Thursday, 21st June 2018

Recent News

ನೋಟ್ ಬ್ಯಾನ್ ಮೂಲಕ ಕಪ್ಪು ಹಣವನ್ನು ವೈಟ್ ಮನಿ ಮಾಡಲು ಮೋದಿ ಅವಕಾಶ ನೀಡಿದ್ರು: ರಾಗಾ ಆರೋಪ

ಬಾಗಲಕೋಟೆ: ಮುಂಬೈ ಕರ್ನಾಟಕದ ಜಿಲ್ಲೆಗಳಲ್ಲಿ ರಾಹುಲ್ ಗಾಂಧಿಯವರ ಜನಾಶೀರ್ವಾದ ಯಾತ್ರೆಯ ಎರಡನೇಯ ದಿನವು ಮುಂದುವರೆದಿದ್ದು ಇಂದು ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದರು.

ಜಿಲ್ಲೆಯ ಮುಳವಾಡದಲ್ಲಿ ಬೃಹತ್ ಜನಾಶೀರ್ವಾದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಮತ್ತೊಮ್ಮೆ ವಚನ ಹೇಳುವ ಮೂಲಕ ತಮ್ಮ ಭಾಷಣವನ್ನು ಆರಂಭಿಸಿದರು. ಎಲ್ಲರಿಗು ಶರಣು ಶರಣಾರ್ಥಿ ಎಂದ ಅವರು, ಸಾವಿರಾರು ವರ್ಷದ ಇತಿಹಾಸವಿರುವ ಭಾರತ ದೇಶದಲ್ಲಿ ಕಾಂಗ್ರೆಸ್‍ಗೆ ನೂರು ವರ್ಷ ಪೂರ್ಣಗೊಳಿಸಿದೆ. ಇಂತಹ ಪಕ್ಷ ಇದೀಗ ಹೊಸದಾಗಿ ಕಾಣಿಸುತ್ತಿದೆ. ಪಕ್ಷಕ್ಕೆ ಹೊಸ ಚೈತನ್ಯ ಮೂಡಿದೆ. ಬಸವಣ್ಣನ ತತ್ವಗಳನ್ನ ನಾವು ಪಾಲಿಸುತ್ತಿದ್ದೇವೆ ಎಂದರು.

ಮೋದಿ ವಿರುದ್ಧ ವಾಗ್ದಾಳಿ: ರಾಹುಲ್ ಗಾಂಧಿ ತಮ್ಮ ಭಾಷಣದ ಉದ್ದಕ್ಕೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ಅವರ ವಿರುದ್ಧ ಆರೋಪಗಳ ಸುರಿಮಳೆಗೈದರು. ಪ್ರಧಾನಿಗಳ ಬಳಿ ನಾನು ದೇಶದ ರೈತರ ಸಾಲಮನ್ನಾ ಮಾಡಿ ಎಂದು ಕೇಳಿದೆ. ಆದರೆ ಅವರು ಉದ್ಯಮಿಗಳ ಸಾಲ ಮನ್ನಾ ಮಾಡಿದರು. ಯುಪಿಎ ಸರ್ಕಾರದ ಕಾಲದಲ್ಲಿ 70 ಸಾವಿರ ಕೋಟಿ ರೈತರ ಸಾಲಮನ್ನಾ ಮಾಡಿತ್ತು. ಆದರೆ ಮೋದಿ ಸರ್ಕಾರ ಇದಕ್ಕಿಂತ ಎರಡು, ಮೂರು ಪಟ್ಟು ಹಣವನ್ನ ಕೇವಲ ಹತ್ತು ಉದ್ಯಮಿಗಳಿಗೆ ನೀಡಿದೆ. ಪ್ರಧಾನಿ ಮೋದಿ ಅವರೇ ಹೀಗೆ ಏಕೆ ಮಾಡಿದ್ದೀರಾ ಎಂದು ಪ್ರಶ್ನಿಸಿದರೆ ಮೌನವನ್ನು ಉತ್ತರವಾಗಿ ನೀಡಿದರು ಎಂದು ರಾಹುಲ್ 30 ಸೆಕೆಂಡ್ ಮೌನವಾಗಿ ನಿಂತರು.

