ಕಲಬುರಗಿಯ ಈ ದೇವಸ್ಥಾನದ ಕೀ ಇಟ್ಟುಕೊಂಡ್ರೆ ಅಪಾಯವಂತೆ!

ಕಲಬುರಗಿ: ಎರಡು ಸಮುದಾಯಗಳ ಜಗಳದಿಂದ ಕಲಬುರಗಿಯ ಮೇಳಕುಂದಾ ಗ್ರಾಮದ ದೇವಸ್ಥಾನಕ್ಕೆ ಜಿಲ್ಲಾಡಳಿತ ಬೀಗ ಜಡಿದಿದೆ. ಆದರೆ ಈ ದೇವಾಲಯದ ಕೀ ಇಟ್ಟಿಕೊಳ್ಳಲು ಇದೀಗ ಯಾವ ಅರ್ಚಕರು ಮತ್ತು ಅಧಿಕಾರಿಗಳು ಮುಂದೆ ಬರುತ್ತಿಲ್ಲ.

ಕಲಬುರಗಿಯ ಮೇಳಕುಂದಾ ಗ್ರಾಮದಲ್ಲಿರುವ ಈ ಪುರಾತನ ದೇವಸ್ಥಾನ ಇದೀಗ ವಿವಾದದ ಗೂಡಾಗಿದೆ. ದೇವಾಲಯ ನಮಗೆ ಸೇರಿದ್ದು ಎಂದು ಕುರುಬ ಸಮುದಾಯದವರ ವಾದಿಸಿದರೆ, ದೇವಸ್ಥಾನ ಟ್ರಸ್ಟ್ ಗೇ ಸೇರಿದ್ದು ಅನ್ನೋದು ಲಿಂಗಾಯತ ಸೇರಿದಂತೆ ಇತರ ಸಮುದಾಯದ ವಾದ. ಈ ಎರಡು ಗುಂಪುಗಳ ಜಗಳವನ್ನು ಅರಿತು ಜಿಲ್ಲಾಡಳಿತ ದೇವಸ್ಥಾನವನ್ನು ಸುರ್ಪದಿಗೆ ಪಡೆದಿದೆ.

ಜಿಲ್ಲಾಡಳಿತದ ಈ ನಿರ್ಧಾರ ಗ್ರಾಮದ ಹಲವು ಮುಖಂಡರಿಗೆ ತೀವ್ರ ಇರಸು ಮುರಸು ಉಂಟು ಮಾಡುತ್ತಿದೆ. ಹೀಗಾಗಿ ಶತಾಯಗತಾಯ ದೇವಸ್ಥಾನ ಆಡಳಿತ ಚುಕ್ಕಾಣಿಗೆ ಎರಡು ಸಮುದಾಯಗಳು ಪಟ್ಟು ಹಿಡಿದಿವೆ.

ದೇವಸ್ಥಾನವನ್ನು ವಶಕ್ಕೆ ಪಡೆದ ನಂತರ ಜಿಲ್ಲಾಡಳಿತ ಕೆಲ ಅರ್ಚಕರನ್ನು ನೇಮಕ ಮಾಡಿದೆ. ದೇವಸ್ಥಾನದ ಕೀ ಇಟ್ಟಿಕೊಂಡ ಹಲವು ಅರ್ಚಕರಿಗೆ ಕೆಟ್ಟ ಅನುಭವಗಳು ಆಗಿವೆಯಂತೆ. ಹೀಗಾಗಿ ಯಾವ ಅರ್ಚಕರು ಸಹ ಈ ದೇವಸ್ಥಾನದ ಪೂಜೆ ಮಾಡಲು ಇಂದಿಗೂ ಮುಂದೆ ಬರುತ್ತಿಲ್ಲ. ಇನ್ನು ಕಾಕತಾಳೀಯ ಎಂಬಂತೆ ದೇವಸ್ಥಾನಕ್ಕೆ ಬೀಗ ಹಾಕಿದ ತಹಶೀಲ್ದಾರ್ ಬಸಲಿಂಗಪ್ಪ ಸಹ ಇದೀಗ ಭ್ರಷ್ಟಾಚಾರ ಪ್ರಕರಣದಲ್ಲಿ ಅಮಾನತುಗೊಂಡಿದ್ದಾರೆ. ಇದು ಗ್ರಾಮದ ದೇವರ ಶಾಪ ಎಂಬುಂದು ಮೇಳಕುಂದ(ಬಿ) ಗ್ರಾಮಸ್ಥ ಸಿದ್ದಣ್ಣ ಮಾಲಿಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ದೇವಸ್ಥಾನದ ಕೀ ಇಟ್ಟಿಕೊಂಡವರಿಗೆ ಉಳಿಗಾಲವಿಲ್ಲ ಎಂಬ ಸುದ್ದಿ ಸದ್ಯ ಇದೀಗ ವೈರಲ್ ಆಗುತ್ತಿದೆ. ಗ್ರಾಮದ ಎರಡು ಸಮುದಾಯಗಳ ಜಗಳದಲ್ಲಿ ಇದೀಗ ದೇವಸ್ಥಾನದಲ್ಲಿ ದೇವರು ಅನಾಥವಾಗಿದ್ದಾನೆ. ಆದರೆ ದೇವಸ್ಥಾನದ ಕೀ ಗಾಗಿ ಮಾತ್ರ ಎರಡು ಸಮುದಾಯಗಳ ಜಗಳ ಇಂದಿಗೂ ಮುಂದುವರೆದಿದೆ.

 

LEAVE A REPLY