ಹಣೆಗೆ ರಿವಾಲ್ವರ್ ಇಟ್ಟು ಮಂಟಪದಿಂದ ವರನನ್ನೇ ಎತ್ತಾಕೊಂಡೋದ್ಲು ಯುವತಿ!

ಲಕ್ನೋ: 25 ವರ್ಷದ ಯುವತಿಯೊಬ್ಬಳು ಕಲ್ಯಾಣ ಮಂಟಪದಿಂದ ವರನನ್ನೇ ಕಿಡ್ನಾಪ್ ಮಾಡಿರೋ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಮಂಗಳವಾರ ರಾತ್ರಿ ಉತ್ತರಪ್ರದೇಶದ ಬುಂದೇಲ್‍ಖಂಡ್‍ನಲ್ಲಿ ಈ ಘಟನೆ ನಡೆದಿದೆ. ಇಬ್ಬರು ಸಹಚರರೊಡನೆ ಎಸ್‍ಯುವಿ ಕಾರಿನಲ್ಲಿ ಮದುವೆ ಮಂಟಪಕ್ಕೆ ಬಂದ ಯುವತಿ ವರನ ಹಣೆಗೆ ರಿವಾಲ್ವರ್ ಇಟ್ಟು, ಈತ ನನ್ನನ್ನು ಪ್ರೀತಿಸುತ್ತಾನೆ. ಆದ್ರೆ ಬೇರೆಯವರೊಂದಿಗೆ ಮದುವೆ ಆಗುವ ಮೂಲಕ ನನಗೆ ಮೋಸ ಮಾಡ್ತಿದ್ದಾನೆ. ಇದು ನಡೆಯೋಕೆ ನಾನು ಬಿಡೋದಿಲ್ಲ ಎಂದು ಹೇಳಿ ವರನನ್ನ ಕಿಡ್ನಾಪ್ ಮಾಡಿದ್ದಾಳೆ.

ಮಹಿಂದ್ರಾ ಸ್ಕಾರ್ಪಿಯೋ ವಾಹನ ಹೊರಡುತ್ತಿದ್ದಂತೆ ಮದುವೆಗೆ ಸಿದ್ಧಗೊಂಡಿದ್ದ ವಧು ಭಾರತಿ ಯಾದವ್, ದುಃಖದಿಂದ ತನ್ನ ಹಣೆಬರಹ ಚೆನ್ನಾಗಿಲ್ಲ. ನನ್ನ ಶತ್ರುಗೂ ಈ ರೀತಿ ಶಿಕ್ಷೆಯಾಗಬಾರದು ಎಂದು ಹೇಳಿದ್ದಾರೆ.

ವರ ಅಶೋಕ್ ಯಾದವ್ ಈವರೆಗೆ ಪತ್ತೆ ಆಗಿಲ್ಲ. ಸ್ಥಳೀಯರು ಹೇಳುವ ಪ್ರಕಾರ ಕೆಲವು ತಿಂಗಳ ಹಿಂದೆ ಅಶೋಕ್‍ಗೆ ಕೆಲಸದ ಸ್ಥಳದಲ್ಲಿ ಯುವತಿಯ ಪರಿಚಯವಾಗಿತ್ತು. ಇಬ್ಬರೂ ಪ್ರೀತಿಸಲು ಶುರು ಮಾಡಿದ್ದರು. ಕೆಲವರು ಈ ಜೋಡಿ ಮದುವೆಯೂ ಆಗಿದ್ದಾರೆ ಎಂದು ಹೇಳಿದ್ದಾರೆ. ಆದ್ರೆ ಮನೆಯವರ ಒತ್ತಾಯದಿಂದ ಅವರು ನೋಡಿದ ಹುಡುಗಿಯನ್ನ ಮದುವೆಯಾಗಲು ಅಶೋಕ್ ಒಪ್ಪಿದ್ದರು ಎಂದು ವರದಿಯಾಗಿದೆ.

ಘಟನೆಯಿಂದ ಮದುವೆಗೆ ಬಂದಿದ್ದ ಅತಿಥಿಗಳು ಶಾಕ್ ಆಗಿದ್ದಾರೆ. ಇದೇ ವೇಳೆ ಮಾತನಾಡಿದ ವರನ ತಂದೆ ರಮ್ಹತ್ ಯಾದವ್, ನನ್ನ ಮಗನ ಬಗ್ಗೆ ಹಿಂದಿನಿಂದಲೂ ಅನುಮಾನವಿತ್ತು. ಆತ ಕೆಲಸ ಮಾಡುವ ಸ್ಥಳಕ್ಕೆ ಹೋಗಿ ನಾನು ಭೇಟಿ ಮಾಡುವಾಗ, ನನ್ನನ್ನು ಆತನ ಮನೆಗೆ ಕರೆದುಕೊಂಡು ಹೋಗ್ತಿರ್ಲಿಲ್ಲ. ದೇವಸ್ಥಾನದಲ್ಲಿ ಭೇಟಿ ಮಾಡ್ತಿದ್ದ. ಅಲ್ಲೇ ಹೋಟೆಲ್‍ನಲ್ಲಿ ಊಟ ಮಾಡಿಸಿ ಮನೆಗೆ ಕಳಿಸ್ತಿದ್ದ ಎಂದಿದ್ದಾರೆ.

ವಧುವಿನ ಕಡೆಯವರು ವರನ ಅಹರಣದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ನ್ಯಾಯ ಒದಗಿಸಿಕೊಡುವ ಭರವಸೆ ನೀಡಿದ್ದಾರೆ. ಅದರಲ್ಲೂ ಕೆಲವು ಪೊಲೀಸರು ವರನನ್ನೇ ಅಪಹರಿಸಿದ ರಿವಾಲ್ವರ್ ರಾಣಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಮೋಸ ಮಾಡಿದ್ರೆ ಅದಕ್ಕೆ ಶಿಕ್ಷೆ ಆಗುತ್ತೆ ಅನ್ನೋದನ್ನ ಕೆಲ ಮಹಿಳೆಯರು ಹುಡುಗರಿಗೆ ಕಲಿಸುತ್ತಾರೆ ಅನ್ನೋದನ್ನ ಈ ಯುವತಿ ತೋರಿಸಿಕೊಟ್ಟಿದ್ದಾಳೆ ಎಂದಿದ್ದಾರೆ.

You might also like More from author

Leave A Reply

Your email address will not be published.

badge