Saturday, 23rd June 2018

Recent News

ತಿಂಗಳಿಗೆ 80 ಸಾವಿರ ರೂ. ಖರ್ಚು ಮಾಡಿ ಗ್ರಾಮದ ಅಭಿವೃದ್ಧಿಗೆ ನೆರವಾಗಿರೋ ತುಮಕೂರಿನ ರವಿಕುಮಾರ್

ತುಮಕೂರು: ಗ್ರಾಮೀಣ ಭಾಗಗಳಲ್ಲಿ ಹಾಗೋ ಹೀಗೋ ಉನ್ನತ ಶಿಕ್ಷಣ ಪಡೆದು ಒಂದೊಳ್ಳೆ ಕೆಲಸಕ್ಕೆ ಹೋದ ನಂತರ ಬಹುತೇಕ ಜನ ತಮ್ಮ ಗ್ರಾಮವನ್ನೇ ಮರೆತು ಬಿಡುತ್ತಾರೆ. ತಾವು ಹುಟ್ಟಿ ಬೆಳೆದ ತಮ್ಮ ಗ್ರಾಮದ ಜನ ಹಾಗೂ ಮಕ್ಕಳ ಬಗ್ಗೆ ಯೋಚಿಸುವುದಿರಲಿ, ಅತ್ತ ತಿರುಗಿಯೂ ನೋಡಲ್ಲ. ಆದರೆ ಇಂದಿನ ನಮ್ಮ ಪಬ್ಲಿಕ್ ಹೀರೋ ತಿಂಗಳಿಗೆ 80 ಸಾವಿರ ರೂ. ಖರ್ಚು ಮಾಡಿ ಗ್ರಾಮದ ಅಭಿವೃದ್ಧಿಗೆ ನೆರವಾಗಿದ್ದಾರೆ.

ರವಿಕುಮಾರ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಬೈಚಾಪುರ ಗ್ರಾಮದವರು. ಡಿಪ್ಲೊಮಾ ಇನ್ ಮೆಕಾನಿಕಲ್ ಇಂಜಿನಿಯರಿಂಗ್ ಮಾಡಿರುವ ಇವರು ಖಾಸಗಿ ಬ್ಯಾಂಕುಗಳ ಆರ್ಥಿಕ ಸಲಹೆಗಾರರಾಗಿ ಕೆಲಸ ಮಾಡುತ್ತಾರೆ. ತಿಂಗಳಿಗೆ ಸರಿ ಸುಮಾರು 1 ಲಕ್ಷದ 20 ಸಾವಿರ ರೂಪಾಯಿ ಸಂಪಾದನೆ ಮಾಡುತ್ತಾರೆ.

ರವಿಕುಮಾರ್ ಎಲ್ಲರಂತೆ ಯೋಚಿಸದೇ ಗ್ರಾಮಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಕಾರಣದಿಂದ ಮಹಿಳೆಯರಿಗೆ ಟೈಲರಿಂಗ್, ಎಂಬ್ರಾಯ್ಡರಿ, ಕಂಪ್ಯೂಟರ್ ತರಬೇತಿ ಕೊಡುತ್ತಾರೆ. ಜೊತೆಗೆ ಮಕ್ಕಳಿಗೆ ಟ್ಯೂಷನ್ ಹೇಳಿ ಕೊಡುತ್ತಾರೆ. ತಮ್ಮದೇ ದುಡ್ಡಲ್ಲಿ ಪಠ್ಯೇತರ ವಸ್ತುಗಳನ್ನು ಖರೀದಿಸಿ ಕೊಡುತ್ತಾರೆ.

ಒಂದು ಬಾರಿ 120 ನಿರುದ್ಯೋಗಿ ಯುವತಿಯರು ಕಂಪ್ಯೂಟರ್ ತರಬೇತಿ ಹಾಗೂ 60 ಮಹಿಳೆಯರು ಟೈಲರಿಂಗ್ ಕಲಿಯುತ್ತಿದ್ದಾರೆ. ಪ್ರತಿದಿನ ಸರ್ಕಾರಿ ಶಾಲೆಯ 150 ಮಕ್ಕಳಿಗೆ ಉಚಿತ ಟ್ಯೂಷನ್ ಹೇಳಿಕೊಡಲಾಗುತ್ತಿದೆ. ಇಂಥಹ ತರಬೇತಿ ಪ್ರತಿವರ್ಷವೂ ನಡೆಯುತ್ತಲೇ ಇರುತ್ತದೆ. ಕಳೆದ 7 ವರ್ಷಗಳಿಂದ ರವಿಕುಮಾರ್ ಈ ಸೇವೆ ಮಾಡುತ್ತಲೇ ಬಂದಿದ್ದಾರೆ. ಗ್ರಾಮದಲ್ಲಿ ತಮ್ಮದೇ ಸ್ವಂತ ಕಟ್ಟಡವನ್ನು ಇದಕ್ಕಾಗಿ ಮೀಸಲಿಟ್ಟಿದ್ದಾರೆ. ಇದೆಲ್ಲದಕ್ಕೂ ತರಬೇತಿ ನೀಡುವ ಶಿಕ್ಷಕರು ಮತ್ತು ವಿದ್ಯುತ್ ಹಾಗೂ ಇತರೆ ಎಲ್ಲಾ ಖರ್ಚು ಸೇರಿ ಪ್ರತಿ ತಿಂಗಳು 80 ಸಾವಿರ ರೂ. ಹಣವನ್ನು ತಮ್ಮ ಸಂಪಾದನೆಯಲ್ಲಿ ಖರ್ಚು ಮಾಡುತ್ತಿದ್ದಾರೆ.

ರವಿಕುಮಾರ್ ಅವರ ನಿಸ್ವಾರ್ಥ ಸೇವೆ ಕಂಡು ಮೈಂಡ್ ಟ್ರೀ ಎಂಬ ಸಾಫ್ಟ್‍ವೇರ್ ಕಂಪೆನಿ ರವಿಕುಮಾರ್‍ಗೆ ಅಲ್ಪ ಸಹಾಯ ಮಾಡಲು ಮುಂದಾಗಿದೆ. ಇವರ ಸಹಾಯಾರ್ಥದ ಬದುಕಿಗೆ ದೇವರು ಮತ್ತಷ್ಟು ಶಕ್ತಿ ಕೊಡಲಿ ಅಂತಾ ಹಾರೈಸೋಣ.

 

Leave a Reply

Your email address will not be published. Required fields are marked *