Saturday, 23rd June 2018

Recent News

ಎಂಜಿನಿಯರಿಂಗ್ ಓದಿದ್ರೂ ಗೋವು, ರೈತರ ರಕ್ಷಣೆಗೆ ನಿಂತ ಚಿಕ್ಕಮಗಳೂರಿನ ಶಿವಪ್ರಸಾದ್

ಚಿಕ್ಕಮಗಳೂರು: ನಿಜವಾದ ಗೋವು ರಕ್ಷಕ ಅಂದ್ರೆ ಇವತ್ತಿನ ಪಬ್ಲಿಕ್ ಹೀರೋ ಆದ ಚಿಕ್ಕಮಗಳೂರಿನ ಶಿವಪ್ರಸಾದ್. ಗಂಡು ಕರು ಅನ್ನೋ ಕಾರಣಕ್ಕೆ ಆ ಕರುವನ್ನ ಕಸಾಯಿಖಾನೆಗೆ ಕೊಡೋದನ್ನ ನೋಡಿ ಮನನೊಂದು ಅವತ್ತಿನಿಂದಲೇ ಗೋಶಾಲೆ ಆರಂಭಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಅಜ್ಜಂಪುರ ನಿವಾಸಿಯಾದ ಶಿವಪ್ರಸಾದ್ ಮೆಕಾನಿಕಲ್ ಎಂಜಿನಿಯರ್ ಓದಿದ್ದಾರೆ. ಆದ್ರೂ ಗೋವು ಹಾಗೂ ರೈತರ ರಕ್ಷಣೆಗೆ ನಿಂತಿದ್ದಾರೆ. ಗಂಡು ಕರು ಅನ್ನೋ ಕಾರಣಕ್ಕೆ ಕಸಾಯಿಖಾನೆಗೆ ಕರೆದೊಯ್ಯುತ್ತಿದ್ದದನ್ನ ಕಂಡು ಅತೀವವಾಗಿ ಮನನೊಂದು ಸ್ವಂತ ಖರ್ಚಿನಲ್ಲಿ ಗೋಶಾಲೆ ತೆರೆದಿದ್ದಾರೆ.

ಈ ಗೋಶಾಲೆಗೆ ಯಾರು ಬೇಕಾದ್ರು ತಮ್ಮ ದನಕರುಗಳನ್ನ ತಂದು ಇಲ್ಲಿ ಬಿಡಬಹುದು. ಸದ್ಯಕ್ಕೆ ಇಲ್ಲಿ ಹತ್ತು ರಾಸುಗಳಿವೆ. ದೊಡ್ಡ ಪ್ರಮಾಣದಲ್ಲಿ ಗೋಶಾಲೆ ತೆರೆಯಬೇಕೆಂದೇ ತಮ್ಮ ಜಮೀನಿನಲ್ಲಿ ಒಂದು ಎಕರೆಯಷ್ಟು ಭೂಮಿಯನ್ನ ಮೀಸಲಿಟ್ಟಿದ್ದಾರೆ. ಹಾಗೆ ಗೋವಿನ ಸಗಣಿ ಹಾಗೂ ಗಂಜಲದಿಂದ 20ಕ್ಕೂ ಹೆಚ್ಚು ವಿವಿಧ ಉತ್ಪನ್ನಗಳನ್ನ ಮಾಡಿ ಸ್ವಂತ ಕಂಪನಿಯೊಂದನ್ನ ನಿರ್ಮಿಸಿದ್ದಾರೆ.

ಅಷ್ಟೇ ಅಲ್ಲ ರೈತರೊಂದಿಗೆ ಕೈಜೋಡಿಸಿ 128 ಎಕರೆಯಲ್ಲಿ ಸಾವಯವ ಗೊಬ್ಬರ ಮಾತ್ರ ಬಳಸಿ ತರಕಾರಿ ಬೆಳೆಯುತ್ತಿದ್ದಾರೆ. ಈ ತರಕಾರಿಯನ್ನ ಬೆಂಗಳೂರಿನ ದೊಡ್ಡ-ದೊಡ್ಡ ಅಪಾರ್ಟ್‍ಮೆಂಟ್‍ಗೆ ಪೂರೈಸ್ತಿದ್ದಾರೆ. ಮಾರ್ಕೆಟ್ ರೇಟ್‍ಗಿಂತ ಶೇ.25ರಷ್ಟು ಹೆಚ್ಚಿನ ಹಣವನ್ನ ರೈತರಿಗೆ ಕೊಟ್ಟು, ತಾವೂ ಬದುಕುತ್ತಿದ್ದಾರೆ. ಇವರ ಈ ಸಹಕಾರದ ಯೋಜನೆಯಿಂದ ಪಾಳುಬಿದ್ದ ಭೂಮಿ ಈಗ ಕೃಷಿ ಭೂಮಿಯಾಗಿದೆ. ಕೆಲಸಕ್ಕಾಗಿ ನಗರಗಳತ್ತ ಹೋಗ್ತಿದ್ದ ಯುವಕರು ಕೃಷಿಯತ್ತ ಮುಖಮಾಡಿದ್ದಾರೆ.

ಒಟ್ಟಿನಲ್ಲಿ ಗೋವನ್ನ ಹಿಂಸಿಸದೆ ಪೋಷಿಸಿ ಹೀಗೂ ಬದುಕು ಕಟ್ಟಿಕೊಳ್ಳಬಹುದು ಅಂತ ತೋರಿಸಿರೋ ಶಿವಪ್ರಸಾದ್‍ಗೆ ನಮ್ಮದೊಂದು ಸಲಾಂ.

Leave a Reply

Your email address will not be published. Required fields are marked *