ಪಕ್ಷಿರಾಜನಾಗಿ ಚೇಸ್‍ಗೆ ಸಾಥ್ ಕೊಟ್ಟರೇ ಅರವಿಂದ್ ಬೋಳಾರ್?

ತುಳು ಚಿತ್ರರಂಗದಲ್ಲಿ ತಮ್ಮ ಹಾಸ್ಯ ನಟನೆಯಿಂದ ಸ್ಟಾರ್ ನಟನಾಗಿ ಹೊರ ಹೊಮ್ಮಿರುವವರು ಅರವಿಂದ ಬೋಳಾರ್. ಅವರ ಖ್ಯಾತಿಯೀಗ ತುಳು ಚಿತ್ರರಂಗದ ಗಡಿ ದಾಟಿಕೊಂಡು ಎಲ್ಲೆಡೆ ಪಸರಿಸಿಕೊಂಡಿದೆ. ಬಾಡಿ ಲ್ವಾಗ್ವೇಜ್ ಮೂಲವೇ ನಗೆಯುಕ್ಕಿಸಬಲ್ಲ ಈ ಹಾಸ್ಯ ಕಲಾವಿದ ಇದೀಗ ಬಿಡುಗಡೆಯ ಹಂತದಲ್ಲಿರುವ ಚೇಸ್‍ ಚಿತ್ರದಲ್ಲಿಯೂ ಪ್ರಧಾನ ಪಾತ್ರವೊಂದರಲ್ಲಿ ನಟಿಸಿದ್ದಾರೆಂದು ಹೇಳಲಾಗುತ್ತಿದೆ. ನಿರ್ದೇಶಕ ವಿಲೋಕ್ ಶೆಟ್ಟಿ ಬೋಳಾರ್ ಗಾಗಿಯೇ ಒಂದು ವಿಭಿನ್ನವಾದ ಪಾತ್ರವನ್ನು ಸೃಷ್ಟಿಸಿದ್ದಾರಂತೆ. ಅದು ಕನ್ನಡ ಚಿತ್ರರಂಗದಲ್ಲಿಯೇ ಒಂದು ವಿಭಿನ್ನ ಪ್ರಯತ್ನವಾಗಿ ನೆಲೆ ನಿಲ್ಲುವಂಥಾ ಪಾತ್ರವೆಂಬ ಸಣ್ಣ ಮಾಹಿತಿಯೊಂದಷ್ಟೇ ಚಿತ್ರತಂಡದ ಕಡೆಯಿಂದ ಹೊರಬೀಳುತ್ತದೆ.