ರಾಹುಲ್ ಅವರು ತಮ್ಮ ಭಾಷಣ ವೇಳೆ ಬಸವಣ್ಣನವರ ವಚನವನ್ನು ಹೇಳಿ ಕೇಂದ್ರ ಸರ್ಕಾರದ ಕಾರ್ಯವನ್ನು ಟೀಕಿಸಿದರು. ಕಾಯಕವೇ ಕೈಲಾಸ ಎಂದು ಬಸವಣ್ಣ ಹೇಳಿದ್ದಾರೆ. ಬಸವಣ್ಣ ನವರು ಕೆಲಸದಲ್ಲಿ ದೇವರನ್ನು ಕಾಣಿ ಎಂದು ಹೇಳಿದ್ದರು. ಆದರೆ ನೀವು ನುಡಿದಂತೆ ನಡೆದುಕೊಂಡಿದ್ದಿರಾ ಎಂದರು. ಪದೇ ಪದೇ ಬಸವಣ್ಣನವರ ವಚನವನ್ನು ಪ್ರಸ್ತಾಪಿಸಿ ಮೋದಿ ಜೀ ನೀವು ನುಡಿದಂತೆ ನಡೆದುಕೊಳ್ಳಿ ಎಂದರು.

ಪ್ರಧಾನಿ ಮೋದಿ ಅವರು ನೋಟ್ ಬ್ಯಾನ್ ಮಾಡಿದರು. ನೋಟ್ ಬ್ಯಾನ್ ಮಾಡುವ ಮೂಲಕ ಕಪ್ಪು ಹಣ ಹೊಂದಿದ್ದ ಕುಳಗಳು ವೈಟ್ ಮನಿ ಮಾಡಲು ಅವಕಾಶ ನೀಡಿದರು. ನೀರವ್ ಮೋದಿ 11,000 ಸಾವಿರ ಕೋಟಿ ರೂ. ತೆಗದುಕೊಂಡು ದೇಶ ಬಿಟ್ಟು ಓಡಿ ಹೋಗಿದ್ದಾನೆ. ಈ ಬಗ್ಗೆ ಇದುವರೆಗೂ ಮೋದಿ ನೀರವ್ ಮೋದಿ ಬಗ್ಗೆ ಮಾತನಾಡಿಲ್ಲ. ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಹೇಳಿದ್ದ ಅವರು ನಾಲ್ಕು ವರ್ಷದಲ್ಲಿ ಎಷ್ಟು ಉದ್ಯೋಗ ಸೃಷ್ಟಿ ಮಾಡಿದ್ದಾರೆ. ನುಡಿದಂತೆ ನಡೆಯಿರಿ ಎಂದು ಟಾಂಗ್ ನೀಡಿದರು.

ಇದಕ್ಕೂ ಮುನ್ನ ವಿಜಯಪುರದಲ್ಲಿ ಆಯೋಜಿಸಿರುವ “ವೃಕ್ಷಥಾನ್ 2018” ಹಾಫ್ ಮ್ಯಾರಥಾನ್‍ಗೆ ರಾಹುಲ್ ಗಾಂಧಿ ಹಾಗೂ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಬಳಿಕ ಬಾಗಲಕೋಟೆಯಲ್ಲಿ ಜಮಖಂಡಿ ಸಮೀಪದ ಚಿಕ್ಕಪಡಸಲಗಿ ಬ್ಯಾರೇಜ್ ವೀಕ್ಷಣೆ ಮಾಡಿ ಸಂವಾದ ನಡೆಸಿದರು. ನಮ್ಮ ಸರ್ಕಾರ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ದೇಶದಲ್ಲಿ ಕರ್ನಾಟಕ ನೀರಾವರಿಗೆ ಮೀಸಲಿಟ್ಟ ಹಣದಲ್ಲಿ ಮೂರನೇ ಸ್ಥಾನ ಪಡೆದಿದೆ. ಬಿಜೆಪಿ ಸರ್ಕಾರ ನೀಡಿದ ಹಣಕ್ಕಿಂತಲೂ ನಮ್ಮ ಸರ್ಕಾರ ಮೂರು ಪಟ್ಟು ಹೆಚ್ಚು ನೀಡಿದೆ ಎಂದರು. ನಂತರ ಬೀಳಗಿಯಲ್ಲಿ ಎಸ್.ಆರ್. ಪಾಟೀಲ್ ಒಡೆತನದ ಗಾಂಧಿ ವಸತಿ ಶಾಲೆಯನ್ನು ಉದ್ಘಾಟಿಸಿದರು. ವೇದಿಕೆ ಮೇಲೆ ಗಿಡಕ್ಕೆ ನೀರು ಎರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

 

Leave a Reply

Your email address will not be published. Required fields are marked *