Recent News

ಸೋಲಿನ ಸುಳಿಯಲ್ಲಿ ಕರ್ನಾಟಕ – 5 ವಿಕೆಟ್ ಕಿತ್ತ ಉನದ್ಕತ್

ರಾಜ್‍ಕೋಟ್: ನಾಕೌಟ್ ಹಂತಕ್ಕೇರುವ ಕನಸ್ಸಿನಲ್ಲಿದ್ದ ಕರ್ನಾಟಕ ತಂಡ ಸೋಲಿನ ಸುಳಿಗೆ ಸಿಲುಕಿದೆ. ರಾಜ್ ಕೋಟ್ ನಲ್ಲಿ ಸೌರಾಷ್ಟ್ರದ ವಿರುದ್ಧ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ಹೀನಾಯ ಪ್ರದರ್ಶನ ತೋರಿ ಸೋಲಿನ ಅಂಚಿಗೆ ತಲುಪಿದೆ.

ಭಾನುವಾರ 13 ರನ್ ಗೆ ಒಂದು ವಿಕೆಟ್ ಕಳೆದುಕೊಂಡು ಇಂದು 3ನೇ ದಿನದ ಆಟ ಪ್ರಾರಂಭ ಮಾಡಿದ ಕರ್ನಾಟಕದ ಬ್ಯಾಟ್ಸ್ ಮನ್ ಗಳು ಸೌರಾಷ್ಟ್ರದ ಬೌಲರ್ ಗಳ ಎದುರು ರನ್ ಹೊಡೆಯಲು ಪರದಾಡಿದರು. ಆರ್. ಸಮರ್ಥ್ ಮತ್ತು ಪ್ರವೀಣ್ ದುಬೆ ಉತ್ತಮ ಪ್ರದರ್ಶನದ ಹೊರತಾಗಿಯೂ ಫಾಲೋ ಆನ್ ಗೆ ಸಿಲುಕಿತು. ಮೊದಲ ಇನ್ನಿಂಗ್ಸ್ ನಲ್ಲಿ 171 ರನ್  ಗಳಿಗೆ ಆಲೌಟ್  ಆಗಿ ಫಾಲೋ ಆನ್ ಪಡೆಯಿತು.

ಕರ್ನಾಟಕಕ್ಕೆ ಆರ್.ಸಮರ್ಥ್ 63 ರನ್(174 ಎಸೆತ, 8 ಬೌಂಡರಿ) ಮತ್ತು ಪ್ರವೀಣ್ ದುಬೆ ಔಟಾಗದೆ 46 ರನ್(106 ಎಸೆತ, 5 ಬೌಂಡರಿ, 1 ಸಿಕ್ಸರ್) ತಂಡಕ್ಕೆ ಆಸರೆಯಾದರು. ಸೌರಾಷ್ಟ್ರದ ಪರ ಜಯದೇವ್ ಉನದ್ಕತ್ 49 ರನ್ ನೀಡಿ 5 ವಿಕೆಟ್ ಪಡೆದು ಕರ್ನಾಟಕ ಬ್ಯಾಟ್ಸ್ ಮನ್ ಗಳನ್ನು ಕಟ್ಟಿ ಹಾಕಿದರು.

410 ರನ್‍ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಪ್ರಾರಂಭ ಮಾಡಿರುವ ಕರ್ನಾಟಕ ಎಚ್ಚರಿಕೆಯ ಆಟವಾಡುತ್ತಿದೆ. 3ನೇ ದಿನದಾಟದ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲದೆ 30 ರನ್ ಗಳಿಸಿದೆ. ಸಮರ್ಥ್ 14 ರನ್ ಹಾಗೂ ರೋಹನ್ ಕದಂ 16 ರನ್ ಗಳಿಸಿ 4ನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ. ಕರ್ನಾಟಕ 380 ರನ್ ಗಳ ಹಿನ್ನಡೆ ಅನುಭವಿಸಿದೆ. ಇನ್ನೊಂದು ದಿನ ಆಟ ಬಾಕಿ ಇದ್ದು ಕರ್ನಾಟಕ ಡ್ರಾ ಮಾಡಿಕೊಳ್ಳಲು ಸಾಹಸ ಪಡಬೇಕಿದೆ.

ಸ್ಕೋರ್ ವಿವರ
ಸೌರಾಷ್ಟ್ರ ಮೊದಲ ಇನ್ನಿಂಗ್ಸ್ – 581/7 ಡಿಕ್ಲೇರ್
ಕರ್ನಾಟಕ ಮೊದಲ ಇನ್ನಿಂಗ್ಸ್ – 171 ಆಲೌಟ್
ಕರ್ನಾಟಕ 2ನೇ ಇನ್ನಿಂಗ್ಸ್ – 30/0

Leave a Reply

Your email address will not be published. Required fields are marked *