Friday, 23rd March 2018

Recent News

ಅನುದಾನಕ್ಕೆ ಕತ್ತರಿ ಹಾಕಿದ್ರೂ ಕುಗ್ಗಲಿಲ್ಲ- ಭತ್ತ ಬೆಳೆದು ಸರ್ಕಾರಕ್ಕೆ ಸವಾಲೆಸೆದ ಶ್ರೀರಾಮ ವಿದ್ಯಾಕೇಂದ್ರದ ಮಕ್ಕಳು

ಮಂಗಳೂರು: ರಾಜಕೀಯ ಜಿದ್ದಿನಿಂದ ಸುದ್ದಿಯಲ್ಲಿದ್ದ ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರ ಈಗ ಛಲದಿಂದ ಸುದ್ದಿಯಾಗಿದೆ. ಅನುದಾನ ಕಡಿತಗೊಳಿಸಿ ಮಧ್ಯಾಹ್ನದ ಬಿಸಿಯೂಟ ಕಸಿದುಕೊಂಡಿತ್ತ ಸರ್ಕಾರದ ವಿರುದ್ಧ ಶ್ರೀರಾಮವಿದ್ಯಾಕೇಂದ್ರದ ಮಕ್ಕಳೇ ಭತ್ತ ಬೆಳೆದಿದ್ದಾರೆ.

ಆಗಸ್ಟ್ ತಿಂಗಳಲ್ಲಿ ಸಿದ್ದು ಸರ್ಕಾರ, ಕಲ್ಲಡ್ಕ ಪ್ರಭಾಕರ್ ಭಟ್ಟರ ಶ್ರೀರಾಮ ವಿದ್ಯಾಕೇಂದ್ರದ ಮಕ್ಕಳ ಬಿಸಿಯೂಟಕ್ಕೆ ಕತ್ತರಿ ಹಾಕಿತ್ತು. ಆದ್ರೆ, ಯಾರ ಮುಂದೆಯೂ ಕೈಯೊಡ್ಡದ ಕಲ್ಲಡ್ಕ ಶಾಲೆಯ ಮಕ್ಕಳು ಇದೀಗ ಸ್ವಾವಲಂಬಿಗಳಾಗಿದ್ದಾರೆ.

ಸರ್ಕಾರ ಅನುದಾನ ಕಟ್ ಮಾಡಿದ ಕೂಡಲೇ ವಿದ್ಯಾರ್ಥಿಗಳು ಶಾಲೆಗೆ ಸೇರಿದ ಸುಮಾರು ಏಳು ಎಕರೆ ಗದ್ದೆಯಲ್ಲಿ ತಾವೇ ಭತ್ತದ ಪೈರು ನಾಟಿ ಮಾಡಿದ್ದರು. ಇದೀಗ ಭತ್ತ ಬೆಳೆದು ನಿಂತಿದೆ. ವಿದ್ಯಾರ್ಥಿಗಳು ತಾವೇ ಕಟಾವು ಮಾಡಿ ಒಟ್ಟು ಮಾಡಿದ್ದಾರೆ. ಸುಮಾರು 20 ಕ್ವಿಂಟಾಲ್ ನಷ್ಟು ಭತ್ತ ಸಿಕ್ಕಿದೆ.

ಸರ್ಕಾರ ಅನ್ನ ಕಸಿದರೂ ನಾವೇ ನಮಗೆ ಬೇಕಾದ ಅನ್ನದ ದಾರಿಯನ್ನು ಹುಡುಕಿದ್ದೇವೆ ಅನ್ನುವ ಖುಷಿ ವಿದ್ಯಾರ್ಥಿಗಳಲ್ಲಿದೆ. ಇನ್ನು ಭತ್ತದ ಹುಲ್ಲನ್ನ ಅಲ್ಲಿನ ದನಕರುಗಳಿಗೆ ಮೇವನ್ನಾಗಿ ಬಳಸಲಾಗುತ್ತಿದೆ.

ಮಕ್ಕಳ ಈ ಕೃಷಿಗೆ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಕಲ್ಲಡ್ಕ ಡಾ.ಪ್ರಭಾಕರ ಭಟ್ಟರು ಸಾಥ್ ನೀಡಿದ್ರು. ಇದೀಗ ಮಕ್ಕಳ ಕೃಷಿಗೆ ಫಲ ಸಿಕ್ಕಿರೋ ಖುಷಿ ಅವರಲ್ಲಿದೆ. ಭತ್ತ ಕೃಷಿಯನ್ನು ಮುಂದುವರೆಸಿಕೊಂಡು ಹೋಗಲು ಶಾಲೆ ಆಡಳಿತ ಮಂಡಳಿ ನಿರ್ಧರಿಸಿದೆ. ಒಟ್ಟಿನಲ್ಲಿ ಮಕ್ಕಳ ಸ್ವಾವಲಂಬನೆ ಇಡೀ ದೇಶಕ್ಕೆ ಮಾದರಿ ಅಂದ್ರೆ ತಪ್ಪಾಗಲಿಕ್ಕಿಲ್ಲ.

Leave a Reply

Your email address will not be published. Required fields are marked *