ಮುಂಬೈ: ಬಾಲಿವುಡ್ನ ಬಹುನಿರೀಕ್ಷಿತ ಸಿನಿಮಾ ‘ಟೈಗರ್ ಜಿಂದಾ ಹೈ’ ಚಿತ್ರ ಕಳೆದ ಶುಕ್ರವಾರ ತೆರೆಕಂಡಿದ್ದು, ಅಭಿಮಾನಿಗಳಿಗೆ ಭರಪೂರ ಮನರಂಜನೆಯನ್ನು ನೀಡುತ್ತಿದೆ. ಅಭಿಮಾನಿ ಪ್ರಭುಗಳಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುವ ಜೊತೆಗೆ ಗಲ್ಲಾ ಪೆಟ್ಟಿಗೆಯನ್ನು ತುಂಬಿಸಿಕೊಳ್ಳುತ್ತಿದೆ.
ಈಗಾಗಲೇ ಬಿಡುಗಡೆಗೊಂಡಿರುವ ಸಲ್ಮಾನ್ ನಟನೆಯ ಎಲ್ಲ ಚಿತ್ರಗಳ ದಾಖಲೆಗಳನ್ನು ಟೈಗರ್ ಜಿಂದಾ ಹೈ ಅಳಿಸಿ ಹಾಕಿದೆ. ಈ ಹಿಂದೆ ತೆರೆಕಂಡಿದ್ದ ‘ಸುಲ್ತಾನ್’ ಮೂರು ದಿನಗಳಲ್ಲಿ 105 ಕೋಟಿ ಗಳಿಸುವ ಮೂಲಕ ದಾಖಲೆ ಬರೆದಿತ್ತು. ಆದ್ರೆ ಇದೀಗ ಟೈಗರ್ ಜಿಂದಾ ಹೈ ಸಿನಿಮಾ ಮೂರೇ ದಿನಗಳಲ್ಲಿ 114 ಕೋಟಿಗೂ ಅಧಿಕ ಹಣವನ್ನು ದೋಚಿದೆ. ಈ ಸಿನಿಮಾ ಸಲ್ಮಾನ್ ಖಾನ್ ಅಭಿನಯದ 100 ಕೋಟಿ ಗಳಿಸಿರುವ ಚಿತ್ರಗಳ ಪಟ್ಟಿಯಲ್ಲಿ ಸೇರಿರುವ 12ನೇ ಫಿಲ್ಮ್ ಆಗಿದೆ.
ಅಭೂತಪೂರ್ವ ಯಶಸ್ಸು ಕಂಡಿದ್ದ ‘ಭಜರಂಗಿ ಭಾಯಿಜಾನ್’ ಮೂರು ದಿನಗಳಲ್ಲಿ 102 ಕೋಟಿ ರೂ. ಮತ್ತು ಟ್ಯೂಬ್ಲೈಟ್ 64 ಕೋಟಿ ರೂ. ಯನ್ನು ಕೊಳ್ಳೆ ಹೊಡೆದಿತ್ತು. ಹಾಗಾಗಿ ಸಲ್ಮಾನ್ ತಮ್ಮ ದಾಖಲೆಯನ್ನು ತಾವೇ ಬ್ರೇಕ್ ಮಾಡಿದ್ದಾರೆ. ಇನ್ನೂ ಭಜರಂಗಿ ಭಾಯಿಜಾನ್ ಮತ್ತು ಸುಲ್ತಾನ್ 300 ಕೋಟಿ ಕ್ಲಬ್ ನ್ನು ಸೇರಿದ್ದು, ಟೈಗರ್ ಜಿಂದಾ ಹೈ ಕೂಡ 300 ಕೋಟಿ ಕ್ಲಬ್ ಸೇರಲಿದೆ ಎಂದು ಸಿನಿ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ. ಇದನ್ನೂ ಓದಿ: ಬಾಹುಬಲಿಯ ಈ ದಾಖಲೆಯನ್ನು ಮುರಿದ `ಟೈಗರ್ ಜಿಂದಾ ಹೈ`
ಐಸಿಸ್ ಉಗ್ರರಿಂದ ಸೆರೆಯಾಗಿರುವ ಭಾರತ ಮತ್ತು ಪಾಕಿಸ್ತಾನಿ ನರ್ಸ್ ಗಳನ್ನು ರಕ್ಷಿಸುವ ಕಥಾ ಹಂದರವನ್ನು ಸಿನಿಮಾ ಹೊಂದಿದೆ. ಸಲ್ಮಾನ್ ಮತ್ತು ಕತ್ರೀನಾ ಇಬ್ಬರೂ ಮಿಷನ್ ನಲ್ಲಿ ಭಾಗಿಯಾಗಿ ನರ್ಸ್ ಗಳನ್ನು ರಕ್ಷಿಸುವಾಗಿನ ಆ್ಯಕ್ಷನ್ ಸೀನ್ ಗಳು ನೋಡುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. 2012ರಲ್ಲಿ ತೆರೆಕಂಡಿದ್ದ ಬ್ಲಾಕ್ ಬಾಸ್ಟರ್ ‘ಏಕ್ ಥಾ ಟೈಗರ್’ ಸಿನಿಮಾದ ಮುಂದುವರೆದ ಭಾಗವೇ ‘ಟೈಗರ್ ಜಿಂದಾ ಹೈ. ಎರಡು ದೇಶಗಳ ಗೂಢಾಚಾರಿಗಳಾಗಿರುವ ಸಲ್ಮಾನ್(ಭಾರತ) ಮತ್ತು ಕತ್ರೀನಾ (ಪಾಕಿಸ್ತಾನ) ಮಧ್ಯೆ ಪ್ರೇಮಾಂಕುರವಾಗುತ್ತದೆ. ನಂತರ ತಮ್ಮ ದೇಶಗಳಿಂದ ವಿರೋಧ ವ್ಯಕ್ತವಾದಾಗ ಇಬ್ಬರೂ ಸ್ವದೇಶವನ್ನು ತೊರೆದು ಪಲಾಯಣಗೊಳ್ಳುವ ಕಥೆಯನ್ನು ಮೊದಲ ಭಾಗ ಹೊಂದಿತ್ತು. ಎರಡನೇ ಭಾಗದಲ್ಲಿ ಎರಡು ದೇಶಗಳ ಗೂಢಾಚಾರಿಗಳು ಒಟ್ಟಾಗಿ ಮಿಷನ್ ಆಪರೇಷನ್ ಕಥೆಯನ್ನು ನೋಡಬಹುದು.
ಸಿನಿಮಾದಲ್ಲಿ ಸಲ್ಮಾನ್, ಕತ್ರೀನಾ ಮುಖ್ಯ ಭೂಮಿಕೆಯಲ್ಲಿ ಮಿಂಚಿದರೆ, ಕನ್ನಡಿಗ ಗಿರೀಶ್ ಕಾರ್ನಾಡ್ ವಿಶೇಷ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಸಿನಿಮಾಗೆ ಅಲಿ ಅಬ್ಬಾಸ್ ಜಾಫರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾದ ಯಶಸ್ಸಿನ ಬಳಿಕ ಚಿತ್ರತಂಡ ಕ್ರಿಸ್ಮಸ್ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದೆ.