Recent News

ಸಂಕ್ರಾಂತಿ ಸ್ಪೆಷಲ್- ಮಾರುಕಟ್ಟೆಗೆ ಲಗ್ಗೆಯಿಟ್ಟ ಕಪ್ಪುಕಬ್ಬು

– ಕೇರಳ, ತಮಿಳುನಾಡು, ಗುಜರಾತಿಗೂ ರಫ್ತು

ರಾಮನಗರ: ಹೊಸ ವರ್ಷದ ಆರಂಭದ ಮೊದಲ ಹಬ್ಬವೇ ಸಂಕ್ರಾಂತಿ. ದೇಶದಾದ್ಯಂತ ಅನೇಕ ರೀತಿಯಲ್ಲಿ ಆಚರಣೆ ಮಾಡುತ್ತಾರೆ. ಆದರೆ ಸಂಕ್ರಾಂತಿ ಆಚರಣೆಗೆ ಎಳ್ಳು, ಬೆಲ್ಲ, ಕೊಬ್ಬರಿ ಜೊತೆಗೆ ಕಪ್ಪು ಕಬ್ಬು ಇರಲೇ ಬೇಕು. ಹಾಗಾಗಿ ಈ ಕಪ್ಪುಕಬ್ಬಿಗೆ ಮಾರುಕಟ್ಟೆಯಲ್ಲಿ ಎಲ್ಲಿಲ್ಲದ ಡಿಮ್ಯಾಂಡ್ ಇದೆ. ಅದರಲ್ಲೂ ಚನ್ನಪಟ್ಟಣದ ಪಟ್ಲು ಗ್ರಾಮದ ಕಬ್ಬು ಅಂದರೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಸಂಕ್ರಾಂತಿಯ ವಿಶೇಷ ಕಬ್ಬು ಇದೀಗ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಗ್ರಾಹಕರು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ.

ಜಿಲ್ಲೆಯ ಚನ್ನಪಟ್ಟಣ ಕೇವಲ ಬೊಂಬೆಗಳ ಖ್ಯಾತಿಗಷ್ಟೇ ಸೀಮಿತವಾಗಿಲ್ಲ. ಸಂಕ್ರಾಂತಿಯ ಹಬ್ಬಕ್ಕೆಂದು ವಿಶೇಷವಾದ ಕಪ್ಪುಕಬ್ಬನ್ನು ಬೆಳೆಯುವ ವಿಶೇಷತೆ ಕೂಡ ಪಡೆದಿದೆ. ಚನ್ನಪಟ್ಟಣ ತಾಲೂಕಿನ ಪಟ್ಲು ಗ್ರಾಮ ರಾಮನಗರ ಜಿಲ್ಲೆಯಲ್ಲಿಯೇ ಕಪ್ಪುಕಬ್ಬನ್ನು ಬೆಳೆಯುವ ಏಕೈಕ ಗ್ರಾಮವಾಗಿದೆ. ಈ ಕಪ್ಪುಕಬ್ಬಿಗೆ ರಾಜ್ಯದ ದೊಡ್ಡ ನಗರಗಳಲ್ಲದೇ ನೆರೆಯ ಕೇರಳ, ತಮಿಳುನಾಡು, ಗುಜರಾತ್ ರಾಜ್ಯಗಳಿಗೂ ಇಲ್ಲಿನ ಕಬ್ಬು ರಫ್ತಾಗುತ್ತದೆ. ಜೊತೆಗೆ ಬೆಂಗಳೂರಿನ ಜನತೆ ಕೂಡ ಕಪ್ಪು ಕಬ್ಬಿಗೆ ಮಾರು ಹೋಗಿದ್ದು ಮಾರುಕಟ್ಟೆಯಲ್ಲಿ ಕಪ್ಪುಕಬ್ಬನ್ನೇ ಕೊಂಡುಕೊಳ್ಳುತ್ತಿದ್ದಾರೆ.

