Sunday, 24th June 2018

Recent News

ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಗದಗ ನ್ಯಾಯಬೆಲೆ ಅಂಗಡಿ ಗುತ್ತಿಗೆದಾರನ ಲೈಸನ್ಸ್ ರದ್ದು

ಗದಗ: ನಗರದಲ್ಲಿ ಅನ್ನಭಾಗ್ಯದ ಬದಲು ಹುಳು ಅಕ್ಕಿ ಭಾಗ್ಯ ವಿತರಣೆ ಮಾಡುತ್ತಿದ್ದ ನ್ಯಾಯಬೆಲೆ ಅಂಗಡಿಯ ಗುತ್ತಿಗೆದಾರನ ಲೈಸನ್ಸ್ ರದ್ದಾಗಿದೆ.

ಇಂದು ಪಬ್ಲಿಕ್ ಟಿವಿ ನ್ಯಾಯ ಬೆಲೆ ಅಕ್ರಮದ ಸುದ್ದಿಯನ್ನು ಪ್ರಸಾರ ಮಾಡಿತ್ತು. ಈ ಕೂಡಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ನಗರದ 46 ನೇ ನ್ಯಾಯಬೆಲೆ ಅಂಗಡಿ ಗುತ್ತಿಗೆದಾರ ಆರ್.ಎಂ ಪುಟ್ಟಿ ಅವರ ಲೈಸನ್ಸ್ ರದ್ದು ಮಾಡಿದೆ. ನಂತರ ಅಲ್ಲಿರುವ ಎಲ್ಲಾ ಅಕ್ಕಿ ಮೂಟೆಗಳನ್ನ ಲಾರಿ ಮೂಲಕ ಮತ್ತೆ ಗೊದಾಮಿಗೆ ಶಿಫ್ಟ್ ಮಾಡಿದೆ.

ಏನಾಗಿತ್ತು?: ಹಸಿದ ಹೊಟ್ಟೆಗೆ ಅನ್ನ ನೀಡಲು ಅನ್ನಭಾಗ್ಯದಂತಹ ಮಹತ್ವಾಕಾಂಕ್ಷಿ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಆದ್ರೆ ಅಧಿಕಾರಿಗಳ ಎಡವಟ್ಟಿನಿಂದ ಬಡವರಿಗೆ ಅನ್ನಭಾಗ್ಯದ ಜೊತೆ ಹುಳುಗಳ ಭಾಗ್ಯವೂ ದೊರೆತಂತಾಗಿತ್ತು. ಗದಗ- ಬೆಟಗೇರಿ ನ್ಯಾಯಬೆಲೆ ಅಂಗಡಿ ಸಂಖ್ಯೆ 46 ರಲ್ಲಿ ಕಳಪೆ ಅಕ್ಕಿ ಪೂರೈಕೆಯಾಗಿದ್ದು, ಜನ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಅನ್ನಭಾಗ್ಯಕ್ಕೆ ಪೂರೈಕೆಯಾದ ಅಕ್ಕಿ ತುಂಬ ಹುಳುಗಳು ತುಂಬಿಕೊಂಡಿದ್ದು, ಪೂರೈಕೆಯಾದ ನೂರಾರು ಕ್ವಿಂಟಲ್ ಅಕ್ಕಿಯೂ ಕಳಪೆಯಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಬೆಲೆ ಅಂಗಡಿಯ ಲೈಸನ್ಸ್ ದಾರ ಆರ್.ಎಮ್.ಪುಟ್ಟಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದ್ದರು. ಅನ್ನಭಾಗ್ಯದ ನೆಪದಲ್ಲಿ ಮನುಷ್ಯರು ತಿನ್ನೋಕೆ ಯೋಗ್ಯವಲ್ಲದ ಅಕ್ಕಿ ವಿತರಣೆ ಏಕೆ ಎಂದು ಪ್ರಶ್ನಿಸಿದ್ದು, ಅಕ್ಕಿ ತುಂಬ ನುಸಿ, ಬಿಳಿ ಹುಳುಗಳು ತುಂಬಿಕೊಂಡಿತ್ತು. ಅನ್ನಭಾಗ್ಯವನ್ನೆ ನಂಬಿಕೊಂಡ ಬಹುತೇಕ ಕುಟುಂಬದ ಹಾಗೂ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿತ್ತು.

