Monday, 28th May 2018

ಐಪಿಎಲ್ ಪ್ರಸಾರದ ಹಕ್ಕು ಸ್ಟಾರ್ ಇಂಡಿಯಾ ಪಾಲು: ಎಷ್ಟು ಕೋಟಿ ಬಿಡ್? ಇನ್ನು ಮುಂದೆ 1 ಪಂದ್ಯದ ಟಿವಿ ಶುಲ್ಕ ಎಷ್ಟು ಗೊತ್ತಾ?

ಮುಂಬೈ: 2018ರಿಂದ 2022ರವರೆಗಿನ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಜಾಗತಿಕ ಪ್ರಸಾರದ ಹಕ್ಕನ್ನು ಸ್ಟಾರ್ ಇಂಡಿಯಾ ಪಡೆದುಕೊಂಡಿದೆ.

ಸೋಮವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ 16,347 ಕೋಟಿ ರೂ. ನೀಡಿ ಟಿವಿ ಮತ್ತು ಡಿಜಿಟಲ್ ಮೀಡಿಯಾದ ಹಕ್ಕನ್ನು ಸ್ಟಾರ್ ಇಂಡಿಯಾ ಪಡೆದುಕೊಂಡಿದೆ.

ಭಾರತದಲ್ಲಿ ಪ್ರಸಾರದ ಹಕ್ಕಿಗಾಗಿ ಸೋನಿ ಪಿಕ್ಚರ್ಚ್ 11,050 ಕೋಟಿ ರೂ. ಹಣವನ್ನು ಬಿಡ್ ಮಾಡಿದ್ದರೆ ಸ್ಟಾರ್ ಇಂಡಿಯಾ 6196.94 ಕೋಟಿ ರೂ. ಹಣವನ್ನು ಭಾರತದ ಪ್ರಸಾರಕ್ಕೆ ಬಿಡ್ ಮಾಡಿತ್ತು. ಆದರೆ ಸೋನಿ ಪಿಕ್ಚರ್ಸ್ ಇತರ ಹಕ್ಕು ಗಳಿಗೆ ಬಿಡ್ ಮಾಡದ ಕಾರಣ ಅಂತಿಮವಾಗಿ ಐಪಿಎಲ್ ಪ್ರಸಾರದ ಹಕ್ಕನ್ನು ಸ್ಟಾರ್ ಇಂಡಿಯಾ ಪಡೆದುಕೊಂಡಿತು.

ಈ ಬಿಡ್ ಪ್ರಕ್ರಿಯೆಯಲ್ಲಿ ಯುಪ್ ಟಿವಿ, ಗಲ್ಫ್ ಡಿಟಿಎಚ್ ಒಎಸ್‍ಎನ್, ಪರ್‍ಫಾರ್ಮ್ ಮೀಡಿಯಾ, ಏರ್‍ಟೆಲ್, ರಿಲಯನ್ಸ್ ಜಿಯೋ, ಟೈಮ್ಸ್ ಇಂಟರ್ ನೆಟ್, ಫೇಸ್‍ಬುಕ್, ಅಮೆಜಾನ್, ಇಎಸ್‍ಪಿಎನ್ ಡಿಜಿಟಲ್ ಮೀಡಿಯಾಗಳು ಭಾಗವಹಿಸಿತ್ತು.

ಭಾರತದಲ್ಲಿ ಡಿಜಿಟಲ್ ಪ್ರಸಾರದ ಹಕ್ಕಿಗೆ ಏರ್‍ಟೆಲ್, ರಿಲಯನ್ಸ್ ಜಿಯೋ, ಟೈಮ್ಸ್ ಇಂಟರ್ ನೆಟ್, ಫೇಸ್‍ಬುಕ್ ಬಿಡ್ ಮಾಡಿತ್ತು.

ಹಕ್ಕು ಇಷ್ಟೊಂದು ಮೊತ್ತಕ್ಕೆ ಹರಾಜು ಆದ ಕಾರಣ ಐಪಿಎಲ್ ಪ್ರತಿ ಪಂದ್ಯದ ಟಿವಿ ಶುಲ್ಕ 2018ರಿಂದ ಹೆಚ್ಚಾಗಲಿದೆ. ಈ ಹಿಂದೆ ಒಂದು ಪಂದ್ಯಕ್ಕೆ  15 ಕೋಟಿ ರೂ. ಆಗಿದ್ದರೆ, ಇನ್ನು ಮುಂದೆ ಈ ಮೌಲ್ಯ ಮೂರು ಪಟ್ಟು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಈಗ ಭಾರತದ ಒಂದು ಏಕದಿನ ಪಂದ್ಯಕ್ಕೆ ಟಿವಿ ಶುಲ್ಕ 45 ಕೋಟಿ ರೂ. ಇದ್ದರೆ, ಐಪಿಎಲ್ ನಲ್ಲಿ 55 ಕೋಟಿ ರೂ.ಗೆ ಏರಿಕೆಯಾಗಬಹುದು ಎಂದು ಕ್ರಿಕೆಟ್ ಸಂಖ್ಯಾಶಾಸ್ತ್ರಜ್ಞ ಮೋಹನ್ ದಾಸ್ ಮೆನನ್ ಹೇಳಿದ್ದಾರೆ.

2008ರಲ್ಲಿ ಸೋನಿ ಪಿಕ್ಚರ್ಸ್ ನೆಟ್ ವರ್ಕ್ ಐಪಿಎಲ್ ಬಿಡ್ ಗೆದ್ದುಕೊಂಡಿತ್ತು. ಇದು 10 ವರ್ಷ ಅವಧಿಯದ್ದಾಗಿದ್ದು, ಒಟ್ಟು 8200 ಕೋಟಿ ರೂ. ನೀಡಿ ಬಿಡ್ ಗೆದ್ದಿತ್ತು. ಮೂರು ವರ್ಷ ಐಪಿಎಲ್ ಡಿಜಿಟಲ್ ಹಕ್ಕನ್ನು ನೋವಿ ಡಿಜಿಟಲ್ 2015 ರಲ್ಲಿ 302.2 ಕೋಟಿ ರೂ. ನೀಡಿ ಪಡೆದುಕೊಂಡಿತ್ತು.

ಬೇರೆ ದೇಶಗಳಿಗೆ ನಡೆಯುವ ಕೂಟಗಳಿಗೆ ಹೋಲಿಕೆ ಮಾಡಿದರೆ ಐಪಿಎಲ್ ಬಿಡ್ ಕಡಿಮೆ ಇದ್ದು, ಅಮೆರಿಕದಲ್ಲಿ ನಡೆಯುತ್ತಿರುವ ನ್ಯಾಷನಲ್ ಫುಟ್‍ಬಾಲ್ ಲೀಗ್(ಎನ್‍ಎಫ್‍ಎಲ್)  ಒಂದು ವರ್ಷಕ್ಕೆ 6 ಶತಕೋಟಿ ಡಾಲರ್(ಅಂದಾಜು 38,442 ಸಾವಿರ ಕೋಟಿ ರೂ.) ಬಿಡ್ ಆಗುತ್ತಿದೆ.

ಇದನ್ನೂ ಓದಿ: ಐಪಿಎಲ್‍ನ ಜಸ್ಟ್ 10 ಸೆಕೆಂಡ್ ಜಾಹಿರಾತಿಗೆ ಎಷ್ಟು ಹಣ? ನಗದು ಬಹುಮಾನ ಎಷ್ಟು?

 

Leave a Reply

Your email address will not be published. Required fields are marked *