Monday, 28th May 2018

Recent News

71ನೇ ಸ್ವತಂತ್ರ್ಯ ದಿನಾಚರಣೆಯಲ್ಲಿ ಮೋದಿ ಭಾಷಣ- ನೋಟ್ ಬ್ಯಾನ್‍ನಿಂದ ಬ್ಯಾಂಕ್ ಸೇರಿದ ಹಣವಿಷ್ಟು

-ಚೀನಾ, ಪಾಕ್‍ಗೆ ಪರೋಕ್ಷ ಎಚ್ಚರಿಕೆ, ಪ್ರೀತಿಯಿಂದ ಕಾಶ್ಮೀರ ಗೆಲ್ತೇವೆ ಅಂದ್ರು ಪ್ರಧಾನಿ

ನವದೆಹಲಿ: ಇಂದು ದೇಶದ ಜನರು ಸ್ವಾತಂತ್ರ ದಿನಾಚರಣೆಯ ಜೊತೆಗೆ ಕೃಷ್ಣ ಜನ್ಮದಿನವನ್ನು ಆಚರಿಸುತ್ತಿದ್ದಾರೆ. ಎಲ್ಲರಿಗೂ 71ನೇ ಸ್ವತಂತ್ರ ದಿನಾಚರಣೆಯ ಶುಭಾಶಯಗಳನ್ನು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಹಲವು ದಿನಗಳಿಂದ ಪ್ರಕೃತಿ ವಿಕೋಪಗಳಿಂದ ಜನರು ತೊಂದರೆಯನ್ನು ಅನುಭವಿಸಿದ್ದಾರೆ. ಪ್ರವಾಹದಿಂದ ನೊಂದವರಿಗೆ ನಮ್ಮ ಹೃದಯ ಮಿಡಿಯುತ್ತದೆ. ಕೆಲವು ದಿನಗಳ ಹಿಂದೆ ಗೊರಖ್‍ಪುರ ಆಸ್ಪತ್ರೆಯಲ್ಲಿ ಮಕ್ಕಳು ಸಾವನ್ನಪ್ಪಿದ್ದಕ್ಕೆ ದುಃಖವಿದೆ ಅಂದ್ರು. ದೇಶಕ್ಕಾಗಿ ಬಲಿದಾನ ಮಾಡಿದವರಿಗೆ ದೇಶದ ಜನತೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು.

ಕಳೆದ ವಾರವೇ ನಾವು ಕ್ವಿಟ್ ಇಂಡಿಯಾ ಚಳವಳಿಯ 75ನೇ ವರ್ಷದ ದಿನವನ್ನು ಆಚರಿಸಿದ್ದೇವೆ. ನಮ್ಮ ಮುಂದೆ ಇನ್ನೂ ಹಲವು ಸವಾಲುಗಳಿವೆ. ನಾವೆಲ್ಲರೂ ಆ ಸವಾಲುಗಳನ್ನು ಎದುರಿಸಲು ಸನ್ನದ್ಧರಾಗಿರಬೇಕು. ಚಂಪಾರಣ್ಯ ಶತಾಬ್ದಿಯ ಸಂಭ್ರಮವನ್ನು ನಾವು ಆಚರಿಸಿದ್ದೇವೆ. ಸಮೃದ್ಧ ಭಾರತವನ್ನು ಕಟ್ಟಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ತಿಳಿಸಿದರು.

2022ರೊಳಗೆ ನವಭಾರತ ನಿರ್ಮಾಣವಾಗಬೇಕು. ಸರ್ಜಿಕಲ್ ಸ್ಟ್ರೈಕ್ ನಡೆದಾಗ ಜಗತ್ತಿಗೆ ನಮ್ಮ ಶಕ್ತಿ ಏನೆಂಬುದು ತಿಳಿದಿದೆ. ದೇಶದ ವಿರುದ್ಧ ಕೆಲಸ ಮಾಡುವರರನ್ನು ನಾವು ದ್ವೇಷಿಸುತ್ತವೆ. ದೇಶದ ಭದ್ರತೆಗೆ ಮೊದಲ ಆದ್ಯತೆಯನ್ನು ಕೇಂದ್ರ ಸರ್ಕಾರ ನೀಡಿದೆ ಅಂತ ಹೇಳಿದ್ರು.

