Sunday, 22nd April 2018

Recent News

ಪ್ಲಸ್ ಟು ಪರೀಕ್ಷೆಯಲ್ಲಿ 1200ಕ್ಕೆ 1180 ಅಂಕಗಳಿಸಿದ್ದ ವಿದ್ಯಾರ್ಥಿನಿ ಮಾಧ್ಯಮಗಳ ವರದಿಯಿಂದ ಮನನೊಂದು ಆತ್ಮಹತ್ಯೆ!

ಕಣ್ಣೂರು: ಕೇರಳದ ಪ್ಲಸ್ ಟು ಪರೀಕ್ಷೆಯಲ್ಲಿ ಅತಿ ಹೆಚ್ಚಿನ ಅಂಕ ತೆಗೆದು ಪಾಸಾಗಿದ್ದ ವಿದ್ಯಾರ್ಥಿನಿ ಮಾಧ್ಯಮಗಳ ವರದಿಗೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಹೌದು. ಕಣ್ಣೂರು ಜಿಲ್ಲೆಯ ಮಾಲೂರಿನ ಶಿವಪುರಂ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿ ರಫ್ಸೀನಾ(17) ಪ್ಲಸ್ ಟು ತರಗತಿಯಲ್ಲಿ ಒಟ್ಟು 1200 ಅಂಕಗಳಿಗೆ ನಡೆದ ಪರೀಕ್ಷೆಯಲ್ಲಿ  1180 ಅಂಕಗಳಿಸಿ ಪಾಸಾಗಿದ್ದಳು. ಈಕೆಯ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿತ್ತು. ಅಭಿನಂದನೆಗಳ ಸ್ವೀಕರಿಸಿದ ಬಳಿಕ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಬುಧವಾರ ನೇಣಿಗೆ ಶರಣಾಗಿದ್ದಾಳೆ.

ತನ್ನ ಮರಣ ಪತ್ರದಲ್ಲಿ ರಫ್ಸಿನಾ, ನನ್ನ ಜೀವನ ನನ್ನ ಆಯ್ಕೆ, ನನ್ನ ಜೀವನದಲ್ಲಿ ಬೇರೆಯವರು ಮಧ್ಯಪ್ರವೇಶಿಸುವುದು ನನಗೆ ಇಷ್ಟ ಇಲ್ಲ ಎಂದು ಬರೆದಿದ್ದಳು.

ಮಾಧ್ಯಮಗಳ ವರದಿಯಿಂದ ಆತ್ಮಹತ್ಯೆ?
ತೀವ್ರ ಬಡತನದಲ್ಲಿ ಓದಿ ಸಾಧನೆ ಮಾಡಿ ಶಾಲೆಗೆ ಕೀರ್ತಿ ತಂದಿದ್ದಾಳೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಒಂದು ಕೋಣೆಯ ಮನೆಯಲ್ಲಿ ವಾಸಿಸುತ್ತಿದ್ದ ರಫ್ಸೀನಾ ಬಡತನದ ವಿಷಯವನ್ನು ತನ್ನ ಸ್ನೇಹಿತರಲ್ಲೂ ಹೇಳಿರಲಿಲ್ಲ. ಮಾಧ್ಯಮಗಳು ತನ್ನ ಸಾಧನೆ ವಿಚಾರಕ್ಕಿಂತಲೂ ಬಡತನದ ವಿಚಾರವನ್ನೇ ಮುಂದಿಟ್ಟುಕೊಂಡು ಸುದ್ದಿಯನ್ನು ಪ್ರಕಟಿಸಿದ್ದಕ್ಕೆ ಬೇಸರಗೊಂಡಿದ್ದಳು.

ಈಕೆಯ ಬಡತನವನ್ನು ನೋಡಿ ಹಲವು ಸಂಘ ಸಂಸ್ಥೆಗಳು ಶಿಕ್ಷಣಕ್ಕೆ ಸಹಕಾರವನ್ನು ನೀಡಲು ಮುಂದೆ ಬಂದಿತ್ತು. ಬುಧವಾರ ಶಿವಪುರಂ ಹೈಯರ್ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಆಕೆಯ ಮನೆಗೆ ಬಂದು ಅಭಿನಂದನೆ ಸಲ್ಲಿಸಿದ್ದರು. ಅಭಿನಂದನೆ ಸ್ವೀಕರಿಸಿದ ಬಳಿಕ ಆಕೆ ನೇಣಿಗೆ ಶರಣಾಗಿದ್ದಾಳೆ.

ಮಾಧ್ಯಮಗಳು ಈಕೆಯ ಶಿಕ್ಷಣಕ್ಕೆ ಜನರು ಮುಂದೆ ಸಹಕಾರ ನೀಡಲಿ ಎನ್ನುವ ದೃಷ್ಟಿಯಿಂದ, ರಫ್ಸೀನಾಗೆ ಹಣಕಾಸಿನ ಸಹಾಯ ನೀಡಿದವರ ಫೋಟೋಗಳನ್ನು ಸಹ ಸುದ್ದಿಯಲ್ಲಿ ಪ್ರಸಾರ ಮಾಡಿತ್ತು. ಮಾಧ್ಯಮಗಳು ಈಕೆಯ ಸುದ್ದಿಯನ್ನು ಕವರ್ ಮಾಡಿದ ಬಗ್ಗೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಪರ, ವಿರೋಧ ಚರ್ಚೆ ಆರಂಭವಾಗಿದೆ.

Leave a Reply

Your email address will not be published. Required fields are marked *