ಬೀದರ್: ಸರ್ಕಾರಿ ಶಾಲೆಯಲ್ಲಿ ಶೌಚಾಲಯವಿಲ್ದೆ ಸಂಕಟ ಪಡ್ತಿದ್ದಾರೆ ವಿದ್ಯಾರ್ಥಿನಿಯರು

ಬೀದರ್: ಪ್ರತಿ ಮನೆಯಲ್ಲೂ ಶೌಚಾಲಯಗಳಿರಬೇಕು ಎನ್ನುವ ಈ ಕಾಲದಲ್ಲಿ ಜಿಲ್ಲೆಯ ಸರ್ಕಾರಿ ಪ್ರೌಢ ಶಾಲೆಯೊಂದರಲ್ಲಿ ಶೌಚಾಲಯವಿಲ್ಲದೆ ವಿದ್ಯಾರ್ಥಿನಿಯರು ಬಯಲಿನಲ್ಲಿ ಶೌಚ ಮಾಡಬೇಕಾದ ದುರಾದೃಷ್ಟ ಎದುರಾಗಿದೆ.

190 ವಿದ್ಯಾರ್ಥಿಗಳಿರುವ ಬೀದರ್ ತಾಲೂಕಿನ ಅಲಿಯಂಬರ್ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ 80%ರಷ್ಟು ವಿದ್ಯಾರ್ಥಿನಿಯರಿದ್ದು, ಪ್ರತಿದಿನ ಬಹಿರ್ದೆಸೆಗೆ ಹೋಗಲು ನರಕಯಾತನೆ ಪಡುತ್ತಿದ್ದಾರೆ. ಶೌಚ ಮಾಡಲು ಶಾಲೆಯಲ್ಲಿ ಶೌಚಾಲಯವಿಲ್ಲದೆ ಬಯಲಿಗೆ ಹೋಗಬೇಕಾಗಿದ್ದರಿಂದ ವಿದ್ಯಾರ್ಥಿನಿಯರು ಶಾಲೆಗೆ ಬರಲು ಮುಜುಗರ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೂಲಕವಾದ್ರು ಈ ಶಾಲೆಯ ವಿದ್ಯಾರ್ಥಿನಿಯರಿಗೆ ಶೌಚಾಲಯ ದೊರಕುತ್ತೆ ಎಂಬ ಭರವಸೆಯಿಂದ ಮನವಿ ಮಾಡಿಕೊಂಡಿದ್ದಾರೆ.

ಶಾಲೆಯಲ್ಲಿ ಓದುವ ವಿದ್ಯಾರ್ಥಿನಿಯರಿಗೆ ಶೌಚಾಲಯ ಕಡ್ಡಾಯವಾಗಿ ಇರಬೇಕು ಎಂಬ ನಿಯಮವನ್ನು ಇಲ್ಲಿನ ಶಿಕ್ಷಣ ಇಲಾಖೆ ಮತ್ತು ಜನಪ್ರತಿನಿಧಿಗಳು ಧಿಕ್ಕರಿಸಿದ್ದಾರೆ. ಈ ವಿದ್ಯಾರ್ಥಿನಿಯರು ಶೌಚಕ್ಕೆ ಹೋಗಬೇಕು ಅಂದ್ರೆ ಶಾಲೆಯಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲ. ಇದರಿಂದ ಬಯಲಲ್ಲಿ ಮುಜುಗರದಿಂದ ಶೌಚ ಮಾಡಬೇಕಾದ ಕರ್ಮ ಅವರದ್ದಾಗಿದೆ. ಈ ರೀತಿಯ ಮುಜುಗರದಿಂದಾಗಿ ವಿದ್ಯಾರ್ಥಿನಿಯರು ಶಾಲೆಗೆ ಗುಡ್ ಬೈ ಹೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ನಮಗೆ ಶೌಚ ಮಾಡಲು ತುಂಬ ಸಮಸ್ಯೆಯಾಗುತ್ತಿದ್ದು ಪ್ಲೀಸ್ ಒಂದೆ ಒಂದು ಶೌಚಾಲಯ ನಿರ್ಮಾಣ ಮಾಡಿಕೊಡಿ ಎಂದು ಬೇಡಿಕೊಳ್ಳುತ್ತಿದ್ದಾರೆ.

ಆದ್ರೆ ವಿದ್ಯಾರ್ಥಿನಿಯರ ಈ ಜ್ವಲಂತ ಸಮಸ್ಯೆಯನ್ನು ಬಗೆಹರಿಸಬೇಕಿರುವ ಜನಪ್ರತಿನಿಧಿಗಳು ಕಾಣೆಯಾಗಿರುವುದು ಬೇಸರದ ಸಂಗತಿಯಾಗಿದೆ. ಇನ್ನು ಶಿಕ್ಷಣ ಇಲಾಖೆ ಮಾತ್ರ ಜಾಣ ಕುರುಡತನ ತೋರಿಸುತ್ತಿದ್ದು, ವಿದ್ಯಾರ್ಥಿನಿಯರ ಆಕ್ರೋಶಕ್ಕೆ ಕಾರಣವಾಗಿದೆ. ಮೊದಲೇ ಸರ್ಕಾರಿ ಶಾಲೆಗಳಿಗೆ ಮಕ್ಕಳು ಬರೋದು ಕಡಿಮೆ ಎಂಬ ಆರೋಪವಿದ್ದು, ಈ ರೀತಿ ಮೂಲಭೂತ ಸೌಕರ್ಯ ನೀಡದೆ ಶಾಲೆಯ ವಿದ್ಯಾರ್ಥಿಗಳನ್ನು ಸಂಕಷ್ಟಕ್ಕೆ ದೂಡುತ್ತಿರುವುದು ಎಷ್ಟು ಸರಿ? ಎಂಬ ಪ್ರಶ್ನೆ ಎದ್ದಿದೆ. ಬೀದರ್ ಉತ್ತರ ಕ್ಷೇತ್ರದ ಮಾನ್ಯ ಶಾಸಕ ರಹೀಂಖಾನ್ ವಿದ್ಯಾರ್ಥಿನಿಯರ ಸಮಸ್ಯೆಗೆ ಸ್ಪಂದಿಸಿ ಮಾನವೀಯತೆ ಮೆರೆಯಬೇಕಿದೆ.

ಗ್ರಾಮದಲ್ಲಿ ನಡೆಯುವ ಗ್ರಾಮಸಭೆಯಲ್ಲಿ 5 ವರ್ಷದಿಂದ ಈ ಜ್ವಲಂತ ಸಮಸ್ಯೆಯ ಬಗ್ಗೆ ತಿಳಿಸಿದ್ರೂ ಸ್ಥಳೀಯ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಗ್ರಾಮದ ವಿದ್ಯಾರ್ಥಿನಿಯರ ಸಂಕಷ್ಟ ನೋಡದೆ ಪೋಷಕರು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೂಲಕ ವಿದ್ಯಾರ್ಥಿನಿಯರ ಜ್ವಲಂತ ಸಮಸ್ಯೆಗೆ ಮುಕ್ತಿ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

You might also like More from author

Leave A Reply

Your email address will not be published.

badge