ಎಲ್ಲವೂ ಬದಲಾಗುತ್ತಿದೆ: ಬದಲಾಗಿದೆ, ಬದಲಾಗುತ್ತಿದೆ, ಬದಲಾಗಬೇಕು ಅನ್ನೋ ವಿಶ್ವಾಸದಿಂದ ಮುನ್ನಡೆಯಿರಿ. ನಡೆಯುತ್ತೆ, ನಡೆಯಲಿದೆ ಎಂಬ ನಂಬಿಕೆಯಿರಲಿ. ಒಗ್ಗಟ್ಟಿನಿಂದ ಮಾತ್ರ ಬದಲಾವಣೆ ತರಲು ಸಾಧ್ಯ. ಇಂದು ನವಭಾರತದ ಸಂಕಲ್ಪದೊಂದಿಗೆ ಮುನ್ನಡೆಯಬೇಕಾಗಿದೆ ಎಂದು ಮೋದಿ ದೇಶದ ಜನತೆಗೆ ಕರೆ ನೀಡಿದ್ದಾರೆ.

`ಕೇಂದ್ರ ಸರ್ಕಾರ ದೊಡ್ಡ ಅಣ್ಣ, ರಾಜ್ಯ ಸರ್ಕಾರ ತಮ್ಮ’ ಎಂಬ ಮಾತುಯಿತ್ತು. ಆ ವ್ಯವಸ್ಥೆಯನ್ನು ನಾವು ಬದಲಾಯಿಸಿದ್ದೇವೆ. ನನಗೆ ರಾಜ್ಯದ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದರ ಅನುಭವವಿದೆ, ನಾವು ಇಂದು ಎಲ್ಲ ರಾಜ್ಯಗಳನ್ನು ಒಟ್ಟಾಗಿ ತೆಗೆದುಕೊಂಡು ಕೆಲಸ ಮಾಡುತ್ತಿದ್ದೇವೆ. ದೇಶಗಳ ಅಭಿವೃದ್ಧಿಯಲ್ಲಿ ರಾಜ್ಯಗಳು ಪ್ರಮುಖ ಪಾತ್ರ ವಹಿಸುತ್ತೇವೆ. ಕೇಂದ್ರ ಸರ್ಕಾರ ರಾಜ್ಯಗಳನ್ನು ಸೇರಿಸಿಕೊಂಡು ದೇಶದ ಅಭಿವೃದ್ಧಿಯತ್ತ ಸಾಗುತ್ತಿದೆ. ಇದೇ ವೇಳೆ ಜಮ್ಮು ಕಾಶ್ಮೀರವನ್ನು ಸ್ವರ್ಗ ಮಾಡಲು ನಾವು ಬದ್ಧರಾಗಿದ್ದೇವೆ ಅಂದ್ರು.

ಎಲ್ಲದಕ್ಕೂ ಬುಲೆಟ್ ಒಂದೇ ಪರಿಹಾರವಲ್ಲ: `ನಾ ಗಾಲಿ ಸೇ, ಗೋಲಿ ಸೇ'(ಬೈಗುಳದಿಂದಾಗಲೀ, ಬುಲೆಟ್‍ನಿಂದಾಗಲೀ) ಪರಿವರ್ತನೆ ಆಗಲು ಸಾಧ್ಯವಿಲ್ಲ.ನಮ್ಮ ಸೇನೆ ಬಲಿಷ್ಠವಾಗಿದೆ. ಸರ್ಜಿಕಲ್ ಸ್ಟ್ರೈಕ್‍ಗೆ ಇಡೀ ವಿಶ್ವವೇ ಬೆನ್ನು ತಟ್ಟಿದೆ. ಒಳನುಸುಳುಕೋರರಿಗೆ ಕಡಿವಾಣ ಹಾಕಿದ್ದೆವೆ. ಇಡೀ ಜಗತ್ತೇ ಭಯೋತ್ಪಾದನೆ ವಿರುದ್ಧ ತಿರುಗಿಬಿದ್ದಿದೆ. ಎಲ್ಲದಕ್ಕೂ ಬುಲೆಟ್ ಒಂದೇ ಪರಿಹಾರವಲ್ಲ. ಶಾಂತಿಯಿಂದಲೇ ಕಾಶ್ಮೀರಿ ಸಮಸ್ಯೆಯನ್ನ ಬಗೆಹರಿಸುತ್ತೇವೆ ಅಂದ್ರು.

