Thursday, 21st June 2018

Recent News

ಖ್ಯಾತ ಭೌತವಿಜ್ಞಾನಿ ಸ್ಟೀಫನ್ ಹಾಕಿಂಗ್ ಇನ್ನಿಲ್ಲ

ಲಂಡನ್: ಖ್ಯಾತ ಬ್ರಿಟಿಷ್ ಭೌತಶಾಸ್ತ್ರ ವಿಜ್ಞಾನಿ ಸ್ಟೀಫನ್ ಹಾಕಿಂಗ್ ವಿಧಿವಶರಾಗಿದ್ದಾರೆ.

ಇಂಗ್ಲೆಂಡಿನ ಕೇಂಬ್ರಿಡ್ಜ್ ನಲ್ಲಿರೋ ತನ್ನ ಮನೆಯಲ್ಲಿ ಹಾಕಿಂಗ್ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಹಾಕಿಂಗ್ ಅವರಿಗೆ 76 ವರ್ಷ ವಯಸ್ಸಾಗಿತ್ತು.

ಹಾಕಿಂಗ್ ಅವರ ಮಕ್ಕಳಾದ ಲೂಸಿ, ರಾಬರ್ಟ್ ಹಾಗೂ ಟಿಮ್ ಈ ಬಗ್ಗೆ ಹೇಳಿಕೆ ನೀಡಿದ್ದು, ನಮ್ಮ ಪ್ರೀತಿಯ ತಂದೆ ನಿಧನರಾಗಿರುವುದಕ್ಕೆ ನಮಗೆ ತುಂಬಾ ದುಃಖವಾಗಿದೆ. ಅವರೊಬ್ಬ ಮಹಾನ್ ವಿಜ್ಞಾನಿ ಹಾಗೂ ಅಸಾಮಾನ್ಯ ವ್ಯಕ್ತಿಯಾಗಿದ್ದರು. ಅವರ ಕಾರ್ಯಗಳು ಮುಂದಿನ ಅನೇಕ ವರ್ಷಗಳವರೆಗೆ ಜೀವಂತವಾಗಿರುತ್ತದೆ. ಅವರ ಧೈರ್ಯ ಹಾಗೂ ಪ್ರತಿಭೆ ಜಗತ್ತಿನಾದ್ಯಂತ ಅನೇಕರಿಗೆ ಸ್ಫೂರ್ತಿಯಾಗಿದೆ ಎಂದು ಹೇಳಿದ್ದಾರೆ.

ಸ್ಟೀಫನ್ ಹಾಕಿಂಗ್ ಅವರ ಕೊಡುಗೆಗಳೆಂದರೆ ಕಪ್ಪು ರಂಧ್ರಗಳು ವಿಕಿರಣಗಳನ್ನ ಹೊರಸೂಸುತ್ತವೆಂಬ ಹಾಕಿಂಗ್ ಅವರ ಸೈದ್ಧಾಂತಿಕ ಭವಿಷ್ಯ, ಅದನ್ನು ಹಾಕಿಂಗ್ ರೇಡಿಯೇಷನ್ ಎಂದೇ ಕರೆಯಲಾಗುತ್ತದೆ. ಹಾಗೂ ಕಾಸ್ಮೋಲಜಿ ಬಗ್ಗೆ ಸಿದ್ಧಾಂತ ಹೊರಡಿಸಿದ ಮೊದಲಿಗರು ಹಾಕಿಂಗ್. ಹಾಕಿಂಗ್ ಅವರ ‘ಎ ಬ್ರೀಫ್ ಹಿಸ್ಟರಿ ಆಫ್ ಟೈಮ್’ ಪುಸ್ತಕ ಬ್ರಿಟಿಷ್ ಸಂಡೇ ಟೈಮ್ಸ್ ನ ಬೆಸ್ಟ್ ಸೆಲ್ಲರ್ ಪಟ್ಟಿಯಲ್ಲಿ ದಾಖಲೆಯ 237 ವಾರಗಳವರೆಗೆ(4 ವರ್ಷಗಳವರೆಗೆ) ಇತ್ತು. 20 ವರ್ಷಗಳಲ್ಲಿ ಅವರ ಪುಸ್ತಕದ 1 ಕೋಟಿಗೂ ಹೆಚ್ಚು ಪ್ರತಿಗಳು ಮಾರಾಟವಾಗಿದ್ದವು.

ನಿಧಾನ ಗತಿಯ ಅಮ್ಯೋಟ್ರಾಫಿಕ್ ಲ್ಯಾಟೆರಲ್ ಸ್ಕ್ಲೆರೋಸಿಸ್ ನಿಂದಾಗಿ ಸ್ಟೀಫನ್ ಹಾಕಿಂಗ್ ಪಾರ್ಶ್ವವಾಯುವಿಗೆ ತುತ್ತಾಗಿದ್ದರು.

Leave a Reply

Your email address will not be published. Required fields are marked *