ ಶ್ರೇಷ್ಠ ಏಕದಿನ ಕ್ರಿಕೆಟಿಗ ಹಾಗೂ ಎಲ್ಲಾ ಮಾದರಿ ಕ್ರಿಕೆಟ್ ನಲ್ಲಿ ನೀಡಿರುವ ಅಮೋಘ ಪ್ರದರ್ಶನಕ್ಕೆ `ಸರ್ ಗ್ಯಾರಿಫೀಲ್ಡ್ ಸೋಬರ್ಸ್ ಪ್ರಶಸ್ತಿ’ಗೆ ಪಾತ್ರರಾಗಿದ್ದಾರೆ.

ಪ್ರಶಸ್ತಿ ಪ್ರಕಟವಾದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕೊಹ್ಲಿ, 2ನೇ ಬಾರಿ ವರ್ಷದ ಕ್ರಿಕೆಟಿಗ ಪ್ರಶಸ್ತಿ ಪಡೆದಿರುವುದು ನನ್ನ ಪಾಲಿಗೆ ಅತ್ಯಂತ ಮಹತ್ವದ ಸಂಭ್ರಮದ ವಿಚಾರ. ಕಳೆದ ಬಾರಿ ಆರ್. ಆಶ್ವಿನ್ ಈ ಪ್ರಶಸ್ತಿಗೆ ಭಾಜನರಾಗಿದ್ದರು. ಈ ಬಾರಿ ನನಗೆ ಬಂದಿದೆ. ಸತತವಾಗಿ ಭಾರತೀಯರೇ ವರ್ಷದ ಕ್ರಿಕೆಟಿಗರಾಗಿ ಮಿಂಚಿರುವುದು ಹೆಮ್ಮೆಯ ವಿಷಯ ಎಂದರು.

2016ರ ಸೆಪ್ಟೆಂಬರ್ 21 ರಿಂದ 2017ರ ಡಿಸೆಂಬರ್ 31ರವರೆಗಿನ ಪ್ರದರ್ಶನವನ್ನು ಗಮನಿಸಿ ಐಸಿಸಿ ಟೀಂ ಇಂಡಿಯಾ ನಾಯಕನನ್ನು ವರ್ಷದ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಕೊಹ್ಲಿ ಟೆಸ್ಟ್ ನಲ್ಲಿ 77.80 ರ ಸರಾಸರಿಯಲ್ಲಿ 2,203 ರನ್ ಸಿಡಿಸಿದ್ದರು. ಇದರಲ್ಲಿ 5 ದ್ವಿಶತಕ ಸೇರಿದಂತೆ 8 ಶತಕಗಳು ಸೇರಿವೆ. ಏಕದಿನ ಕ್ರಿಕೆಟ್ ನಲ್ಲಿ 82.63 ರ ಸರಾಸರಿಯಲ್ಲಿ 7 ಶತಕ ಸೇರಿದಂತೆ 1,818 ರನ್ ಪೇರಿಸಿದ್ದರು. ಇದೇ ವೇಳೆ ಟಿ20 ಕ್ರಿಕೆಟ್ ನಲ್ಲಿ 153 ಸ್ಟ್ರೈಕ್ ರೇಟ್ ನಲ್ಲಿ 299 ರನ್ ಸಿಡಿಸಿದ್ದರು.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ವರ್ಷದ ಶ್ರೇಷ್ಠ ಏಕದಿನ ಕ್ರಿಕೆಟಿಗ ಪ್ರಶಸ್ತಿ ಪಡೆಯುತ್ತಿರುವುದು ಇದು ಎರಡನೇ ಬಾರಿ. ಇದಕ್ಕೂ ಮೊದಲು ಕೊಹ್ಲಿ, 2012ರಲ್ಲಿ ಮೊದಲ ಬಾರಿಗೆ ವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದರು.

ಐಸಿಸಿ ವರ್ಷದ ಟೆಸ್ಟ್ ಕ್ಯಾಪ್ಟನ್ ಪ್ರಶಸ್ತಿ ಆಸ್ಟ್ರೇಲಿಯಾದ ಟೆಸ್ಟ್ ತಂಡದ ನಾಯಕ ಸ್ಟೀವ್ ಸ್ಮಿತ್ ಪಾಲಾಗಿದೆ.

 

Leave a Reply

Your email address will not be published. Required fields are marked *