Wednesday, 25th April 2018

Recent News

ಮಾಮೂಲಿ ಕೊಡದಕ್ಕೆ ಬಾರ್ ಸಿಬ್ಬಂದಿಯನ್ನ ಮನಬಂದಂತೆ ಥಳಿಸಿದ ಪಿಎಸ್‍ಐ!

ಬೆಳಗಾವಿ: ಬಾರ್ ಮತ್ತು ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಪಿಎಸ್‍ಐ ಮನಬಂದಂತೆ ಹಲ್ಲೆ ನಡೆಸಿ ದರ್ಪ ಮೆರೆದಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮಾಮೂಲಿಯನ್ನು ನೀಡಲಿಲ್ಲ ಎಂಬ ಹಳೇ ದ್ವೇಷದ ಹಿನ್ನೆಲೆಯಲ್ಲಿ ಪೊಲೀಸರು ಹಲ್ಲೆ ನಡೆಸಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬೆಳಗಾವಿ ಜಿಲ್ಲೆಯ ರಾಯಭಾಗ್ ತಾಲೂಕಿನ ಕುಡಚಿ ಠಾಣೆ ಪೊಲೀಸರ ಗೂಂಡಾ ವರ್ತನೆ ತಡವಾಗಿ ಬೆಳಕಿಗೆ ಬಂದಿದೆ. ಬಾರ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪಿಎಸ್‍ಐ ಹೆಸರು ಶಿವಶಂಕರ ಮುಕರಿ. ಮಾರ್ಚ್ 13 ರಂದು ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿತ್ತು. ಅಂದು ರಾತ್ರಿ ಕುಡುಚಿಯ ಶಿವಶಕ್ತಿ ಬಾರ್‍ಗೆ ನುಗ್ಗಿದ ಪಿಎಸ್‍ಐ ಶಿವಶಂಕರ ಹಾಗು ಪೇದೆಗಳಾದ ಪೂಜೇರಿ, ಎಚ್.ಡಿ.ಬೋಜನ್ನವರ ಅಧಿಕಾರಿಗಳು ಬಾರ್ ಸಿಬ್ಬಂದಿ ಅಜಿತ್ ಹಳಿಂಗಳೆಯ ಹೊಟ್ಟೆ ಮತ್ತು ಮರ್ಮಾಂಗಕ್ಕೆ ಯದ್ವಾತದ್ವ ಒದ್ದು ಸ್ಟೀಲ್ ರಾಡ್ ನಿಂದ ಥಳಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಆಗಿದ್ದೇನು?: ಮಾರ್ಚ್ 13 ರಂದು ರೆಸ್ಟೋರೆಂಟ್‍ಗೆ ಬಂದ ಶಿವಶಂಕರ ಹಾಗು ಪೇದೆಗಳು ಮದ್ಯದ ಬಾಟಲಿಗಳು ನೀಡುವಂತೆ ಕೇಳಿದ್ದಾರೆ. ಬಾರ್ ಸಿಬ್ಬಂದಿ ಇಂದು ಮದ್ಯ ಮಾರಾಟಕ್ಕೆ ನಿಷೇಧವಿರುವ ಹಿನ್ನೆಲೆಯಲ್ಲಿ ಬಾರ್ ಬಂದ್ ಮಾಡಿದ್ದು, ಕೇವಲ ರೆಸ್ಟೋರೆಂಟ್ ತೆರೆಯಲಾಗಿದೆ ಎಂದು ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ಪೊಲೀಸರು ಬಾರ್ ಸಿಬ್ಬಂದಿ ಅಜೀತ್ ಮೇಲೆ ಹಲ್ಲೆ ನಡೆಸಿದ್ದಾರೆ.

ಬಾರ್ ಆಂಡ್ ರೆಸ್ಟೋರೆಂಟ್ ಮಾಲೀಕ ಶಿವರಾಜ್

ಪಿಎಸ್‍ಐ ಶಿವಶಂಕರ್ ಅವರಿಗೆ ಪ್ರತಿತಿಂಗಳು ಮಾಮೂಲಿ ನೀಡಬೇಕು. ನಾವು ಪ್ರತಿ ತಿಂಗಳು ಮಾಮೂಲಿ ನೀಡದಕ್ಕೆ ಶಿವಶಂಕರ ನಮ್ಮ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಪೊಲೀಸರಿಗೆ ಪ್ರತಿ ಬಾರಿ ಮದ್ಯ ಮತ್ತು ಸೋಡಾವನ್ನು ಪುಕ್ಕಟೆಯಾಗಿ ನೀಡಬೇಕು ಎಂದು ಶಿವಶಕ್ತಿ ಬಾರ್ ಆಂಡ್ ರೆಸ್ಟೋರೆಂಟ್ ಮಾಲೀಕ ಶಿವರಾಜ್ ಆರೋಪಿಸಿದ್ದಾರೆ.

ಪೊಲೀಸರಿಂದ ಹಲ್ಲೆಗೊಳಗಾದ ಅಜೀತ್

ಪೊಲೀಸರಿಂದ ಹಲ್ಲೆಗೊಳಗಾದ ಅಜೀತ್ ರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಉತ್ತರ ವಲಯ ಐಜಿಪಿ ರಾಮಚಂದ್ರರಾವ್ ಅವರು ಪ್ರಕರಣದ ತನಿಖೆಯನ್ನು ಜಿಲ್ಲಾ ಅಪರಾಧ ತಡೆ ಡಿಎಸ್‍ಪಿ ನಾಗರಾಜ್ ಅವರ ನೇತೃತ್ವದಲ್ಲಿ ವಿಚಾರಣೆ ನಡೆಸಲು ಆದೇಶಿಸಿದ್ದಾರೆ.

 

Leave a Reply

Your email address will not be published. Required fields are marked *