Saturday, 23rd June 2018

Recent News

ಮೊದಲ ಮಗುವಿನ ಹೆರಿಗೆ ಆಟೋದಲ್ಲಿ, 2ನೇ ಮಗುವಿಗೆ ರೈಲ್ವೇ ಸ್ಟೇಷನ್‍ನಲ್ಲಿ ಜನ್ಮ ನೀಡಿದ ಮಹಿಳೆ

ಥಾಣೆ: ರೈಲ್ವೇ ಸ್ಟೇಷನ್ ನಲ್ಲಿಯೇ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ ಘಟನೆ ಥಾಣೆಯಲ್ಲಿ ನಡೆದಿದೆ.

ಮೀನಾಕ್ಷಿ ಎಂಬವರು ಥಾಣೆ ರೈಲ್ವೆ ನಿಲ್ದಾಣದಲ್ಲಿ ಮಗುವಿಗೆ ಜನ್ಮ ನೀಡಿದ್ದು, ರೈಲ್ವೇ ಭದ್ರತಾ ಪಡೆಯ ಮಹಿಳಾ ಪೇದೆಯೊಬ್ಬರು ಇವರಿಗೆ ಸಹಾಯ ಮಾಡಿದ್ದಾರೆ.

ನಿಲ್ದಾಣದಲ್ಲಿ ಸ್ಕ್ಯಾನಿಂಗ್ ಮಷೀನ್ ನೋಡಿಕೊಳ್ಳೋ ಮಹಿಳಾ ಪೇದೆ ಶೋಭಾ ಮೊಟೆ, ಮೀನಾಕ್ಷಿ ಎಂಬವರಿಗೆ ಸಹಾಯ ಮಾಡಿ ಹೆರಿಗೆ ಮಾಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇದೀಗ ತಾಯಿ ಮಗು ಇಬ್ಬರನ್ನೂ ಥಾಣೆಯ ಆಸ್ಪತ್ರೆಗೆ ಸೇರಿಸಲಾಗಿದ್ದು, ಆರೋಗ್ಯವಾಗಿದ್ದಾರೆ ಎಂದು ವರದಿಯಾಗಿದೆ.

ಏನಿದು ಘಟನೆ?: ಶೋಭಾ ಮೋಟೆ ಅವರು ರೈಲ್ವೇ ನಿಲ್ದಾಣದಲ್ಲಿ ಕಾರ್ಯನಿರತರಾಗಿದ್ದ ಸಂದರ್ಭದಲ್ಲಿ ಫ್ಲಾಟ್‍ಫಾರಂನಲ್ಲಿ ಮಹಿಳೆಯೊಬ್ಬರು ನರಳಾಡುತ್ತಿರುವುದು ಕೇಳಿತ್ತು. ಕೂಡಲೇ ಶೋಭಾ ಸ್ಥಳಕ್ಕೆ ತೆರಳಿದಾಗ ಗರ್ಭಿಣಿಯೊಬ್ಬರು ಪ್ರಸವ ವೇದನೆಯಿಂದ ನರಳಾಡುತ್ತಿದ್ದರು. ಇದನ್ನು ಕಂಡ ಶೋಭಾ ಅವರಿಗೆ ಅಲ್ಲಿಯೇ ಪ್ರಥಮ ಚಿಕಿತ್ಸೆಯ ಕಿಟ್ ಹಾಗೂ ಒಂದು ಕಂಬಳಿ ತರಿಸಿ ಮಹಿಳೆಗೆ ಸಹಾಯ ಮಾಡಿ ಹೆರಿಗೆ ಮಾಡಿಸಿದ್ದಾರೆ.

ಗರ್ಭಿಣಿಯಾಗಿದ್ದ 24 ವರ್ಷದ ಮೀನಾಕ್ಷಿ ಸಂದೇಶ್ ಜಾಧವ್ ಬದ್ಲಾಪುರ್ ನಿವಾಸಿಯಾಗಿದ್ದು ಅವರ ಹೆಸರನ್ನು ಪತಿ ಸಂದೇಶ್ ಘಾಟ್ಕೋಪರ್ ಮೂಲದ ರಾಜವಾಡಿ ಆಸ್ಪತ್ರೆಯಲ್ಲಿ ನೊಂದಾಯಿಸಿದ್ದರು. ಮೀನಾಕ್ಷಿ ಅವರ ಹೆರಿಗೆಗೆ ಇನ್ನೂ 25 ದಿನಗಳ ಸಮಯವಿತ್ತು.

ನನ್ನ ಸಹೋದರಿಯೊಬ್ಬಳು ಘೋಟ್ಕೋಪರ್ ನಲ್ಲಿ ನೆಲೆಸಿದ್ದು, ನಾವು ಕೂಡ ಅಲ್ಲಿಗೆ ಹೋಗಲು ನಿರ್ಧರಿಸಿದ್ದೆವು. ಆದ್ರೆ ಕಳೆದ ಸಂಜೆ ಮೀನಾಕ್ಷಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಆಕೆಯನ್ನು ಥಾಣೆಗೆ ಕರೆದುಕೊಂಡು ಬರಲು ತಾಯಿಗೆ ಹೇಳಿದ್ದೆ. ಅಲ್ಲಿಂದ ಕಾರ್‍ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎಂದುಕೊಂಡಿದ್ದೆ ಅಂತಾ ಸಂದೇಶ್ ಹೇಳಿದ್ದಾರೆ. ಮೀನಾಕ್ಷಿ ಅವರಿಗೆ ಈ ಮಗು ಎರಡನೆಯದಾಗಿದ್ದು, ಮೊದಲ ಮಗುವಿನ ಹೆರಿಗೆ ಆಟೋ ರಿಕ್ಷಾದಲ್ಲಿ ಆಗಿತ್ತು ಅಂತಾ ಸಂದೇಶ್ ಹೇಳಿದ್ದಾರೆ.

Leave a Reply

Your email address will not be published. Required fields are marked *