Thursday, 26th April 2018

Recent News

ಹಾರೆ ಹಿಡಿದ್ರೆ ಕೃಷಿಕ, ಮುಂಡಾಸು ಕಟ್ಟಿದ್ರೆ ಗೋಪಾಲಕ- ಉಡುಪಿಯ ವಿಶ್ವಪ್ರಸನ್ನ ತೀರ್ಥರು ನಮ್ಮ ಪಬ್ಲಿಕ್ ಹೀರೋ

ಉಡುಪಿ: ಹಾರೆ ಹಿಡಿದು ಹೊರಟರೆ ಕೃಷಿಕ. ಮುಂಡಾಸು ಕಟ್ಟಿ ನಿಂತರೆ ಗೋಪಾಲಕ. ಆರತಿ ಹಚ್ಚಿ ಕುಳಿತರೆ ಶ್ರೀಕೃಷ್ಣನ ಸೇವಕ. ಹೌದು. ಉಡುಪಿಯ ಪೇಜಾವರ ಮಠದ ಕಿರಿಯ ಯತಿ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ನಮ್ಮ ಪಬ್ಲಿಕ್ ಹೀರೋ.

ಮೂರು ಹೊತ್ತು ಪೂಜೆ ಮಾಡೋದು, ಭಕ್ತರು ಸೇರಿದಾಗ ಪ್ರವಚನ ಮಾಡಿ ನಾಲ್ಕು ಸದ್ವಿಚಾರಗಳನ್ನು ಹೇಳಿ ಧರ್ಮಪ್ರಚಾರ ಮಾಡೋದು ಸ್ವಾಮೀಜಿಗಳ ಕೆಲಸ. ಆದ್ರೆ ಉಡುಪಿಯ ಪೇಜಾವರ ಮಠದ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ತುಂಬಾ ವಿಭಿನ್ನ. ಡಿಗ್ರಿ ಮುಗಿದ ಬಳಿಕ ಸಂಸಾರದ ಕೊಂಡಿ ಕಳಚಿಕೊಂಡು ಮಠ ಸೇರಿದ್ರು. ಯಾವುದೇ ಪ್ರಚಾರದ ಅಪೇಕ್ಷೆಯಿಲ್ಲದೇ ಈ 53ರ ವಯಸ್ಸಲ್ಲೂ 23ರ ಯುವಕರಂತೆ ಚುರುಕಿನಿಂದ ಕೆಲಸ ಮಾಡ್ತಾರೆ. ಪೀಠಾಧಿಕಾರ ಪಡೆದ ನಂತರವೂ ಕೃಷಿಕರಾಗಿದ್ದಾರೆ. 2004ರಲ್ಲಿ ಉಡುಪಿಯಿಂದ 20 ಕಿಲೋಮೀಟರ್ ದೂರವಿರುವ ನೀಲಾವರ ಎಂಬಲ್ಲಿ 37 ಎಕ್ರೆ ಜಮೀನು ಖರೀದಿ ಮಾಡಿ ಗೋಶಾಲೆಯನ್ನು ಆರಂಭಿಸಿದರು. ಹೀಗಾಗಿ ಇವತ್ತು ಈ ನೀಲಾವರದಲ್ಲಿ 1,280ಕ್ಕೂ ಹೆಚ್ಚು ಗೋವುಗಳಿವೆ. ಗೋವುಗಳೆಂದ್ರೆ ಸ್ವಾಮೀಜಿಗೆ-ಸ್ವಾಮೀಜಿ ಅಂದ್ರೆ ಗೋವುಗಳಿಗೆ ಅಷ್ಟು ಪ್ರೀತಿ.

ಗೋವುಗಳಿಗೆ ಆಹಾರದ ಸಮಸ್ಯೆ ಬರದಂತೆ ತಾವೇ ಮೇವನ್ನು ಬೆಳೆದು ಕಟಾವು ಮಾಡುತ್ತಾರೆ. ಸಾವಿರಾರು ಗೋವುಗಳಿದ್ದರೂ ಇಲ್ಲಿ ಸಿಗುತ್ತಿರೋದು ಕೇವಲ 22 ಲೀಟರ್ ಹಾಲು ಮಾತ್ರ. ಪ್ರತೀ ದಿನ ಸುಮಾರು 50 ಸಾವಿರ ರೂಪಾಯಿ ಗೋಶಾಲೆಗೆ ಖರ್ಚಾಗುತ್ತದೆ. ಸರ್ಕಾರ ಗೋಶಾಲೆಗೆ ಕೊಡೋ ನೆರವು ಕೂಡಾ ಕಡಿಮೆಯಾಗಿದೆ. ಆದ್ರೆ ಎಲ್ಲವನ್ನೂ ಪೇಜಾವರ ಕಿರಿಯ ಶ್ರೀಗಳೇ ಭರಿಸುತ್ತಾರೆ.

ಇಷ್ಟೇ ಅಲ್ಲ ಬುದ್ದಿಮಾಂಧ್ಯ ಮಕ್ಕಳಿಗಾಗಿ ಪಕ್ಕದಲ್ಲೇ ಒಂದು ವಿಶೇಷ ಶಾಲೆ ತೆರೆದಿದ್ದಾರೆ. ಮೂವರು ಸಿಬ್ಬಂದಿಯನ್ನಿಟ್ಟು ಎಲ್ಲರ ಪೋಷಣೆ ಮಾಡುತ್ತಾರೆ. ಕಾಲ್ನಡಿಗೆಯಲ್ಲೇ ದೇಶ ಸಂಚಾರ ಮಾಡಿರುವ ಸ್ವಾಮೀಜಿ, ಹೋದಲೆಲ್ಲಾ ಪ್ರವಚನ ಮಾಡಿ ಹಣ ಸಂಗ್ರಹ ಮಾಡಿ ಅದನ್ನು ಗೋಶಾಲೆ ಹಾಗೂ ವಿಶೇಷ ಶಾಲೆಗೆ ಬಳಸುತ್ತಾರೆ. ಇದೆಲ್ಲದರ ಜೊತೆ ಮಠದ ದೊಡ್ಡ ಜವಾಬ್ದಾರಿ ಕೂಡಾ ನಿರ್ವಹಿಸುತ್ತಿದ್ದಾರೆ.

Leave a Reply

Your email address will not be published. Required fields are marked *