Monday, 21st August 2017

ಖಾಕಿ ತೊಟ್ಟರೂ ಮಕ್ಕಳಿಗೆ ಪಾಠ- ಸಾಮಾಜಿಕ ಅನಿಷ್ಠಗಳ ಬಗ್ಗೆ ಜಾಗೃತಿ

ಹಾವೇರಿ: ಇವತ್ತಿನ ದಿನಗಳಲ್ಲಿ ಮಕ್ಕಳಿಗೆ ಕಾನೂನು ಸುವ್ಯವಸ್ಥೆ, ಮೂಢನಂಬಿಕೆಗಳ ಬಗ್ಗೆ ತಿಳಿ ಹೇಳುವವರೇ ಕಡಿಮೆ. ಆದ್ರೆ ಇವತ್ತಿನ ನಮ್ಮ ಪಬ್ಲಿಕ್ ಹೀರೋ ಪೊಲೀಸ್ ಪೇದೆ ಅಶೋಕ್ ಎಂಬವರು ತಮ್ಮ ಬಿಡುವಿನ ವೇಳೆಯಲ್ಲಿ ಮಕ್ಕಳಿಗೆ ಕಾನೂನು ಜಾಗೃತಿ ಪಾಠ ಮಾಡುತ್ತಿದ್ದಾರೆ.

ಹೌದು, ಅಶೋಕ್ ಕೊಂಡ್ಲಿ ಹಾವೇರಿಯ ಹಾನಗಲ್ ಪೊಲೀಸ್ ಠಾಣೆಯಲ್ಲಿ ಹವಾಲ್ದಾರರಾಗಿದ್ದಾರೆ. ಪೊಲೀಸ್ ಡ್ರೆಸ್‍ನಲ್ಲಿ ಇರೋವ್ರು ಹೀಗ್ಯಾಕೆ ಪಾಠ ಮಾಡ್ತಿದ್ದಾರೆ ಅಂತ ಅಚ್ಚರಿ ಪಡಬೇಡಿ. ಯಾಕಂದ್ರೆ ಇದು ಅವರ ಸಾಮಾಜಿಕ ಕಾಳಜಿಯಾಗಿದೆ.

ಮೂಲತಃ ಧಾರವಾಡದ ಅಮ್ಮಿನಭಾವಿಯವರಾದ ಅಶೋಕ್ 1994ರಲ್ಲಿ ಪೊಲೀಸ್ ಪೇದೆ ಆಗಿ ಸೇರಿ 23 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಖಾಕಿ ತೊಟ್ಟಿದ್ದರೂ ಸಾಮಾಜಿಕ ಸೇವೆಯೆಡೆಗಿನ ತುಡಿತ ನಿಂತಿಲ್ಲ. ತಾವು ಸೇವೆ ಸಲ್ಲಿಸಿರೋ ಕಡೆಯಲ್ಲೆಲ್ಲಾ ಬಿಡುವಿನ ವೇಳೆ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಎರಡ್ಮೂರು ಗಂಟೆ ಮಕ್ಕಳಿಗೆ ಕಾನೂನು, ರಸ್ತೆ ನಿಯಮ, ಮೂಢನಂಬಿಕೆಗಳು, ಬಾಲ್ಯವಿವಾಹ, ದೌರ್ಜನ್ಯದಂತ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಹೀಗೆ ಎರಡು ಸಾವಿರಕ್ಕೂ ಅಧಿಕ ಶಾಲೆ, ಸಭೆ, ಸಮಾರಂಭಗಳಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸಿದ್ದಾರೆ. ಅಶೋಕ್ ಕಾರ್ಯಕ್ಕೆ ಜಿಲ್ಲಾ ವರಿಷ್ಠಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಾಹಿತ್ಯದಲ್ಲಿ ಆಸಕ್ತಿ ಹೊಂದಿರುವ ಇವರು ನಾ ಮರೆಯಲಿ ಹ್ಯಾಂಗ, ಹನಿಗವನಗಳು, ಮೋಡಗಳಿಲ್ಲದ ಮುಗಿಲು ಅಂತ ಮೂರು ಪುಸ್ತಕಗಳನ್ನ ಹೊರ ತಂದಿದ್ದಾರೆ. ಶೀಘ್ರವೇ ಕಾದಂಬರಿಯೊಂದನ್ನ ಹೊರತರಲಿದ್ದಾರೆ. ಜೊತೆಗೆ ಹಾಸ್ಯ ಕಲಾವಿದರೂ ಆಗಿದ್ದಾರೆ.

 

Leave a Reply

Your email address will not be published. Required fields are marked *