ಖಾದರ್ ಪ್ರತಿಕ್ರಿಯೆ: ಇನ್ನು ಈ ಬಗ್ಗೆ ಆಹಾರ ಸಚಿವ ಯು. ಟಿ ಖಾದರ್ ಪ್ರತಿಕ್ರಿಯಿಸಿದ್ದು, ಗದಗ ಬೆಟಗೇರಿ ನ್ಯಾಯಬೆಲೆ ಅಂಗಯಲ್ಲಿ ಹುಳ ಮಿಶ್ರಿತ ಅಕ್ಕಿಯನ್ನು ಸರಬರಾಜು ಮಾಡಿದ ನ್ಯಾಯಬೆಲೆ ಅಂಗಡಿಯ ಪರವಾನಗಿಯನ್ನು ರದ್ದು ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನ್ಯಾಯಬೆಲೆ ಅಂಗಡಿಯವರು ಹಳೆಯ ಅಕ್ಕಿಯನ್ನು ಪೂರೈಕೆ ಮಾಡಿರುವ ಸಾಧ್ಯತೆ ಇದೆ. ಈ ಅಕ್ಕಿ ಯಾವ ಡಿಪ್ಪೊದಿಂದ ಬಂದಿದೆ ಎಂದು ತನಿಖೆ ನಡೆಸಿ ಡಿಪ್ಪೋ ಮ್ಯಾನೇಜರ್ ಮೇಲೂ ಕ್ರಮ ಕೈಗೊಳ್ಳಲಾಗುವುದು. ಸರ್ಕಾರ ತಿಂಗಳು ತಿಂಗಳು ಸರಿಯಾಗಿ ಅಕ್ಕಿ ಪೂರೈಕೆ ಮಾಡುತ್ತಿದ್ದರೂ ಈ ರೀತಿ ಹಳೆಯ ಅಕ್ಕಿಯನ್ನು ಕೊಡುವ ಮಾಹಿತಿ ಇದೆ. ರಾಜ್ಯದ ಇತರೆ ಜಿಲ್ಲೆಗಳಲ್ಲೂ ಈ ರೀತಿ ಆದರೆ ತಕ್ಷಣಕ್ಕೆ ಕ್ರಮಕೈಗೊಳ್ಳಲಾಗುವುದು, ಜನರೂ ಇಂತಹ ಅಕ್ಕಿಗಳನ್ನು ಸ್ವೀಕರಿಸದೆ ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದರು.

ಸಿ.ಟಿ ರವಿ ಖಂಡನೆ: ಅನ್ನಭಾಗ್ಯ ಯೋಜನೆ ಮೂಲಕ ಹುಳು ಹಿಡಿದ ಅಕ್ಕಿಯನ್ನು ಸರ್ಕಾರ ನೀಡುತ್ತಿರುವುದನ್ನು ಬಿಜೆಪಿ ಶಾಸಕ ಸಿ.ಟಿ ರವಿ ತೀವ್ರವಾಗಿ ಖಂಡಿಸಿದ್ದಾರೆ. ಅನ್ನಭಾಗ್ಯ ಯೋಜನೆಯಡಿಯಲ್ಲಿ ಹುಳು ಹಿಡಿದ ಅಕ್ಕಿ ಭಾಗ್ಯ ಕರುಣಿಸಿ ಬಡವರಿಗೆ ದ್ರೋಹ ಬಗೆಯುತ್ತಿರುವ ನಡೆ ಖಂಡನೀಯ ಅಂತಾ ಟ್ವೀಟ್ ಮೂಲಕ ಸಿಟಿ ರವಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

Leave a Reply

Your email address will not be published. Required fields are marked *