ಬೇನಾಮಿ ಆಸ್ತಿಗಳನ್ನು ಕಲೆಹಾಕುವ ಕೆಲಸ ಮಾಡಲಾಗುತ್ತಿದೆ. ಬಡವರ ಅನ್ನ ಕಿತ್ತುಕೊಂಡಿರುವರಿಗೆ ನಿದ್ದೆ ಬರುತ್ತಿಲ್ಲ. ಕಪ್ಪು ಹಣವನ್ನು ಸಂಗ್ರಹಿಸಿದ ವ್ಯಕ್ತಿಗಳ ಬೇಟೆಗೆ ಸಕಲ ಸಿದ್ಧತೆಗಳು ನಡೆಯುತ್ತಿದೆ. ಭಯತ್ಪೋದಾನೆ ಹೋರಾಟದಲ್ಲಿ ನಾವು ಈಗ ಒಂಟಿಯಾಗಿಲ್ಲ. ನಮ್ಮ ಜೊತೆ ಹಲವರು ಕೈ ಜೋಡಿಸಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೇಶದ ಜನತೆ ನಮ್ಮೊಂದಿಗೆ ಸಹಕಾರ ನೀಡುತ್ತಿದ್ದಾರೆ, ಗ್ಯಾಸ್ ಸಬ್ಸಿಡಿ ಬಿಟ್ಟುಕೊಡಿ ಎಂದು ಕೇಳಿದಾಗ ನಮ್ಮ ಮಾತಿಗೆ ತಕ್ಕಂತೆ ಹಲವರು ಸಬ್ಸಿಡಿಯನ್ನು ತ್ಯಜಿಸಿದರು. ನೋಟ್ ಬ್ಯಾನ್ ಮಾಡಿದಾಗ ಹಲವರು ಇದು ಮೋದಿಯ ಅಂತ್ಯ ಎಂದು ಟೀಕಿಸಿದ್ರು. ಆದರೆ ದೇಶದ ಪ್ರತಿಯೊಬ್ಬರು ನಮಗೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ ಅಂದ್ರು.

ತ್ರಿವಳಿ ತಲಾಖ್: ತ್ರಿವಳಿ ತಲಾಖ್ ವಿರುದ್ಧ ಹೋರಾಡುತ್ತಿರುವ ತಾಯಂದಿರ ಜೊತೆಗೆ ಸರ್ಕಾರ ಯವಾಗಲೂ ಇರುತ್ತದೆ. ತೀನ್ ತಲಾಖ್ ವಿರುದ್ಧ ದೇಶದಲ್ಲಿ ದೊಡ್ಡದೊಂದು ಅಭಿಯಾನ ಆರಂಭವಾಗಿದೆ ಅಂದ್ರು. ತ್ರಿವಳಿ ತಲಾಖ್‍ನಿಂದ ನೊಂದಿರುವ ಮತ್ತು ಹೋರಾಡುತ್ತಿರುವ ಮಹಿಳೆಯರಿಗೆ ಮೋದಿ ಅಭಿನಂದನೆ ಸಲ್ಲಿಸಿದರು.

2019ರ ಒಳಗೆ ದೇಶದ ಎಲ್ಲ ರೈತರ ಭೂಮಿಗೆ ನೀರಾವರಿ ಸೌಲಭ್ಯ. ನಮ್ಮ ಸರ್ಕಾರದ ನೀತಿಗಳಿಂದಾಗಿ ಉದ್ಯೋಗ ಸೃಷ್ಟಿಯಾಗಿವೆ. ಹೆರಿಗೆ ರಜೆಯನ್ನು ನಮ್ಮ ಸರ್ಕಾರ ಹೆಚ್ಚಳ ಮಾಡಿದೆ. ನೋಟ್ ಬ್ಯಾನ್ ನಿಂದಾಗಿ 3 ಲಕ್ಷ ಕೋಟಿ ರೂ. ಬ್ಯಾಂಕ್ ವ್ಯವಸ್ಥೆಯನ್ನು ಸೇರಿದೆ. ಈಗಾಗಲೇ ನಕಲಿ 2.75 ಲಕ್ಷ ಕಂಪನಿಗಳ ಲೈಸನ್ಸ್ ರದ್ದು ಮಾಡಲಾಗಿದೆ. ಒಟ್ಟು 1.25 ಲಕ್ಷ ಕೋಟಿ ಕಪ್ಪು ಹಣವನ್ನು ಹೊರತೆಗೆದಿದ್ದೇವೆ ಎಂದು ಅಂಕಿ ಅಂಶಗಳನ್ನು ಬಹಿರಂಗಪಡಿಸಿದರು.

ಹೊಸ ಸಂಕಲ್ಪದೊಂದಿಗೆ ದೇಶವನ್ನು ಮುನ್ನಡೆಸೋಣ. ದೇಶದ ಅಭಿವೃದ್ಧಿಗಾಗಿ ಎಲ್ಲರೂ ಒಗ್ಗಾಟಿಗಿ ದುಡಿಯೋಣ. ಹೊಸ ಟೀಂ ಇಂಡಿಯಾವನ್ನು ನಾವು ಕಟ್ಟಲು ಪಣ ತೊಡೋಣ ಎಂದು ದೇಶದ ಜನತೆಗೆ ಮೋದಿ ಕರೆ ಕೊಟ್ಟರು.

Leave a Reply

Your email address will not be published. Required fields are marked *