Tuesday, 24th April 2018

ಟಾಟಾ ಸುಮೋ ಡಿಕ್ಕಿಯಾಗಿ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು- ರಸ್ತೆಯಲ್ಲಿ ಬಾಲಕಿ ಮೃತದೇಹವಿಟ್ಟು ಪೋಷಕರ ಪ್ರತಿಭಟನೆ

ಚಿಕ್ಕಬಳ್ಳಾಪುರ: ಶಾಲೆಗೆ ಹೋಗುತ್ತಿದ್ದಾಗ ಟಾಟಾ ಸುಮೋ ಡಿಕ್ಕಿಯಾಗಿ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬೀರಸಂದ್ರ ಗೇಟ್ ಬಳಿ ನಡೆದಿದೆ.

9ನೇ ತರಗತಿ ಓದುತ್ತಿದ್ದ ಹರ್ಶಿತಾ(14) ಮೃತ ದುರ್ದೈವಿ. ಬಾಲಕಿ ಗ್ರಾಮದಿಂದ ದೊಡ್ಡಬಳ್ಳಾಪುರದ ಶಾಲೆಗೆ ತೆರಳುತ್ತಿದ್ದ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಬೀರಸಂದ್ರ ಗೇಟ್ ಬಳಿ ವೇಗವಾಗಿ ಬಂದ ಟಾಟಾ ಸುಮೋ ಬಾಲಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬಾಲಕಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.

ಗ್ರಾಮಸ್ಥರು ಹಲವು ಬಾರಿ ಗೇಟ್ ಬಳಿ ರಸ್ತೆಯಲ್ಲಿ ಸ್ಪೀಡ್ ಬ್ರೇಕರ್ ಗಳನ್ನ ಅಳವಡಿಸುವಂತೆ ಮನವಿ ಮಾಡಿದ್ದರು. ಆದರೆ ಹೆದ್ದಾರಿ ಪ್ರಾಧಿಕಾರಿ ಅಳವಡಿಸಿಲ್ಲ. ಇದರಿಂದ ಅಪಘಾತಗಳಾಗುತ್ತಿವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಬಾಲಕಿಯ ಮೃತದೇಹವನ್ನು ರಸ್ತೆಯಲ್ಲಿ ಇಟ್ಟು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಒತ್ತಾಯಿಸಿ ಬೀರಸಂದ್ರ ಗೇಟ್ ಬಳಿ ಹೊಸೂರು ದಾಬಸ್‍ಪೇಟೆ ಹೆದ್ದಾರಿ ತಡೆದು ಟಯರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡುತ್ತಿದ್ದಾರೆ.

ಪ್ರತಿಭಟನೆ ಹಿನ್ನೆಲೆಯಲ್ಲಿ ದೇವನಹಳ್ಳಿ ದೊಡ್ಡಬಳ್ಳಾಪುರ ರಸ್ತೆಯಲ್ಲಿ ಕಳೆದ ಒಂದು ಗಂಟೆಯಿಂದ ಟ್ರಾಫಿಕ್ ಜಾಮ್ ಆಗಿದೆ. ಕಿಲೋಮೀಟರ್ ಗಟ್ಟಲೆ ಸಾಲುಗಟ್ಟಿ ವಾಹನಗಳು ನಿಂತಿದ್ದು, ವಿಶ್ವನಾಥಪುರ ಪೊಲೀಸರಿಂದ ಪ್ರತಿಭಟನಾಕಾರರ ಮನವೊಲಿಕೆ ಯತ್ನ ನಡೆಯುತ್ತಿದೆ.

ಘಟನೆ ನಡೆದ ಸ್ಥಳಕ್ಕೆ ವಿಶ್ವನಾಥಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *