Sunday, 27th May 2018

Recent News

ನಾಲ್ಕು ಕ್ಷೇತ್ರಕ್ಕೆ ಅವಿರೋಧವಾಗಿ ಬಂತು ಹೆಸರುಗಳು- ಕಾರ್ಕಳದಲ್ಲಿ ಮೂವರ ನಡುವೆ ಫೈಟ್

– ಉಡುಪಿಗೆ ಬಂದ ಕೆಪಿಸಿಸಿ ವೀಕ್ಷಕರ ಮುಂದೆ ಕೈ ನಾಯಕರ ಶಕ್ತಿ ಪ್ರದರ್ಶನ

ಉಡುಪಿ: 2018 ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಕೆಪಿಸಿಸಿ ಸಿದ್ಧ ಮಾಡುತ್ತಿದೆ. ರಾಜ್ಯಾದ್ಯಂತ ಪ್ರವಾಸ ಹೊರಟಿರುವ ವೀಕ್ಷಕರ ಟೀಂ ಜನರ ಅಭಿಪ್ರಾಯ ಸಂಗ್ರಹ ಮಾಡುತ್ತಿದೆ. ಈ ನಡುವೆ ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಿಗೆ ಅವಿರೋಧವಾಗಿ ಒಂದೊಂದೇ ಹೆಸರು ಬಂದಿದ್ದು, ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಕೈ ಪಕ್ಷದಿಂದ ಮೂವರು ಜಿದ್ದಿಗೆ ಬಿದ್ದಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಐದು ವಿಧಾನಸಭಾ ಕ್ಷೇತ್ರಗಳಿದ್ದು ನಾಲ್ಕು ಕ್ಷೇತ್ರಗಳಲ್ಲಿ ತಲಾ ಒಬ್ಬೊಬ್ಬ ಅಭ್ಯರ್ಥಿಯ ಹೆಸರು ಮಾತ್ರ ಇದೆ. ಕೆಪಿಸಿಸಿ ವೀಕ್ಷಕರು ಉಡುಪಿ ಜಿಲ್ಲೆಯಲ್ಲಿ ಸಮೀಕ್ಷೆ ನಡೆಸಿದ್ದು, ಕಾರ್ಕಳ ಮಾತ್ರ ಪಕ್ಷಕ್ಕೆ ಕಗ್ಗಂಟಾಗಿದೆ. ಮಾಜಿ ಸಿಎಂ ವೀರಪ್ಪ ಮೋಯ್ಲಿ ಪುತ್ರ ಚುನಾವಣೆಗೆ ಸ್ಪರ್ಧಿಸಲು ಮನಸ್ಸು ಮಾಡಿದ್ದೆ ಇದಕ್ಕೆ ಕಾರಣ.

ಮಾಜಿ ಸಿಎಂ- ಹಾಲಿ ಸಂಸದ ಡಾ. ವೀರಪ್ಪ ಮೋಯ್ಲಿ ಪುತ್ರ ಹರ್ಷ ಮೋಯ್ಲಿ ರಾಜಕೀಯಕ್ಕೆ ಎಂಟ್ರಿ ಕೊಡೋದು ಪಕ್ಕಾ ಆದಂತಿದೆ. ಕೆಪಿಸಿಸಿಯ ವೀಕ್ಷಕರ ಟೀಂ ಉಡುಪಿಗೆ ಬಂದಿದ್ದು ಉಡುಪಿ ಜಿಲ್ಲೆಯ ಐದು ವಿಧಾನ ಸಭಾ ಕ್ಷೇತ್ರಗಳ ಎಂಎಲ್ ಎ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ರೆಡಿ ಮಾಡಿದ್ದಾರೆ. ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಈ ಚಟುವಟಿಕೆಯಲ್ಲಿ ಉಡುಪಿ, ಕಾಪು, ಕುಂದಾಪುರ ಮತ್ತು ಬೈಂದೂರು ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಅವಿರೋಧ ಆಯ್ಕೆ ನಡೆದಿದೆ. ಆದ್ರೆ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಮೂವರು ಟಿಕೆಟ್‍ಗಾಗಿ ಹಗ್ಗ ಜಗ್ಗಾಟ ಮಾಡುತ್ತಿದ್ದಾರೆ.

ಮಾಜಿ ಶಾಸಕ ಗೋಪಾಲ ಭಂಡಾರಿ ಮತ್ತು ಮುನಿಯಾಲು ಉದಯಕುಮಾರ್ ಶೆಟ್ಟಿ ಜೊತೆ ಹರ್ಷ ಮೋಯ್ಲಿ ಹೆಸರು ಕೆಪಿಸಿಸಿ ವೀಕ್ಷಕರ ಪಟ್ಟಿಯಲ್ಲಿ ದಾಖಲಾಗಿದೆ. ಹರ್ಷ ಮೋಯ್ಲಿಗೆ ಟಿಕೆಟ್ ಕೊಡಬೇಕೆಂದು ಕಾರ್ಕಳದ ಜನರು ಅಭಿಪ್ರಾಯ ಮಂಡಿಸಿದ್ದಾರೆ. ಗೋಪಾಲ ಭಂಡಾರಿಗೆ ಟಿಕೆಟ್ ಕೊಡಿ, ಭಂಡಾರಿ ಹಿರಿಯ ರಾಜಕಾರಣಿ- ಕ್ಲೀನ್ ಹ್ಯಾಂಡ್ ಪೊಲಿಟೀಷಿಯನ್ ಅಂತ ಜನ ಭಂಡಾರಿ ಪರ ಬ್ಯಾಟ್ ಬೀಸಿದರು.

ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಮುನಿಯಾಲು ಉದಯಕುಮಾರ್ ಶೆಟ್ಟಿ ವೀಕ್ಷಕರ ಮುಂದೆ ಶಕ್ತಿಪ್ರದರ್ಶನ ಮಾಡಿದರು. ಸುಮಾರು ಒಂದು ಸಾವಿರದಷ್ಟು ಮಂದಿ ಉದಯ ಕುಮಾರ್ ಶೆಟ್ಟಿಗೆ ಟಿಕೆಟ್ ಕೊಡಿ ಎಂದು ಅರ್ಜಿ ಬರೆದು ಕೊಟ್ಟರು. ಈ ಬಾರಿ ಯುವಕರಿಗೆ ಅವಕಾಶ ಕೊಡಬೇಕೆಂದು ಉಗ್ರಪ್ಪ ಮುಂದೆ ಒತ್ತಾಯಿಸಿದರು.

ಕೆಪಿಸಿಸಿ ಪ್ರಮುಖರ ಮುಂದೆ ಬಂದ ಜನಾಭಿಪ್ರಾಯದಲ್ಲಿ ಉದಯ ಕುಮಾರ್ ಶೆಟ್ಟಿ ಮುನಿಯಾಲು ಅವರಿಗೆ ಅತೀ ಹೆಚ್ಚು ಜನ ಬೆಂಬಲಿಸಿದ್ದಾರೆ. ಈ ಸಂದರ್ಭ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮುನಿಯಾಲು ಉದಯಕುಮಾರ್ ಶೆಟ್ಟಿ, ತಮ್ಮ ಅಭ್ಯರ್ಥಿ ಯಾರಾಗಬಹುದೆಂದು ಆಯ್ಕೆ ಮಾಡಲು ಪಕ್ಷದ ಕಾರ್ಯಕರ್ತರಿಗೆ ಅವಕಾಶ ಕೊಡಲಾಗಿತ್ತು. ಪ್ರತೀ ಬೂತ್ ನಿಂದ 8-10 ಮಂದಿ ಬಂದು ಅರ್ಜಿ ಸಲ್ಲಿಸಿದ್ದಾರೆ. ನನ್ನ ಪರ ಹೆಚ್ಚು ಅಭಿಪ್ರಾಯ ಸಂಗ್ರಹವಾಗಿದೆ. ನನ್ನ ಉಮೇದುವಾರಿಕೆಯನ್ನು ಪಕ್ಷ ಪರಿಗಣಿಸುತ್ತದೆ ಎಂಬ ನಂಬಿಕೆಯಿದೆ ಎಂದು ಹೇಳಿದರು.

ಮಾಜಿ ಶಾಸಕ ಗೋಪಾಲ ಭಂಡಾರಿ ಮಾತನಾಡಿ, ನಾನೂ ಆಕಾಂಕ್ಷಿ. ಕಾಂಗ್ರೆಸ್ ಪಕ್ಷ ಅವಕಾಶ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ. ಸಾಮಾಜಿಕ ನ್ಯಾಯ ಎಂಬ ಘೋಷವಾಕ್ಯದಲ್ಲಿ ಕೆಲಸ ಮಾಡುತ್ತೇನೆ. ಕಳೆದ ಬಾರಿ ಸೋತಿದ್ದು ಈ ಬಾರಿ ಕ್ಷೇತ್ರದ ಜನ ನನಗೆ ಆಶೀರ್ವಾದ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಡಿಸಿದರು. ಹೈಕಮಾಂಡ್ ತೀರ್ಮಾನಕ್ಕೆ ತಲೆಬಾಗುತ್ತೇನೆ. ಹಿಂದೆಯೂ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಮುಂದೆಯೂ ಮಾಡಲ್ಲ ಎಂದರು.

ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೆ ವೀರಪ್ಪ ಮೋಯ್ಲಿಯೇ ಹೈಕಮಾಂಡ್. ಅವರು ಹೇಳಿದ್ದೇ ಅಂತಿಮ ಅನ್ನೋ ಲೆಕ್ಕಾಚಾರವಿದೆ. ಕೆಪಿಸಿಸಿಗಿಂತ ಎಐಸಿಸಿಯಲ್ಲೇ ಮೋಯ್ಲಿ ಹೆಚ್ಚು ಪ್ರಭಾವಿ. ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೂ ಆಪ್ತ. ಡೆಲ್ಲಿಯಲ್ಲಿ ಪ್ರಭಾವ ಹೊಂದಿದವರು. ಅಲ್ಲೇ ಲಾಭಿ ಮಾಡಿ ಪುತ್ರನಿಗೊಂದು ರಾಜಕೀಯ ದಾರಿ ತೋರಿಸ್ತಾರಾ? ಈ ಮೂಲಕ ಮೋಯ್ಲಿ ಪುತ್ರ ವಾತ್ಸಲ್ಯಕ್ಕೆ ಕಾಂಗ್ರೆಸ್ ಮಣೆ ಹಾಕುತ್ತಾ..? ಅಥವಾ ಜನಾಭಿಪ್ರಾಯಕ್ಕೆ ತಲೆ ಬಾಗುತ್ತೋ? ಕ್ಷೇತ್ರದ ಮತದಾರರಲ್ಲಿ ಕುತೂಹಲವಿದೆ. ಒಟ್ಟಿನಲ್ಲಿ ಮೊದಲ ಸುತ್ತಿನ ಜನಾಭಿಪ್ರಾಯವನ್ನು ಕಾಂಗ್ರೆಸ್ ತೆಗೆದುಕೊಂಡು ಹೋಗಿದ್ದು ಮುಂದೆ ಪಕ್ಷದ ಹೈಕಮಾಂಡ್ ಈ ಬಗ್ಗೆ ಚರ್ಚೆ ನಡೆಸಲಿದೆ.

ಈ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದ ಪರಿಷತ್ ಸದಸ್ಯ, ಕೆಪಿಸಿಸಿ ವೀಕ್ಷಕ ವಿ.ಎಸ್ ಉಗ್ರಪ್ಪ, ಉಡುಪಿ ಜಿಲ್ಲೆಯ ಐದೂ ವಿಧಾನಸಭಾ ಸೀಟುಗಳನ್ನು ಗೆಲ್ಲುವ ವಿಶ್ವಾಸ ಕಾಂಗ್ರೆಸ್‍ಗೆ ಇದೆ. ಯುವಕರಲ್ಲಿರುವ ಉತ್ಸಾಹ ನೋಡಿದ್ರೆ ಈ ಅಭಿಪ್ರಾಯ ಮೂಡುತ್ತದೆ ಎಂದರು. ನಾಲ್ಕು ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆ ನಡೆಯಬಹುದು. ಕಾರ್ಕಳ ವಿಧಾನಸಾಭ ಕ್ಷೇತ್ರದ ಮೂವರ ನಡುವೆ ಆರೋಗ್ಯಕರ ಸ್ಪರ್ಧೆಯಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಮ್ಮತದ ಅಭ್ಯರ್ಥಿಯನ್ನ ಆಯ್ಕೆ ಮಾಡುತ್ತೇವೆ ಎಂದು ಹೇಳಿದರು.

Leave a Reply

Your email address will not be published. Required fields are marked *