Monday, 18th June 2018

Recent News

ಶೇ.80ರಷ್ಟು ಬಾಲಕಿಯರು ಇರೋ ಬೀದರ್ ಶಾಲೆಗೆ ಬೇಕಿದೆ ಶೌಚಾಲಯ!

ಬೀದರ್: ಒಂದು ಕಡೆ ಶೇ.25 ರಷ್ಟು ಶೌಚಾಲಯ ಕಟ್ಟಿ ಹಾಗೇ ಬಿಟ್ಟಿರುವ ಗುತ್ತಿಗೆದಾರರು. ಮೊತ್ತೊಂದು ಕಡೆ ರಸ್ತೆಯಲ್ಲೆ ಮುಜುಗರದಿಂದ ಶೌಚ ಮಾಡಬೇಕಾದ ಕರ್ಮ ಈ ವಿದ್ಯಾರ್ಥಿಗಳದ್ದು.

ಹೌದು. ಬೀದರ್ ತಾಲೂಕಿನ ಸಿಕಿಂದ್ರಾಪೂರ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳು ಪ್ರತಿನಿತ್ಯ ಅನುಭವಿಸುತ್ತಿರೋ ಸಂಕಟದ ಕಥೆ ಇದು. ಸರ್ಕಾರಿ ಶಾಲೆಯಲ್ಲಿ ಓದುವ ವಿದ್ಯಾರ್ಥಿನಿಯರಿಗೆ ಶೌಚಾಲಯ ಕಡ್ಡಾಯವಾಗಿ ಇರಬೇಕು ಎಂಬ ನಿಯಮವನ್ನು ಇಲ್ಲಿ ಶಿಕ್ಷಣ ಇಲಾಖೆ ಮತ್ತು ಜನಪ್ರತಿನಿಧಿಗಳು ಗಾಳಿಗೆ ತೂರಿದ್ದಾರೆ.

ಒಟ್ಟು 270 ವಿದ್ಯಾರ್ಥಿಗಳು ಇರುವ ಈ ಶಾಲೆಯಲ್ಲಿ ಶೇ.8ಂ ರಷ್ಟು ವಿದ್ಯಾರ್ಥಿನಿಯರಿದ್ದಾರೆ. ಶೌಚಾಲಯವಿಲ್ಲದ ಮುಜುಗರದಿಂದ ವಿದ್ಯಾರ್ಥಿನಿಯರು ಶಾಲೆಗೆ ಗುಡ್ ಬೈ ಹೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು 9 ಶಿಕ್ಷಕರ ಪೈಕಿ 7 ಜನ ಶಿಕ್ಷಕಿಯರು ಇದ್ದಾರೆ ಅವರಿಗೂ ಶೌಚಾಲಯದ್ದೇ ಸಮಸ್ಯೆ.

ನೈಸ್ ರಸ್ತೆಯ ಮೇಲೆ ನೈಸ್ ಆಗಿ ಓಡಾಡಿಕೊಂಡಿರೋ ಕ್ಷೇತ್ರದ ಶಾಸಕರಾದ ಖೇಣಿ ಸಾಹೇಬ್ರಿಗೆ ಮಕ್ಕಳ ಈ ಸಮಸ್ಯೆ ಕಾಣದಿರುವುದು ನಾಚಿಕೆಗೇಡಿನ ಸಂಗತಿ. ಇತ್ತ ಶಿಕ್ಷಣ ಇಲಾಖೆಯು ಕೂಡ ಜಾಣ ಕುರುಡು ತೋರುತ್ತಿದ್ದು ವಿದ್ಯಾರ್ಥಿಗಳ ಸಂಕಟಕ್ಕೆ ಕಾರಣವಾಗಿದೆ. ಸರ್ಕಾರಿ ಶಾಲೆಗಳಿಗೆ ಮಕ್ಕಳು ಬರೋದೆ ಕಡಿಮೆ ಎಂಬ ಆರೋಪವಿದೆ. ಆದ್ರೆ ಇಲ್ಲಿ ಮಕ್ಕಳು ಬರುತ್ತಿದ್ದಾರೆ. ಕನಿಷ್ಟ ಮೂಲಭೂತ ಸೌಲಭ್ಯ ಇಲ್ಲ. ಈ ರೀತಿ ಮೂಲಭೂತ ಸೌಕರ್ಯ ನೀಡದೆ ಶಾಲೆಯ ವಿದ್ಯಾರ್ಥಿಗಳನ್ನು ಸಂಕಷ್ಟಕ್ಕೆ ದೂಡುತ್ತಿರುವುದು ಎಷ್ಟು ಸರಿ?

ಪ್ರತಿದಿನ ವಿದ್ಯಾರ್ಥಿನಿಯರು ಶೌಚಕ್ಕಾಗಿ ಬಯಲಿಗೆ ಹೋಗುತ್ತಿದ್ದು ಮುಜುಗರದಿಂದ ಶಾಲೆ ಬಿಡುವ ಹಂತಕ್ಕೆ ತಲುಪಿದ್ದಾರೆ. ಇನ್ನು ಮುಂದೆಯಾದರೂ ಈ ಬೆಳಕು ಕಾರ್ಯಕ್ರಮದ ಮೂಲಕ ನಮ್ಮ ಸಮಸ್ಯೆ ಪರಿಹಾರವಾಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ ವಿದ್ಯಾರ್ಥಿಗಳು.

 

Leave a Reply

Your email address will not be published. Required fields are marked *