ನಾಲ್ಕನೇ ಕ್ಲಾಸ್‍ಗೆ ಶಾಲೆ ಬಿಟ್ರೂ ಓದು ನಿಲ್ಲಲಿಲ್ಲ – ಟಿವಿ ಬೆಳಕಲ್ಲೇ ಓದಿ ಸಾಧನೆಗೈದ ಛಲಗಾತಿ ನಮ್ಮ ಪಬ್ಲಿಕ್ ಹೀರೋ

ಹಾಸನ: ಇವತ್ತಿನ ನಮ್ಮ ಪಬ್ಲಿಕ್ ಹೀರೋ ಶಾಲೆಗೆ ಹೋಗಿದ್ದು 4ನೇ ಕ್ಲಾಸ್ ವರೆಗೆ ಮಾತ್ರ. ಆ ಬಳಿಕ ಬಡತನದಿಂದಾಗಿ ಶಾಲೆ ಮೆಟ್ಟಿಲನ್ನೇ ಏರಲಿಲ್ಲ. ಮನೆಯಲ್ಲೇ ಕಷ್ಟಪಟ್ಟು ಓದಿ ಬಿಎಡ್ ಮಾಡಿ, ಈಗ ಮೊರಾರ್ಜಿ ಶಾಲೆಯಲ್ಲಿ ಟೀಚರ್ ಆಗಿದ್ದಾರೆ. ಇವರ ಒಂದೊಂದು ಹೆಜ್ಜೆಯೂ ಖಂಡಿತಾ ನಿಮಗೆಲ್ಲಾ ಸ್ಫೂರ್ತಿ ಆಗುತ್ತದೆ.

ಮೂಲತಃ ಅರಸೀಕೆರೆ ತಾಲೂಕಿನ ಕಾಮೇನಹಳ್ಳಿ ಗ್ರಾಮದವರಾದ ವಿಜಯಕುಮಾರಿ ಡಿ.ಎಸ್ ನಮ್ಮ ಪಬ್ಲಿಕ್ ಹೀರೋ. ಕಾಳಿಬಾಯಿ ಶಂಕರ್‍ನಾಯ್ಕ್ ದಂಪತಿಯ ಮೂವರು ಹೆಣ್ಣುಮಕ್ಕಳಲ್ಲಿ ಇವರೇ ಕೊನೆಯವರು. ನಾಲ್ಕನೇ ಕ್ಲಾಸ್ ಬಳಿಕ ಶಾಲೆಗೆ ಹೋಗಲು ಆಗಲಿಲ್ಲ. ಮನೆಯಲ್ಲೇ ಅಪ್ಪ-ಅಮ್ಮನಿಗೆ ಕೃಷಿ ಕೆಲಸದಲ್ಲಿ ಸಹಾಯ ಮಾಡಿಕೊಂಡಿದ್ದರು. ಆದರೂ ಓದುವ ಆಸೆ ಬೆಟ್ಟದಷ್ಟಿತ್ತು. ಮನೆಯಲ್ಲೇ ಯಾರಿಗೂ ಗೊತ್ತಾಗದಂತೆ ಸಹೋದರಿಯ ಪುಸ್ತಕಗಳನ್ನು ಓದುತ್ತಿದ್ದರು.