ಈ ವರ್ಷ ಪಟ್ಲು ಗ್ರಾಮವೊಂದರಲ್ಲೇ ಸುಮಾರು 100 ಎಕರೆಗೂ ಹೆಚ್ಚು ಜಮೀನಿನಲ್ಲಿ ರೈತರು ಕಪ್ಪುಕಬ್ಬು ಬೆಳೆದಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಪಟ್ಲು ಕಬ್ಬಿಗೆ ಸಾಕಷ್ಟು ಬೇಡಿಕೆಯಿತ್ತು. ಆದರೆ ಇತ್ತೀಚೆಗೆ ಹೊಸಕೋಟೆ ಭಾಗದಲ್ಲಿ ಕಬ್ಬು ಬೆಳೆಯುತ್ತಿರೋದು ಇಲ್ಲಿನ ರೈತರಿಗೆ ಹೊಡೆತ ಬಿದ್ದಿದ್ದರೂ ಸಹ ಉತ್ತಮವಾದ ಬೆಲೆಯಲ್ಲಿ ಈ ಬಾರಿ ಪಡೆದುಕೊಂಡ ಖುಷಿಯಿದೆ. ಸಾಮಾನ್ಯ ಕಬ್ಬಿನ ರೈತರ ಜೊತೆಗೆ ಕಪ್ಪುಕಬ್ಬಿನ ರೈತರ ನೆರವಿಗೆ ಸರ್ಕಾರ ನಿಲ್ಲದಿರುವ ಕಬ್ಬು ಬೆಳೆಗಾರರ ಅಸಮಧಾನಕ್ಕೂ ಕಾರಣವಾಗಿದೆ.

ಅಂದಹಾಗೆ ಈ ಕಪ್ಪುಕಬ್ಬನ್ನ ಸಂಕ್ರಾಂತಿ ಹಬ್ಬದಲ್ಲಿಯೇ ಹೆಚ್ಚಾಗಿ ಬಳಸುವಂತಹದ್ದು. ಸಂಕ್ರಾಂತಿ ನಂತರ ಈ ಕಬ್ಬನ್ನ ಬಳಕೆ ಮಾಡೋದಿಲ್ಲ. ಈ ಕಪ್ಪುಕಬ್ಬನ್ನ ಜ್ಯೂಸ್ ಮಾಡೋಕೆ, ಬೆಲ್ಲ, ಸಕ್ಕರೆ ಮಾಡುವುದಕ್ಕೂ ಸಹ ಬಳಸುವುದಿಲ್ಲ. ಕೇವಲ ಸಂಕ್ರಾಂತಿ ಹಬ್ಬದ ವಿಶೇಷವಾಗಿಯೇ ಈ ಕಬ್ಬನ್ನ ಬಳಕೆ ಮಾಡಲಾಗುತ್ತದೆ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಒಂದು ಗಿಣ್ಣು ಕರಿಕಬ್ಬು ತಿಂದರೆ ನೆಮ್ಮದಿ ಎಂಬ ವಾಡಿಕೆ ಜನರಲ್ಲಿದೆ. ಹಾಗಾಗಿ ಕಪ್ಪುಕಬ್ಬಿಗೆ ಸಂಕ್ರಾಂತಿ ಹಬ್ಬದ ವೇಳೆ ಇನ್ನಿಲ್ಲದ ಬೇಡಿಕೆ ಇದೆ.

ವರ್ಷಕ್ಕೊಮ್ಮೆ ವಿಶೇಷವಾಗಿ ಬೆಳೆಯುವ ಈ ಕಪ್ಪುಕಬ್ಬು ಈ ಬಾರಿಯು ರೈತರಿಗೆ ಅಲ್ಪಸ್ವಲ್ಪ ಲಾಭವನ್ನ ತಂದುಕೊಟ್ಟಿದೆ. ಆದರೆ ಮಧ್ಯವರ್ತಿಗಳ, ದಲ್ಲಾಳಿಗಳ ಹಾವಳಿಯಿಂದ ಬೆಳೆದ ಬೆಳೆಗೆ ಸರಿಯಾದ ಲಾಭ ಸಿಗದಂತಾಗಿದೆ. ಆದರೂ ಸಹ ಬಂದಷ್ಟು ಬೆಲೆಗೆ ಮಾರಾಟವಾಗಿರೋ ರೈತರ ಕಪ್ಪುಕಬ್ಬು ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ

Leave a Reply

Your email address will not be published. Required fields are marked *