Tuesday, 22nd May 2018

Recent News

ಸೌರವ್ ಗಂಗೂಲಿ ದಾಖಲೆ ಸರಿಗಟ್ಟಿದ ಕ್ಯಾಪ್ಟನ್ ವಿರಾಟ್ ಕೊಹ್ಲಿ

ಡರ್ಬನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮಾಜಿ ನಾಯಕ ಸೌರವ್ ಗಂಗೂಲಿ ಅವರ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ.

ಡರ್ಬನ್ ನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ 6 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭರ್ಜರಿ ಶತಕವನ್ನು ಸಿಡಿಸುವ ಮೂಲಕ ಟೀಂ ಇಂಡಿಯಾ ನಾಯಕರಾಗಿ ಹೆಚ್ಚು ಶತಕ ಗಳಿಸಿದ ಗಂಗೂಲಿ ಹೆಸರಿನಲಿದ್ದ ದಾಖಲೆಯನ್ನು ಸರಿಗಟ್ಟಿದ್ದಾರೆ. ಗುರುವಾರ ನಡೆದ ಪಂದ್ಯದಲ್ಲಿ ಕೊಹ್ಲಿ 119 ಎಸೆತಗಳಲ್ಲಿ 10 ಬೌಂಡರಿಗಳ ನೆರವಿನಿಂದ 112 ರನ್ ಸಿಡಿಸಿದರು. ಈ ಮೂಲಕ ಕೊಹ್ಲಿ ಟೀಂ ಇಂಡಿಯಾ ನಾಯಕರಾಗಿ 11 ನೇ ಶತಕ ಗಳಿಸಿದರು, ವೃತ್ತಿ ಜೀವನದಲ್ಲಿ ತಮ್ಮ 33 ನೇ ಏಕದಿನ ಶತಕವನ್ನು ಪೂರೈಸಿದರು. ಈ ಹಿಂದೆ ಸೌರವ್ ಗಂಗೂಲಿ ಟೀಂ ಇಂಡಿಯಾ ನಾಯಕರಾಗಿ 11 ಶತಕಗಳನ್ನು ಸಿಡಿಸಿದರು.

ಕೊಹ್ಲಿ ಕೇವಲ 44 ಪಂದ್ಯಗಳಲ್ಲಿ 11 ಶತಕಗಳನ್ನು ಸಿಡಿಸಿದರೆ, ಗಂಗೂಲಿ ಅವರು 146 ಪಂದ್ಯಗಳಲ್ಲಿ 38.79 ಸರಾಸರಿಯಲ್ಲಿ 5,082 ರನ್ ಗಳನ್ನು ಗಳಿಸುವ ಮೂಲಕ 11 ಶತಕ, 30 ಅರ್ಧ ಶತಕಗಳನ್ನು ಸಿಡಿಸಿದ ಸಾಧನೆ ಮಾಡಿದ್ದರು. ನಂತರದ ಸ್ಥಾನದಲ್ಲಿ ಮಾಜಿ ನಾಯಕ ಎಂಎಸ್ ಧೋನಿ ಮತ್ತು ಸಚಿನ್ ತೆಂಡೂಲ್ಕರ್ ಇದ್ದು, ತಲಾ 6 ಶತಕಗಳನ್ನು ಗಳಿಸಿದ್ದಾರೆ.

ಕೊಹ್ಲಿ ಡರ್ಬನ್ ನಲ್ಲಿ ಶತಕ ಗಳಿಸುವ ಮೂಲಕ ಆಫ್ರಿಕಾದಲ್ಲಿ ತಮ್ಮ ಮೊದಲ ಶತಕವನ್ನು ಸಿಡಿಸಿದ್ರು. ಈ ಮೂಲಕ ಕೊಹ್ಲಿ ಆಡಿದ 9 ದೇಶಗಳಲ್ಲಿ ಶತಕ ಸಿಡಿಸಿದ ಸಾಧನೆ ಮಾಡಿದರು.

ಈ ಹಿಂದೆ ಡರ್ಬನ್ ಮೈದಾನದಲ್ಲಿ ಆಡಿದ್ದ 07 ಪಂದ್ಯಗಳಲ್ಲಿ ಭಾರತ 06 ಪಂದ್ಯಗಳಲ್ಲಿ ಸೋಲನುಭವಿಸಿತ್ತು. ಉಳಿದ ಒಂದು ಪಂದ್ಯ ಫಲಿತಾಂಶ ಕಾಣದೆ ರದ್ದಾಗಿತ್ತು. ಮತ್ತೊಂದೆಡೆ ತನ್ನ ನೆಲದಲ್ಲಿ ಸತತ 17 ಏಕದಿನ ಪಂದ್ಯಗಳನ್ನು ಗೆದ್ದು ಬೀಗುತ್ತಿದ್ದ ಹರಿಣಗಳಿಗೆ ಟೀಂ ಇಂಡಿಯಾ ಸೋಲಿನ ರುಚಿ ತೋರಿಸಿದೆ.

06 ಏಕದಿನಗಳ ಸರಣಿಯ 2ನೇ ಪಂದ್ಯ ಸೆಂಚೂರಿಯನ್ ನ ಸೂಪರ್ ಸ್ಪೋಟ್ರ್ಸ್ ಪಾರ್ಕ್ ನಲ್ಲಿ ಭಾನುವಾರ ನಡೆಯಲಿದೆ.

 

Leave a Reply

Your email address will not be published. Required fields are marked *