ಒಮ್ಮೆ ಹಕ್ಕಿಪಿಕ್ಕಿ ಜನಾಂಗದ ಯುವತಿ ಮನೆಯಲ್ಲಿಯೇ ಓದಿಕೊಂಡು ಪಿಹೆಚ್‍ಡಿ ಪದವಿ ಪಡೆದ ವಿಚಾರ ಇವರ ಮನಸ್ಸಿನ ಮೇಲೆ ಪರಿಣಾಮ ಬೀರಿತು. ಆಮೇಲೆ 10 ವರ್ಷಗಳ ನಂತರ 2005ರಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಕಟ್ಟಿ ಮೊದಲ ಪ್ರಯತ್ನದಲ್ಲೇ ಪಾಸ್ ಮಾಡಿದ್ರು. ನಂತರ ಕಾಲೇಜಿಗೆ ಹೋಗೋಣ ಅಂದರೆ ಅಕ್ಕನ ಬಾಣಂತನದಿಂದ ಹೋಗಲು ಆಗಲಿಲ್ಲ. ದೊಡ್ಡಪ್ಪನ ಮನೆಯಲ್ಲಿ ಎಲ್ಲರೂ ಟಿವಿ ನೋಡಲು ಲೈಟ್ ಆಫ್ ಮಾಡಿದ್ರೆ ವಿಜಯಕುಮಾರಿ ಮಾತ್ರ ಆ ಟಿವಿ ಬೆಳಕಲ್ಲೇ ಓದಿದ್ದಾರೆ.

ಛಲ ಬಿಡದೇ ಮನೆಯಲ್ಲೇ ಓದಿ ಮತ್ತೆ ಪಿಯುಸಿ ಪಾಸ್ ಮಾಡಿದ್ರು. ಆಮೇಲೆ ಹಿಂದಿ ಬಿಎಡ್‍ನಲ್ಲಿ ಫಸ್ಟ್ ಕ್ಲಾಸ್‍ನಲ್ಲಿ ಪಾಸ್ ಆದ್ರು. ಇವರ ಯಶೋಗಾಥೆ ನಿಲ್ಲೋದಿಲ್ಲ ನಂತರ ನಡೆದ ಸಿಇಟಿಯಲ್ಲಿ ರಾಜ್ಯಕ್ಕೆ ನಂಬರ್ ಒನ್ ಸ್ಥಾನ ಪಡೆದು ಈಗ ಚನ್ನರಾಯಪಟ್ಟಣದ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಹಿಂದಿ ಶಿಕ್ಷಕಿಯಾಗಿದ್ದಾರೆ. ಇವರ ಈ ಸಾಧನೆ ಹಿಂದೆ ಗಂಡನ ಶ್ರಮ ದೊಡ್ಡದಿದೆ.

ಹಿಂದಿ ಶಿಕ್ಷಕಿಯಾಗಿರೋ ಇವರು ಶಾಲಾಮಕ್ಕಳಿಗೂ ಅಚ್ಚುಮೆಚ್ಚು. ಕಂಪ್ಯೂಟರ್ ಕಲಿತಿದ್ದಾರೆ. ಡಿಟಪಿ ಮಾಡ್ತಾರೆ. ಸಿಇಟಿ ಪರೀಕ್ಷೆ ತೆಗೆದುಕೊಂಡವರಿಗೆ ಕೋಚಿಂಗ್ ಕೊಡ್ತಾರೆ. ತಾವು ಹೋದಲೆಲ್ಲಾ ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಕೇಳಿಕೊಳ್ಳುತ್ತಾರೆ. ಶಾಲೆ ಬಿಟ್ಟು 12 ವರ್ಷಗಳ ನಂತರವೂ ತನ್ನ ಗುರಿ ಸಾಧಿಸಿದ ಇವರು ನಿಜಕ್ಕೂ ನಮ್ಮ ಪಬ್ಲಿಕ್ ಹೀರೋ ಅನ್ನೋದಕ್ಕೆ ಹೆಮ್ಮೆ ಆಗುತ್ತೆ. ಶಾಲೆ ಬಿಟ್ಟ ಹೆಣ್ಣು ಮಕ್ಕಳು ಈ ಹೀರೋ ನೋಡಿ ಒಂದಿಷ್ಟು ಸಾಧನೆ ಮಾಡಿದರೆ ಅದಕ್ಕಿಂತ ಹೆಮ್ಮೆ ಮತ್ತೊಂದಿಲ್ಲ.

You might also like More from author

Leave A Reply

Your email address will not be published.

badge