Saturday, 23rd June 2018

Recent News

ಸಚಿವ ಖಾದರ್ ಜೊತೆ ಕಾಣಿಸಿಕೊಂಡಿದ್ದ ಇಲಿಯಾಸ್ ನ ಬರ್ಬರ ಹತ್ಯೆ

ಮಂಗಳೂರು: ದೀಪಕ್ ರಾವ್ ಮತ್ತು ಬಶೀರ್ ಸಾವಿನ ಬಳಿಕ ಶಾಂತವಾಗಿದ್ದ ಕರಾವಳಿಯಲ್ಲಿ ಇದೀಗ ಮತ್ತೊಂದು ಹೆಣ ಬಿದ್ದಿದೆ. ಮಂಗಳೂರಿನ ಜಪ್ಪಿನಮೊಗರಿನ ಕುದ್ಪಾಡಿಯಲ್ಲಿ ಟಾರ್ಗೆಟ್ ಗ್ರೂಪಿನ ಇಲಿಯಾಸ್ (31) ನನ್ನು ಇಂದು ಬೆಳಗ್ಗೆ ದುಷ್ಕರ್ಮಿಗಳು ಕೊಚ್ಚಿ ಕೊಲೆಗೈದಿದ್ದಾರೆ.

ಉಳ್ಳಾಲದ ಟಾರ್ಗೆಟ್ ಗ್ರೂಪ್ ರೂವಾರಿ ಹಾಗೂ ಕಾಂಗ್ರೆಸ್ ಕಾರ್ಯಕರ್ತನಾಗಿದ್ದ ಇಲಿಯಾಸ್, ಮಂಗಳೂರಿನ ಇಲ್ಯಾಸ್ ಫ್ಲಾಟ್‍ನಲ್ಲಿ ಮಲಗಿದ್ದ ಸಮಯದಲ್ಲಿ ಮುಂಜಾನೆ ಇಬ್ಬರು ಆಗಂತುಕರು ಮನೆಗೆ ನುಗ್ಗಿ ಕೊಚ್ಚಿ ಕೊಲೆಗೈದಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ್ದ ಆರೋಪದ ಮೇಲೆ ಒಂದೂವರೆ ತಿಂಗಳ ಹಿಂದೆಯಷ್ಟೆ ಜೈಲು ಸೇರಿದ್ದ ಇಲಿಯಾಸ್, 2 ದಿನಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿ ಮನೆಗೆ ಬಂದಿದ್ದ. ಹೀಗಾಗಿ ಆತ ಮನೆಯಲ್ಲಿ ಒಬ್ಬನೇ ಇರುವುದರ ಮಾಹಿತಿ ಪಡೆದು ಆಗಂತುಕರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ಟಾರ್ಗೆಟ್ ಗ್ರೂಪ್ ಸದಸ್ಯರೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ. ಸದ್ಯ ಘಟನಾ ಸ್ಥಳಕ್ಕೆ ಪಾಂಡೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಆಹಾರ ಸಚಿವ ಯು.ಟಿ ಖಾದರ್ ಜೊತೆ ಇಲಿಯಾಸ್ ಕಾಣಿಸಿಕೊಂಡಿದ್ದ ಫೋಟೋವೊಂದು ಇತ್ತೀಚೆಗೆ ವೈರಲ್ ಆಗಿತ್ತು. ಇದನ್ನೂ ಓದಿ: ಯುಟಿ ಖಾದರ್ ಜೊತೆ ದೀಪಕ್ ಹತ್ಯೆಯ ಆರೋಪಿ ಕುಳಿತಿರುವ ಫೋಟೋ ವೈರಲ್

ಯಾರು ಈ ಇಲಿಯಾಸ್?
ಮಂಗಳೂರು ರೌಡಿ ನಿಗ್ರಹ ದಳದ ಪೊಲೀಸರು ಉಳ್ಳಾಲದ ನಟೋರಿಯಸ್ ಟಾರ್ಗೆಟ್ ಗ್ಯಾಂಗ್ ನಾಯಕ ಇಲಿಯಾಸ್ ನನ್ನು 2017ರ ನವೆಂಬರ್ ನಲ್ಲಿ ಬಂಧಿಸಿದ್ದರು. ಈತನ ಮೇಲೆ ರಾಜ್ಯದ ನಾನಾ ಭಾಗಗಳಲ್ಲಿ ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿವೆ.

