Friday, 22nd June 2018

Recent News

ನಾನು ಕಂಪೋಸ್ ಮಾಡಿದ ಹಾಡನ್ನು ಹಾಡದಂತೆ ಎಸ್‍ಪಿಬಿಗೆ ಇಳಯರಾಜ ನೋಟಿಸ್

ಚೆನ್ನೈ: ಭಾರತ ಸಂಗೀತ ಪ್ರಿಯರ ಮನಗೆದ್ದಿರೋ ಇಬ್ಬರು ದಿಗ್ಗಜರ ನಡುವೆ ಕಾಪಿ ರೈಟ್ಸ್ ವಿಚಾರದ ಬಗ್ಗೆ ಜಟಾಪಟಿ ಶುರುವಾಗಿದೆ. 40 ಸಾವಿರಕ್ಕೂ ಹೆಚ್ಚಿನ ಹಾಡುಗಳಿಗೆ ಕಂಠದಾನ ಮಾಡಿರೋ ಎಸ್.ಪಿ ಬಾಲಸುಬ್ರಮಣ್ಯಂ, ಗಾಯಕಿ ಚಿತ್ರಾ ಹಾಗು ಎಸ್‍ಪಿಬಿ ಪುತ್ರ ಚರಣ್‍ಗೆ ಸಂಗೀತ ನಿರ್ದೇಶಕ ಇಳಯರಾಜ ನೋಟಿಸ್ ಕೊಟ್ಟಿದ್ದಾರೆ.

ನಾನು ಟ್ಯೂನ್ ಕಂಪೋಸ್ ಮಾಡಿರೋ ಹಾಡುಗಳನ್ನ ನನ್ನ ಒಪ್ಪಿಗೆ ಇಲ್ಲದೇ ಹಾಡಬೇಡಿ. ಒಂದು ವೇಳೆ ಹಾಡಿದ್ರೆ ಕಾನೂನು ಮೊರೆ ಹೋಗಿ ದಂಡ ವಿಧಿಸೋದಾಗಿ ಇಳಯರಾಜ ನೋಟಿಸ್ ಕಳುಹಿಸಿದ್ದಾರೆ. ಇಳಯರಾಜ ಅವರ ಈ ನೋಟಿಸ್ ರಷ್ಯಾ, ಮಲೇಶಿಯಾ, ಶ್ರೀಲಂಕಾ, ದುಬೈ ಸೇರಿದಂತೆ ಹಲವು ದೇಶಗಳಲ್ಲಿ ಸಂಗೀತ ಕಾರ್ಯಕ್ರಮ ಮಾಡಲು ಸಜ್ಜಾಗಿರೋ ಎಸ್‍ಪಿಬಿ ಅಂಡ್ ಟೀಮ್‍ಗೆ ಶಾಕ್ ಕೊಟ್ಟಿದೆ.

ನೋಟಿಸ್ ನೀಡಿರುವ ವಿಚಾರವನ್ನು ಎಸ್‍ಪಿ ಬಾಲಸುಬ್ರಮಣ್ಯಂ ಅವರು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದು, ಮುಂದಿನ ಕಾರ್ಯಕ್ರಮದಲ್ಲಿ ಇಳಯರಾಜ ಅವರು ಸಂಗೀತ ನೀಡಿರುವ ಹಾಡನ್ನು ಹಾಡುವುದಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಈ ವಿಚಾರದ ಬಗ್ಗೆ ಹೆಚ್ಚಿನ ಚರ್ಚೆ ಮಾಡಬೇಡಿ. ಭಾರತಕ್ಕೆ ಬಂದ ಬಳಿಕ ಮಾತನಾಡುವುದಾಗಿ ಬರೆದುಕೊಂಡಿದ್ದಾರೆ.

ಸಂಗೀತ ನಿರ್ದೇಶಕ ಒಂದು ಹಾಡನ್ನ ಸೃಷ್ಠಿ ಮಾಡಿದ್ರೆ ಸಿಗೋದು ಒಂದೇ ಸಂಭಾವನೆ. ಆದರೆ ಗಾಯಕ ಈ ಹಾಡನ್ನು ಕಾರ್ಯಕ್ರಮಗಳಲ್ಲಿ ಪದೇ ಪದೇ ಹಾಡಿ ದುಡ್ಡು ಮಾಡ್ತಾರೆ. ಹಾಗಾಗಿ ಗಾಯಕರು ಹಾಡೋ ಹಾಡನ್ನು ಸೃಷ್ಠಿ ಮಾಡಿದ ಸಂಗೀತ ನಿರ್ದೇಶಕನಿಗೂ ಗೌರವ ಧನ ಸಿಗ್ಬೇಕು ಎನ್ನುವುದು ಇಳಯರಾಜ ವಾದ.

ಎಸ್‍ಪಿಬಿ ಮತ್ತು ಇಳಯರಾಜ ಸ್ನೇಹಿತರಾಗಿದ್ದು, ಕಾರ್ಯಕ್ರಮದಲ್ಲಿ ಇಳಯರಾಜರಿಂದ ನಾನು ಮೇಲೆ ಬಂದಿದ್ದೇನೆ ಎಂದು ಎಸ್‍ಪಿಬಿ ಹೇಳಿಕೊಂಡಿದ್ದರು.

ಇದು ಮೊದಲಲ್ಲ: 2015ರಲ್ಲಿ ಐದು ಸಂಗೀತ ಕಂಪೆನಿ ಮತ್ತು ರೇಡಿಯೋಗಳ ವಿರುದ್ಧ ಇದೇ ರೀತಿಯಲ್ಲಿ ಇಳಯರಾಜ ಮನವಿ ಮಾಡಿಕೊಂಡಿದ್ದರು. ಮದ್ರಾಸ್ ಹೈ ಕೋರ್ಟ್ ಇಳಯರಾಜ ಅನುಮತಿ ಇಲ್ಲದೆ ಅವರ ರಾಗ ಸಂಯೋಜನೆ ಮಾಡಿದ ಹಾಡುಗಳನ್ನು ಮಾರಾಟ ಮಾಡದಂತೆ ಐದು ಕಂಪೆನಿಗಳಿಗೆ ಸೂಚಿಸಿತ್ತು.

Leave a Reply

Your email address will not be published. Required fields are marked *