Thursday, 23rd January 2020

ಮಹಿಳೆಗೆ ಚಾಕು ತೋರಿಸಿ 40 ಗ್ರಾಂ ಚಿನ್ನದ ಮಾಂಗಲ್ಯ ಸರ ಎಗರಿಸಿದ ಕಳ್ಳರು

ಚಾಮರಾಜನಗರ: ವಾಕಿಂಗ್ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ಮುಸುಕುದಾರಿ ದರೋಡೆಕೋರರಿಬ್ಬರು ಚಾಕು ತೋರಿಸಿ, ಚಿನ್ನದ ಮಾಂಗಲ್ಯ ಸರವನ್ನು ದೋಚಿದ ಘಟನೆ ಕೊಳ್ಳೇಗಾಲ ತಾಲೂಕಿನ ಹೊಸಮಾಲಂಗಿಯಲ್ಲಿ ನಡೆದಿದೆ.

ಕೊಳ್ಳೇಗಾಲ ತಾಲೂಕಿನ ಸಿಲ್ಕಲ್ ಪುರ ಗ್ರಾಮದ ಕುಮಾರಸ್ವಾಮಿ ಅವರ ಪತ್ನಿ ಕನಕ ಮಾಂಗಲ್ಯ ಸರ ಕಳೆದುಕೊಂಡ ಮಹಿಳೆ. 28 ಗ್ರಾಂ ಸರ, 8 ಗ್ರಾಂ ತಾಳಿ ಹಾಗೂ 4ಗ್ರಾಂ ಗುಂಡು ಮಾಂಗಲ್ಯ ಸರದಲ್ಲಿ ಇತ್ತು ಎಂದು ಕನಕ ಪೊಲೀಸರಿಗೆ ತಿಳಿಸಿದ್ದಾರೆ.

ಹೊಸಮಾಲಂಗಿ ಗ್ರಾಮದ ಹೊರ ವಲಯದ ಚಾನಲ್ ರಸ್ತೆಯಲ್ಲಿ ಕನಕ ಅವರು ಶನಿವಾರ ಬೆಳಗ್ಗೆ 6:30 ಗಂಟೆ ಸಮಯದಲ್ಲಿ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ಟಗರಪುರ ಗ್ರಾಮದ ಕಡೆಯಿಂದ ಕಾರಿನಲ್ಲಿ ಬಂದ ಅಪರಿಚಿತರಿಬ್ಬರು ಚಾಕು ತೋರಿಸಿ, ಚಿನ್ನದ ಮಾಂಗಲ್ಯ ಸರ ಕೊಡುವಂತೆ ಬೆದರಿಸಿದ್ದಾರೆ. ಒಂದು ವೇಳೆ ಕೊಡದಿದ್ದರೆ ಕೊಲೆ ಮಾಡಿ, ಕಿತ್ತುಕೊಂಡು ಹೋಗುತ್ತೇವೆ ಎಂದು ಬೆದರಿಸಿದ್ದಾರೆ. ಇದರಿಂದ ಗಾಬರಿಗೊಂಡ ಕನಕ ಅವರು ಮಾಂಗಲ್ಯ ಸರ ನೀಡಿದ್ದಾರೆ.

ಮಾಂಗಲ್ಯ ಸರ ಕೈಗೆ ಸಿಗುತ್ತಿದಂತೆ ಕಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಸಂಬಂಧ ಕನಕ ಅವರು, ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಳು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *