Wednesday, 20th June 2018

Recent News

ನವೆಂಬರ್ ನಿಂದ ಏಪ್ರಿಲ್ ವರೆಗೆ ಶಿರಾಡಿ ಘಾಟಿ ರಸ್ತೆ ಬಂದ್

ಮಂಗಳೂರು: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ನಡೆಸಲು ಸಿದ್ಧತೆ ನಡೆಲಾಗಿದೆ. ಈ ಕುರಿತು ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಲಯ ಮಾಹಿತಿಯನ್ನು ನೀಡಿದ್ದು, ನವೆಂಬರ್ ವೇಳೆಗೆ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದೆ.

 

ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಕೆಂಪುಹೊಳೆ ಸೇತುವೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಅಡ್ಡಹೊಳೆ ಸೇತುವೆ ತನಕ 12.38 ಕಿ.ಮೀ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾರ್ಯ ನಡೆಯಬೇಕಾಗಿದ್ದು, ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಈ ಯೋಜನೆಗೆ ಕೇಂದ್ರ ಭೂಸಾರಿಗೆ ಸಚಿವಾಲಯದಿಂದ ಆರ್ಥಿಕ ಅನುಮೋದನೆ ದೊರೆಯಬೇಕಿದ್ದು, ಮುಂದಿನ ವಾರ ಅನುಮೋದನೆ ದೊರೆಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಂಕ್ರೀಟ್ ರಸ್ತೆ ನಿರ್ಮಾಣದ ಕೆಲಸ ಆರಂಭಿಸುವ ಮುನ್ನ ನಿರ್ಮಾಣೆ ಬೇಕಾದ ಜಲ್ಲಿ ಕಲ್ಲು, ಕಬ್ಬಿಣ, ಸಿಮೆಂಟ್ ದಾಸ್ತಾನು ಮಾಡಿಕೊಳ್ಳಲಾಗುವುದು, ಈ ಕೆಲಸಕ್ಕೆ ಮಳೆ ಅಡ್ಡಿಯಾಗುವುದಿಲ್ಲ. ಹೀಗಾಗಿ ಅಗತ್ಯಕ್ಕೆ ತಕ್ಕಷ್ಟು ಕಚ್ಚಾ ಸಾಮಗ್ರಿಗಳನ್ನು ದಾಸ್ತಾನು ಮಾಡಿಕೊಳ್ಳಲಾಗುತ್ತದೆ. ಮಳೆ ಸಂಪೂರ್ಣ ನಿಂತ ಬಳಿಕ ನವೆಂಬರ್ ನಲ್ಲಿ ಕಾಂಕ್ರೀಟ್ ಕಾಮಗಾರಿ ಆರಂಭವಾಗಲಿದೆ ಎಂದು ಆಶ್ವಾಸನೆಯನ್ನು ನೀಡಿದರು.

ಮುಂದಿನ ಮಳೆಗಾಲ ಆರಂಭಕ್ಕೂ ಮುನ್ನ ಅಂದರೆ, ಏಪ್ರಿಲ್ ವೇಳೆಗೆ ಕಾಮಗಾರಿ ಮುಗಿಸಬೇಕೆಂಬ ಷರತ್ತು ವಿಧಿಸಲಾಗಿದ್ದು, ಗುತ್ತಿಗೆದಾರರಿಗೆ ಕಾರ್ಯಆರಂಭಿಸಲು ಆದೇಶವನ್ನು ನೀಡಲಾಗಿದೆ. ಅಲ್ಲದೇ ಕಾಂಕ್ರೀಂಟ್ ರಸ್ತೆ ನಿರ್ಮಾಣ ನಡೆಯುವ ಸಂದರ್ಭದಲ್ಲಿ ಈ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗುವುದು ಎಂದು ತಿಳಿಸಿದರು. 2015ರಲ್ಲಿ ನಡೆದ ರಸ್ತೆ ಕಾಮಗಾರಿ ವೇಳೆ ಶಿರಾಡಿ ಘಾಟಿಯಲ್ಲಿ ಏಳು ತಿಂಗಳು ವಾಹನ ಸಂಚಾರ ಬಂದ್ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಏಳು ಪರ್ಯಾಯ ಮಾರ್ಗಗಳಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು ಎಂದರು.

ಶಿರಾಡಿ ಘಾಟಿಯಲ್ಲಿ ಪದೇ ಪದೇ ರಸ್ತೆ ಹಾಳಾಗುತ್ತಿರುವ ಕಾರಣ ಶಾಶ್ವತ ಪರಿಹಾರಕ್ಕಾಗಿ 26 ಕಿ.ಮೀ.ನಲ್ಲೂ ಕಾಂಕ್ರೀಟ್ ರಸ್ತೆ ನಿರ್ಮಿಸಲು ಇಲಾಖೆ ಈ ಯೋಜನೆ ರೂಪಿಸಿದೆ. ಇದರಲ್ಲಿ 13.62 ಕಿ.ಮೀ. ರಸ್ತೆಗೆ 2015ರಲ್ಲೇ ಕಾಂಕ್ರೀಟ್ ಹಾಕಲಾಗಿದೆ. ಹಾಸನದಿಂದ ಬಿ.ಸಿ.ರೋಡ್‍ವರೆಗಿನ 140 ಕಿ.ಮೀ., ಹೆಗ್ಗದ್ದೆಯಿಂದ ಅಡ್ಡಹೊಳೆವರೆಗಿನ 26 ಕಿ.ಮೀ. ರಸ್ತೆ ಮಾತ್ರ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ ಉಳಿದಿದೆ. ಉಳಿದ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸುತ್ತಿದೆ ಎಂದು ವಿವರಿಸಿದರು.

ಕಳೆದ ವರ್ಷ ಇದೇ ಕಾಮಗಾರಿಗೆ ಜಿ.ವಿ.ಆರ್. ಇನ್‍ಫ್ರಾ ಪ್ರಾಜೆಕ್ಟ್ ಪ್ರೈವೆಟ್ ಲಿಮಿಟೆಡ್ ಕಂಪೆನಿಗೆ ನೀಡಿದ್ದ ಗುತ್ತಿಗೆಯನ್ನು ಸಕಾಲಕ್ಕೆ ಕಾಮಗಾರಿ ಆರಂಭಿಸದ ಕಾರಣ ರದ್ದುಪಡಿಸಲಾಗಿತ್ತು. ಟೆಂಡರ್ ರದ್ದಾತಿ ಕುರಿತು ಗುತ್ತಿಗೆದರಾರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯವು ಇಲಾಖೆ ಪರವಾಗಿ ಆದೇಶ ನೀಡಿದ ಬಳಿಕ ಮರು ಟೆಂಡರ್ ಪ್ರಕ್ರಿಯೇ ಆರಂಭಿಸಲಾಗಿದೆ. ಈ ಬಾರಿ ಕಾಮಗಾರಿ ವಿಳಂಬವಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *