ಆಸ್ಟ್ರೇಲಿಯಾದ ಸವಾಲಿನ ಮೊತ್ತಕ್ಕೆ ಟೀಂ ಇಂಡಿಯಾದಿಂದ ದಿಟ್ಟ ಹೋರಾಟದ ಮುನ್ಸೂಚನೆ

ರಾಂಚಿ: ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 451 ರನ್‍ಗಳಿಗೆ ಕಟ್ಟಿಹಾಕಿದ ಟೀಂ ಇಂಡಿಯಾ ಬ್ಯಾಟಿಂಗ್‍ನಲ್ಲಿ ದಿಟ್ಟ ಹೋರಾಟ ನೀಡುವ ಮುನ್ಸೂಚನೆ ನೀಡಿದೆ.

ಮೊದಲ ದಿನ 4 ವಿಕೆಟ್ ಕಳೆದುಕೊಂಡು 299 ರನ್‍ಗಳಿಸಿದ್ದ ಆಸ್ಟ್ರೇಲಿಯಾ ಇಂದು 6 ವಿಕೆಟ್‍ಗಳ ಸಹಾಯದಿಂದ 152 ರನ್ ಗಳಿಸಿ 137.3 ಓವರ್‍ಗಳಲ್ಲಿ 451 ರನ್‍ಗಳಿಗೆ ಆಲೌಟ್ ಆಯ್ತು. ಆಸ್ಟ್ರೇಲಿಯಾದ ಸವಾಲಿನ ಮೊತ್ತಕ್ಕೆ ಜವಾಬು ನೀಡಲು ಆರಂಭಿಸಿದ ಭಾರತ ಎರಡನೇ ದಿನದ ಆಟದ ಆಂತ್ಯಕ್ಕೆ 40 ಓವರ್‍ಗಳಲ್ಲಿ 1 ವಿಕೆಟ್ ಕಳೆದುಕೊಂಡು 120 ರನ್‍ಗಳಿಸಿದೆ.

ಗುರುವಾರ 82 ರನ್‍ಗಳಿಸಿ ಅಜೇಯರಾಗಿದ್ದ ಮ್ಯಾಕ್ಸ್ ವೆಲ್ ಇಂದು ಟೆಸ್ಟ್ ಕ್ರಿಕೆಟ್ ಬಾಳ್ವೆಯ ಮೊದಲ ಶತಕ ಹೊಡೆದರು. 180 ಎಸೆತಗಳಲ್ಲಿ ಶತಕ ಹೊಡೆದ ಮ್ಯಾಕ್ಸ್ ವೆಲ್ ಅಂತಿಮವಾಗಿ 104 ರನ್(185 ಎಸೆತ, 9 ಬೌಂಡರಿ, 2 ಸಿಕ್ಸರ್)ಗಳಿಸಿ ಜಡೇಜಾಗೆ ವಿಕೆಟ್ ಒಪ್ಪಿಸಿದರು. ಸ್ಮಿತ್ ಮತ್ತು ಮ್ಯಾಕ್ಸ್ ವೆಲ್  354 ಎಸೆತಗಳಲ್ಲಿ 5ನೇ ವಿಕೆಟ್‍ಗೆ 191 ರನ್‍ಗಳ ಜೊತೆಯಾಟವಾಡುವ ಮೂಲಕ ತಂಡವನ್ನು ಅಪಾಯದಿಂದ ಪಾರು ಮಾಡಿದರು.

ಮ್ಯಾಥ್ಯು ವೇಡ್ 37 ರನ್, ಸ್ವೀವ್ ಓ ಕೀಫ್ 25 ರನ್‍ಗಳಿಸಿ ಔಟಾದರು. ಆರಂಭಿಕ ಆಟಗಾರ ವಾರ್ನರ್ ಔಟಾದ ಬಳಿಕ ಕ್ರೀಸ್‍ಗೆ ಬಂದ ನಾಯಕ ಸ್ವೀವ್ ಸ್ಮಿತ್ ಅಜೇಯ 178 ರನ್(361 ಎಸೆತ, 17 ಬೌಂಡರಿ) ಹೊಡೆಯುವ ಮೂಲಕ ತಂಡದ ರನ್ ಬೆಟ್ಟವನ್ನು ಕಟ್ಟಿದರು.

ರವೀಂದ್ರ ಜಡೇಜಾ 124 ರನ್ ನೀಡಿ 5 ವಿಕೆಟ್ ಪಡೆದರೆ, ಉಮೇಶ್ ಯಾದವ್ 106 ರನ್ ನೀಡಿ 3 ವಿಕೆಟ್ ಪಡೆದರು. ಅಶ್ವಿನ್ 114 ರನ್ ನೀಡಿ 1 ವಿಕೆಟ್ ಕಿತ್ತರು. 9 ಬೈ, 11 ಲೆಗ್ ಬೈ, 2 ನೋಬಾಲ್ ಎಸೆಯುವ ಮೂಲಕ ಭಾರತದ ಬೌಲರ್‍ಗಳು ಇತರೇ ರೂಪದಲ್ಲಿ 22 ರನ್ ಬಿಟ್ಟುಕೊಟ್ಟಿದ್ದಾರೆ.

ದಿಟ್ಟ ಹೋರಾಟ: ಪ್ರತಿ ಹೋರಾಟ ಆರಂಭಿಸಿದ ಭಾರತ 40 ಓವರ್‍ಗಳಲ್ಲಿ 1 ವಿಕೆಟ್ ನಷ್ಟಕ್ಕೆ 120 ರನ್ ಗಳಿಸಿದೆ. ಕೆಎಲ್ ರಾಹುಲ್ 67 ರನ್( 102 ಎಸೆತ, 9 ಬೌಂಡರಿ) ಗಳಿಸಿ ಔಟಾದರು. ಮುರಳಿ ವಿಜಯ್ ಅಜೇಯ 42 ರನ್(112 ಎಸೆತ, 6 ಬೌಂಡರಿ) ಚೇತೇಶ್ವರ ಪೂಜಾರ 10 ರನ್‍ಗಳಿಸಿ ಕ್ರೀಸ್‍ನಲ್ಲಿ ಆಡುತ್ತಿದ್ದಾರೆ. ರಾಹುಲ್ ಮತ್ತು ವಿಜಯ್ 31.2 ಓವರ್‍ಗಳಲ್ಲಿ ಮೊದಲ ವಿಕೆಟ್‍ಗೆ 91 ರನ್‍ಗಳ ಜೊತೆಯಾಟವಾಡುವ ಮೂಲಕ ಭಾರತದ ಇನ್ನಿಂಗ್ಸ್  ಗೆ ಗಟ್ಟಿ ಆಡಿಪಾಯ ಹಾಕಿದ್ದಾರೆ.

You might also like More from author

Leave A Reply

Your email address will not be published.

badge