ಈಶ್ವರಪ್ಪಗೆ ಮೊದಲ ಶಾಕ್; ಬೆಂಗಳೂರಿನ ಮಾಜಿ ಮೇಯರ್ ವೆಂಕಟೇಶ್ ಮೂರ್ತಿ ಬಿಜೆಪಿಯಿಂದ ಅಮಾನತು

ಬೆಂಗಳೂರು: ರಾಯಣ್ಣ ಬ್ರಿಗೇಡ್ ಕಟ್ಟಲು ಮುಂದಾಗಿರುವ ಪರಿಷತ್ ಪ್ರತಿಪಕ್ಷ ನಾಯಕ ಈಶ್ವರಪ್ಪಗೆ ಮೊದಲ ಶಾಕ್ ಎನ್ನುವಂತೆ ಬೆಂಗಳೂರಿನ ಮಾಜಿ ಮೇಯರ್ ವೆಂಕಟೇಶ್ ಮೂರ್ತಿ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.

ಬಿಜೆಪಿ ನಗರಾಧ್ಯಕ್ಷರಾಗಿರುವ ಸದಾಶಿವ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದ ವೆಂಕಟೇಶ್‍ಮೂರ್ತಿ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಈಶ್ವರಪ್ಪ ನಿಕಟವರ್ತಿಯಾಗಿದ್ದ ವೆಂಕಟೇಶ್‍ಮೂರ್ತಿ ಸಂಗೊಳ್ಳಿರಾಯಣ್ಣ ಬ್ರಿಗೇಡ್‍ನಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿದ್ದರು. ಈಶ್ವರಪ್ಪ ಜೊತೆ ಸುದ್ದಿಗೋಷ್ಠಿಯಲ್ಲಿ ಭಾಗವಹಿಸುತ್ತಿದ್ದ ಇವರಿಗೆ ಬಸವನಗುಡಿ, ಬೆಂಗಳೂರಲ್ಲಿ ಪಕ್ಷ ವಿರೋಧಿ ಚಟುವಟಿಕೆ ಆರೋಪಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡಿದ್ದರೂ ಉತ್ತರಿಸದ್ದಕ್ಕೆ ಅಮಾನತು ಮಾಡಲಾಗಿದೆ.

ಜ. 26 ರಂದು ಬಾಗಲಕೋಟೆಯಲ್ಲಿ ರಾಯಣ್ಣ ಬ್ರಿಗೇಡ್ ಸಮಾವೇಶ ನಡೆಯಲಿದ್ದು, ಸಮಾವೇಶಕ್ಕೆ ಸಿದ್ಧತೆ ನಡೆಸಿದ್ದ ವೆಂಕಟೇಶ್‍ಮೂರ್ತಿ ಬುಧವಾರ ಬೆಂಗಳೂರಿನ ಪದ್ಮನಾಭನಗರದಲ್ಲಿ ರಾಯಣ್ಣ ಬ್ರಿಗೇಡ್‍ನ ಪೂರ್ವಭಾವಿ ಸಭೆಯನ್ನು ಕರೆದಿದ್ದರು.

ಈಶ್ವರಪ್ಪ ಗರಂ: ಬಿಜೆಪಿಯಿಂದ ವೆಂಕಟೇಶ್ ಮೂರ್ತಿ ಅಮಾನತಿಗೆ ಈಶ್ವರಪ್ಪ ಗರಂ ಆಗಿದ್ದು, ಅಮಾನತು ಮಾಡಿದ್ದು ಯಾಕೆ ಎಂದು ತಿಳಿದುಕೊಂಡು ಮಾತನಾಡುತ್ತೇನೆ. ವೆಂಕಟೇಶ್ ಮೂರ್ತಿ ನಮ್ಮ ಪಕ್ಷದ ಸದಸ್ಯರು ಎನ್ನುವುದನ್ನು ಮರೆಯಬಾರದು ಎಂದು ಕಲಬುರಗಿಯಲ್ಲಿ ಹೇಳಿದ್ದಾರೆ.

LEAVE A REPLY