Tuesday, 10th December 2019

ಅಭಿಮಾನಿಯ ಕಾಲು ಮುಟ್ಟಿದ ರಜನಿಕಾಂತ್ – ಫೋಟೋ ವೈರಲ್

ಚೆನ್ನೈ: ದಿವ್ಯಾಂಗ ಅಭಿಮಾನಿಯ ಕಾಲು ಮುಟ್ಟುವ ಮೂಲಕ ಸೂಪರ್ ಸ್ಟಾರ್ ರಜನಿಕಾಂತ್ ಸರಳತೆ ಮೆರೆದಿದ್ದಾರೆ.

ಕೇರಳದ 21 ವರ್ಷದ ದಿವ್ಯಾಂಗ ಕಲಾವಿದ ಎಂ.ಬಿ.ಪ್ರಣವ್ ಚೆನ್ನೈನ ನಿವಾಸದಲ್ಲಿ ರಜನಿಕಾಂತ್ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಅವರೊಂದಿಗೆ ಮಾತುಕತೆ ನಡೆಸಿದ್ದು, ದಿವ್ಯಾಂಗರಾಗಿರುವುದರಿಂದ ಕಾಲಿನಲ್ಲಿ ಚಿತ್ರಗಳನ್ನು ಬಿಡಿಸುತ್ತಾರೆ. ಇದನ್ನು ಕಂಡ ರಜನಿಕಾಂತ್ ಅವರ ಕಾಲನ್ನು ಮುಟ್ಟಿ ಭಾವುಕರಾಗಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ದಿವ್ಯಾಂಗ ಕಲಾವಿದ ಪ್ರಣವ್ ರಜನಿಕಾಂತ್ ಅವರನ್ನು ಭೇಟಿ ಮಾಡುವುದು ನನ್ನ ಜೀವನದ ಕನಸು ಎಂದು ಮನದಾಳವನ್ನು ಬಿಚ್ಚಿಟ್ಟಿದ್ದರು. ಇದು ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ತಿಳಿದಿದ್ದು, ಪ್ರಣವ್ ಜೊತೆ ಸಭೆ ನಡೆಸಲು ತಮ್ಮ ಮನೆಯಲ್ಲಿ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ.

ಪ್ರಣವ್ ರಜನಿಕಾಂತ್ ಅಭಿಮಾನಿಯಾಗಿದ್ದು, ದಿವ್ಯಾಂಗ ಕಲಾವಿದರಾಗಿದ್ದಾರೆ. ಇವರಿಗೆ ಎರಡೂ ಕೈಗಳಿಲ್ಲದ ಕಾರಣ ಕಾಲಿನಲ್ಲಿ ಚಿತ್ರಗಳನ್ನು ಬಿಡಿಸುತ್ತಾರೆ. ಇತ್ತೀಚೆಗೆ ಪ್ರಣವ್ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿ ಮಾಡಿದ್ದರು. ಅಲ್ಲದೆ ಓಣಂ ಸಂದರ್ಭದಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಸಹ ಭೇಟಿಯಾಗಿದ್ದಾರೆ. ಇದೀಗ ರಜನಿಕಾಂತ್ ಅವರನ್ನು ಭೇಟಿಯಾಗಿದ್ದು, ಈ ವೇಳೆ ರಜನಿಕಾಂತ್ ಅವರು ಪ್ರಣವ್ ಕಾಲುಗಳನ್ನು ಸ್ಪರ್ಶಿಸಿದ್ದಾರೆ. ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ರಜನಿಕಾಂತ್ ಅವರು ಶೇಕ್ ಹ್ಯಾಂಡ್ ಮಾಡುವ ರೀತಿಯಲ್ಲಿ ಪ್ರಣವ್ ಕಾಲನ್ನು ಹಿಡಿದುಕೊಂಡಿದ್ದು, ಇಬ್ಬರೂ 20 ನಿಮಿಷಗಳಿಗೂ ಹೆಚ್ಚು ಕಾಲ ಮಾತನಾಡಿದ್ದಾರೆ. ಈ ಮೂಲಕ ಪ್ರಣವ್ ತಮ್ಮ ಜೀವನದ ಆಸೆಯನ್ನು ಪೂರೈಸಿಕೊಂಡಿದ್ದಾರೆ. ಅಭಿಮಾನಿಯ ಕುಶಲೋಪರಿಯನ್ನು ವಿಚಾರಿಸುವ ಮೂಲಕ ಮಾನವೀಯತೆಯನ್ನು ಗೌರವಿಸುತ್ತಾರೆ ಎಂಬುದನ್ನು ರಜನಿಕಾಂತ್ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

Leave a Reply

Your email address will not be published. Required fields are marked *