ನಟಿ ಶೃತಿ ಹಾಸನ್‍ಗೆ ಅವಹೇಳನಕಾರಿ ಸಂದೇಶ ಕಳಿಸಿದ ಹಾಸನದ ವೈದ್ಯನ ವಿರುದ್ಧ ದೂರು


ಚೆನ್ನೈ: ಕರ್ನಾಟಕ ಮೂಲದ ವೈದ್ಯರೊಬ್ಬರು ಅವಹೇಳನಕಾರಿ ಸಂದೇಶ ಕಳಿಸುತ್ತಿದ್ದಾರೆ ಹಾಗೂ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಖ್ಯಾತ ನಟಿ, ಕಮಲ ಹಾಸನ್ ಪುತ್ರಿ ಶೃತಿ ಹಾಸನ್ ಚೆನ್ನೈನ ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ.

ಶೃತಿ ಹಾಸನ್ ಪರವಾಗಿ ಅವರ ಏಜೆಂಟ್ ಪ್ರವೀಣ್ ಆಂಟನಿ ಚೆನ್ನೈ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಸೈಬರ್ ಸೆಲ್‍ಗೆ 2 ಪುಟಗಳ ದೂರು ನೀಡಿದ್ದಾರೆ. ದೂರಿನ ಜೊತೆಗೆ ಶೃತಿ ಹಾಸನ್ ಅವರು ತಮಗೆ ಟ್ವಿಟ್ಟರ್‍ನಲ್ಲಿ ಬಂದ ಬೆದರಿಕೆಯ ಸ್ಕ್ರೀನ್ ಶಾಟ್ ಚಿತ್ರಗಳನ್ನೂ ಲಗತ್ತಿಸಿದ್ದಾರೆ.

ನನ್ನ ಟ್ವಿಟ್ಟರ್ ಖಾತೆಗೆ ಕಳೆದ ಸೆ.7ರಿಂದ ಡಾ.ಕೆ.ಜಿ.ಗುರುಪ್ರಸಾದ್ ಎಂಬವರು ಅಸಭ್ಯ ಮೆಸೇಜ್‍ಗಳನ್ನು ಟ್ವಿಟ್ಟರ್ ಡೈರೆಕ್ಟ್ ಮೆಸೇಜ್ ಮೂಲಕ ಕಳಿಸುತ್ತಿದ್ದಾರೆ. ಅಲ್ಲದೆ ನನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಒಂದು ವೇಳೆ ನಾನು ಆ ವ್ಯಕ್ತಿಯ ಹತ್ತಿರ ಎಲ್ಲಾದರೂ ಸಿಕ್ಕಿದರೆ ನನ್ನನ್ನು ಇರಿದು ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಶೃತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದೂರಿನಲ್ಲಿ ಡಾ.ಕೆ.ಜಿ ಗುರುಪ್ರಸಾದ್ ಅವರ ಇಮೇಲ್ ಐಡಿ ಹಾಗೂ ಮೊಬೈಲ್ ನಂಬರ್ ನೀಡಿದ್ದಾರೆ. ಈ ವೈದ್ಯ ಹಾಸನದಲ್ಲಿರುವ ಹಾಸನ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‍ನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಆರಂಭದಲ್ಲಿ ಶೃತಿ ಖುದ್ದು ದೂರು ನೀಡಲು ನಿರ್ಧರಿಸಿದ್ದರು. ಆದರೆ ಬಳಿಕ ಮಾಧ್ಯಮಗಳ ಕಣ್ತಪ್ಪಿಸಲು ಏಜೆಂಟ್ ಮೂಲಕ ದೂರು ನೀಡಿದ್ದಾರೆ ಎನ್ನಲಾಗಿದೆ. ದೂರು ದಾಖಲಿಸುವ ಒಂದು ತಿಂಗಳು ಮುನ್ನವೇ ಶೃತಿ ಆಪ್ತರು ಸೈಬರ್ ಕ್ರೈಂ ವಿಭಾಗದ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದ್ದರು. ಈ ವೇಳೆ ಆ ಅಧಿಕಾರಿ ದೂರು ನೀಡುವಂತೆ ಸಲಹೆ ನೀಡಿದ್ದರು ಎನ್ನಲಾಗಿದೆ. ಇದಾದ ಬಳಿಕ ಶೃತಿ ಚೆನ್ನೈನಲ್ಲಿರಲಿಲ್ಲ. ಹೀಗಾಗಿ ಬುಧವಾರ ಈ ಪ್ರಕರಣ ದಾಖಲಾಗಿದೆ.

 

loading...

LEAVE A REPLY