Recent News

ಪ್ರೇಯಸಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ನಟ ನಿತಿನ್

ಹೈದರಾಬಾದ್: ಟಾಲಿವುಡ್ ಖ್ಯಾತ ನಟ ನಿತಿನ್ ಸದ್ಯದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ನಿತಿನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಬಹು ನಿರೀಕ್ಷಿತಾ ‘ಭೀಷ್ಮ’ ಸಿನಿಮಾದ ಬಿಡುಗಡೆ ಬಳಿಕ ನಿತಿನ್ ವಿವಾಹವಾಗಲಿದ್ದು, ಈ ವರ್ಷ ನಿತಿನ್‍ಗೆ ಡಬಲ್ ಸಂಭ್ರಮದ ಖುಷಿ ಸಿಗಲಿದೆ.

ಸದ್ಯದ ಮಾಹಿತಿ ಪ್ರಕಾರ, ನಿತಿನ್ ಏಪ್ರಿಲ್ 16ರಂದು ದುಬೈನಲ್ಲಿ ಮದುವೆ ಆಗಲಿದ್ದಾರೆ. ಅಷ್ಟೇ ಅಲ್ಲದೆ ಮದುವೆಗೂ ಒಂದು ದಿನದ ಮುಂಚೆ ಅಂದರೆ ಏಪ್ರಿಲ್ 15ರಂದು ಪ್ರೀ ವೆಡ್ಡಿಂಗ್ ಸಮಾರಂಭ ಕೂಡ ಆಯೋಜಿಸಿದ್ದಾರೆ ಎಂದು ವರದಿಯಾಗಿದೆ.

ನಿತಿನ್ ತಮ್ಮ ಬಹುದಿನದ ಗೆಳತಿ ಶಾಲಿನಿ ಅವರ ಕೈಹಿಡಿಯಲಿದ್ದಾರೆ. ಸುಮಾರು ನಾಲ್ಕೈದು ವರ್ಷದಿಂದ ಶಾಲಿನಿ ಹಾಗೂ ನಿತಿನ್ ಸ್ನೇಹಿತರು. ಈ ಸ್ನೇಹ ಪ್ರೀತಿಗೆ ತಿರುಗಿ ಈಗ ತಮ್ಮ ಗೆಳತಿಯ ಜೊತೆ ದಾಂಪತ್ಯ ಜೀವನ ಆರಂಭಿಸಲು ನಿತಿನ್ ನಿರ್ಧರಿಸಿದ್ದಾರೆ. ತಮ್ಮ ಪ್ರೀತಿಯ ಬಗ್ಗೆ ಇಬ್ಬರ ಮನೆಯಲ್ಲೂ ತಿಳಿಸಿ, ಹಿರಿಯರ ಸಮ್ಮತಿ ಪಡೆದು ಈ ಜೋಡಿ ಮದುವೆಯಾಗುತ್ತಿದ್ದಾರೆ.

ನಿತಿನ್ ಮದುವೆ ಮಾತ್ರವಲ್ಲ ಸಂಗೀತ ಕಾರ್ಯಕ್ರಮ ಕೂಡ ದುಬೈನಲ್ಲಿಯೇ ನಡೆಯಲಿದ್ದು, ವಿವಾಹದ ಕೆಲ ದಿನಗಳ ಬಳಿಕ ಹೈದರಾಬಾದ್‍ನಲ್ಲಿ ಅದ್ಧೂರಿಯಾಗಿ ಆರತಕ್ಷತೆ ನಡೆಯಲಿದೆ. ಈಗಾಗಲೇ ನಿತಿನ್ ಹಾಗೂ ಶಾಲಿನಿ ಕುಟುಂಬದವರು ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದು, ಮದುವೆಗೆ ದುಬೈನಲ್ಲಿ ಹೋಟೆಲ್ ಕೂಡ ಬುಕ್ ಆಗಿದೆ.

ಫೆಬ್ರವರಿ 21ರಂದು ವೆಂಕಿ ಕುಡುಮುಲಾ ನಿರ್ದೇಶನದಲ್ಲಿ ತಯಾರಾಗಿರುವ ‘ಭೀಷ್ಮ’ ಸಿನಿಮಾ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ನಿತಿನ್‍ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಈ ಚಿತ್ರ ತೆರೆಕಂಡ ಬಳಿಕ ನಿತಿನ್ ತಮ್ಮ ಪ್ರೇಯಸಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ತಯಾರಾಗಿದ್ದಾರೆ.

Leave a Reply

Your email address will not be published. Required fields are marked *