ಇದು ಕ್ರೈಂ, ಸಸ್ಪೆನ್ಸ್ ಥ್ರಿಲ್ಲರ್ ಜಾನರಿನ ಚಿತ್ರ. ಹಾಗಂತ ಈ ಜಾನರಿನ ಸಿದ್ಧ ಸೂತ್ರಗಳಿಗೆ ಬದ್ಧವಾಗಿ ಚೇಸ್‍ ಸೃಷ್ಟಿಯಾಗಿಲ್ಲ ಅನ್ನೋದಕ್ಕೆ ಇತ್ತೀಚೆಗಷ್ಟೇ ಲಾಂಚ್ ಆಗಿರೋ ಟೀಸರ್ ಸಾಕ್ಷಿಯಂತಿದೆ. ನಿರ್ದೇಶಕ ವಿಲೋಕ್ ಶೆಟ್ಟಿ ಎರಡು ವರ್ಷಗಳ ಕಾಲ ಧ್ಯಾನದಂತೆಯೇ ಈ ಸಿನಿಮಾವನ್ನು ರೂಪಿಸಿದ್ದಾರೆ. ಈ ಸುದೀರ್ಘಾವಧಿಯ ಶ್ರಮವೆಲ್ಲವೂ ಟೀಸರ್ ಗೆ ಸಿಕ್ಕಿರುವ ಅಗಾಧ ಮೆಚ್ಚುಗೆ, ಸದಭಿಪ್ರಾಯಗಳಿಂದಲೇ ಸಾರ್ಥಕ್ಯ ಕಂಡಿವೆ. ಈ ಸಿನಿಮಾದಲ್ಲಿ ರಂಗಿತರಂಗ ಖ್ಯಾತಿಯ ರಾಧಿಕಾ ನಾರಾಯಣ್ ಮತ್ತು ಅವಿನಾಶ್ ನರಸಿಂಹರಾಜು ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಶೀತಲ್ ಶೆಟ್ಟಿ, ಅರ್ಜುನ್ ಯೋಗಿ, ಸುಶಾಂತ್ ಪೂಜಾರಿ, ಅರವಿಂದ್ ರಾವ್, ರಾಜೇಶ್ ನಟರಂಗ, ಪ್ರಮೋದ್ ಶೆಟ್ಟಿ, ವೀಣಾ ಸುಂದರ್, ಉಷಾ ಭಂಡಾರಿ, ಸುಂದರ್ ಮುಂತಾದವರ ತಾರಗಣವಿದೆ. ರೆಹಮಾನ್ ಹಾಸನ್ ಇನ್ನೊಂದು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಸಿಂಪ್ಲಿ ಫನ್ ಮೀಡಿಯಾ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರೋ ಚೇಸ್‍ ಚಿತ್ರದ ಪ್ರತೀ ಪಾತ್ರಗಳನ್ನೂ ಸಹ ನಿರ್ದೇಶಕ ವಿಲೋಕ್ ಶೆಟ್ಟಿ ಒಂದಕ್ಕಿಂತ ಒಂದು ಭಿನ್ನವಾಗಿರುವಂತೆಯೇ ನಟಿಸಿದ್ದಾರಂತೆ. ಅದೇ ರೀತಿಯಲ್ಲಿ ಅರವಿಂದ್ ಬೋಳಾರ್ ಅವರ ಪಾತ್ರವೂ ಸೃಷ್ಟಿಯಾಗಿದೆ. ರೋಬೋ 2.0 ಚಿತ್ರದಲ್ಲಿ ಅಕ್ಷಯ್ ಕುಮಾರ್ ಪಕ್ಷಿರಾಜನ ಪಾತ್ರದಲ್ಲಿ ನಟಿಸಿದ್ದರಲ್ಲಾ? ಅರವಿಂದ್ ಬೋಳಾರ್ ಪಾತ್ರವೂ ಅದೇ ಚಹರೆಯೊಂದಿಗೆ ಮೂಡಿ ಬಂದಿದೆಯಂತೆ. ಬೋಳಾರ್ ಒಂದು ಪಾತ್ರವನ್ನು ನಿರ್ವಹಿಸುತ್ತಿದ್ದಾರೆಂದರೆ ಅದರಲ್ಲಿ ಭರಪೂರ ನಗುವಿನ ಅಂಶಗಳು ಇದ್ದೇ ಇರುತ್ತವೆ. ಈ ಪಾತ್ರ ಅದೆಷ್ಟು ನಗೆಯುಕ್ಕಿಸುತ್ತದೆಯೆಂದರೆ, ಚಿತ್ರೀಕರಣದ ಸಂದರ್ಭದಲ್ಲಿ ನಗುವನ್ನು ಕಂಟ್ರೋಲು ಮಾಡಿಕೊಂಡು ನಟಿಸೋದೇ ಇತರೇ ಕಲಾವಿದರಿಗೊಂದು ದೊಡ್ಡ ಸವಾಲಿನಂತಾಗಿತ್ತಂತೆ. ಇನ್ನೇನು ಈ ಸಿನಿಮಾ ಬಿಡುಗಡೆಗೆ ತಯಾರಾಗಿರೋದರಿಂದ ಸದ್ಯದಲ್ಲಿಯೇ ಅರವಿಂದ್ ಬೋಳಾರ್ ಅವರ ನಗವಿನ ಕಚಗುಳಿಗೆ ಪ್ರೇಕ್ಷಕರೆಲ್ಲ ಒಡ್ಡಿಕೊಳ್ಳುವ ದಿನ ಹತ್ತಿರದಲ್ಲಿದೆ.

Leave a Reply

Your email address will not be published. Required fields are marked *