ಇಲ್ಯಾಸ್ ಈ ಹಿಂದೆ ಉಳ್ಳಾಲ ಯುವ ಕಾಂಗ್ರೆಸ್ ಉಪಾಧ್ಯಕ್ಷನಾಗಿದ್ದ. ಗಂಭೀರ ಆರೋಪಗಳಿದ್ದರೂ ಇಲಿಯಾಸ್ ನನ್ನು ಯು.ಟಿ. ಖಾದರ್ ಉಳ್ಳಾಲ ಬ್ಲಾಕ್ ನ ಯುವ ಕಾಂಗ್ರೆಸ್ ನ ಉಪಾಧ್ಯಕ್ಷ ಸ್ಥಾನ ಕೊಟ್ಟಿದ್ದು ಹೇಗೆ ಎಂದು ಜನ ಈಗ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಅಕ್ಟೋಬರ್ ನಲ್ಲಿ ಮುಕ್ಕಚ್ಚೇರಿಯಲ್ಲಿ ನಡೆದ ಝುಬೈರ್ ಎಂಬವರ ಕೊಲೆಯಲ್ಲೂ ಟಾರ್ಗೆಟ್ ಹೆಸರು ತಳುಕು ಹಾಕಿದಾಗ ಇಲಿಯಾಸ್ ನನ್ನು ಯುವ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಲಾಗಿತ್ತು.  ಇದನ್ನೂ ಓದಿ: ದೀಪಕ್ ಬರ್ಬರ ಹತ್ಯೆಗೈದ ನಾಲ್ವರು ಅರೆಸ್ಟ್: ಪೊಲೀಸರ ಮೇಲೆ ತಲ್ವಾರ್ ಬೀಸಿದ್ದ ಆರೋಪಿಗಳು

ಯುವತಿಯರ ಮೂಲಕ ಶ್ರೀಮಂತರನ್ನು ಖೆಡ್ಡಾಕ್ಕೆ ಬೀಳಿಸಿ, ಬ್ಲಾಕ್ ಮೇಲ್ ಮಾಡಿ ಲಕ್ಷಾಂತರ ರುಪಾಯಿಯನ್ನು ದೋಚುವ ಕೆಲಸವನ್ನು ಈ ಟಾರ್ಗೆಟ್ ಗ್ರೂಪ್ ಮಾಡಿದೆ ಎನ್ನುವ ಆರೋಪವಿದೆ. ಅಷ್ಟೇ ಅಲ್ಲದೇ ಈ ಗ್ರೂಪಿನ ಸದಸ್ಯರು ಉಳ್ಳಾಲ ಬೀಚ್ ಗೆ ಬಂದವರನ್ನು ದೋಚಿ ಹಲ್ಲೆ ನಡೆಸುತ್ತಿದ್ದರು. ಒಂದು ವೇಳೆ ದೂರು ನೀಡಿದ್ರೆ ಖಾದರ್ ಅವರ ಜನ ಎಂದು ಪೊಲೀಸರೂ ಸಮ್ಮನಾಗುತ್ತಿದ್ದರು ಎನ್ನುವ ಆರೋಪವನ್ನು ಜನ ಮಾಡುತ್ತಿದ್ದಾರೆ. ಇತ್ತೀಚೆಗೆ ಕಾಟಿಪಳ್ಳದ ಸಫ್ವಾನ್ ಎಂಬ ಯುವಕನನ್ನು ಇದೇ ಟಾರ್ಗೆಟ್ ತಂಡ ಅಪಹರಿಸಿ ಹಣಕ್ಕಾಗಿ ಬೇಡಿಕೆ ಇಟ್ಟು ಕೊನೆಗೆ ಕೊಲೆ ಮಾಡಿ ಚಾರ್ಮಾಡಿ ಘಾಟಿ ಯಿಂದ ಕೆಳಗೆ ಎಸೆದಿತ್ತು.

ಈ ಫೋಟೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಜೊತೆ ಅಶ್ರಫ್ ಕೊಲೆ ಕೇಸ್ ಆರೋಪಿ ಭರತ್ ಕುಂಡೆಲ್ ಕುಳಿತಿರುವ ಫೋಟೋ ವೈರಲ್ ಆಗಿದೆ. ಬಿಸಿ ರೋಡ್‍ನಲ್ಲಿ ಟಿಪ್ಪು ಜಯಂತಿಯಂದು ಅಶ್ರಫ್ ಕೊಲೆ ನಡೆದಿತ್ತು.

Leave a Reply

Your email address will not be published. Required fields are marked *