ಹಸಿವಾಯ್ತೆಂದು McDonald’s ಬಳಿ ಹೆಲಿಕಾಪ್ಟರ್ ಲ್ಯಾಂಡ್ ಮಾಡಿದ ಪೈಲೆಟ್!

ಸಿಡ್ನಿ: ಕಾರಿನಲ್ಲೋ ಬೈಕ್‍ನಲ್ಲೋ ಹೋಗುವಾಗ ಅಂಗಡಿಯ ಮುಂದೆ ಗಾಡಿ ನಿಲ್ಲಿಸಿ ತಿಂಡಿ ತೆಗೆದುಕೊಳ್ಳೋದು ಕಾಮನ್. ಆದ್ರೆ ಹೆಲಿಕಾಪ್ಟರ್‍ನಲ್ಲಿ ಹೋಗ್ಬೇಕಾದ್ರೆ ಹಸಿವಾದ್ರೆ ಏನು ಮಾಡೋದು? ಪೈಲೆಟ್‍ವೊಬ್ಬರು ಹಸಿವಾಯಿತೆಂಬ ಕಾರಣಕ್ಕೆ ಮ್ಯಾಕ್ ಡೊನಾಲ್ಡ್ಸ್ ರೆಸ್ಟೊಂರೆಂಟ್ ಆವರಣದಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಮಾಡಿ ತಿನಿಸನ್ನು ಪಾರ್ಸೆಲ್ ತೆಗೆದುಕೊಂಡು ಮತ್ತೆ ಟೇಕ್ ಆಫ್ ಮಾಡಿದ ಘಟನೆ ಶನಿವಾರ ಸಂಜೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

ನೈನ್ ನ್ಯೂಸ್ ಆಸ್ಟ್ರೇಲಿಯಾ ವರದಿಯ ಪ್ರಕಾರ ಸಿಡ್ನಿಯ ಮ್ಯಾಕ್ ಡೊನಾಲ್ಡ್ಸ್ ರೆಸ್ಟೊರೆಂಟಿನ ಬಳಿಯ ನಿವಾಸಿಗಳು ಹುಲ್ಲುಹಾಸಿನ ಮೇಲೆ ಹೆಲಿಕಾಪ್ಟರ್ ಲ್ಯಾಂಡ್ ಆಗೋದನ್ನ ನೋಡಿ ದಂಗಾಗಿದ್ದಾರೆ. ಇದನ್ನ ಪ್ರತ್ಯಕ್ಷದರ್ಶಿಯೊಬ್ಬರು ವಿಡಿಯೋ ಮಾಡಿ ಸುದ್ದಿ ವಾಹಿನಿಯೊಂದಕ್ಕೆ ಕಳಿಸಿದ್ದಾರೆ. ಪೈಲೆಟ್ ತಿಂಡಿಯ ಪ್ಯಾಕೆಟ್‍ನೊಂದಿಗೆ ಹೊರಬಂದು ಮತ್ತೆ ಹೆಲಿಕಾಪ್ಟರ್ ಏರಿ ಟೇಕ್ ಆಫ್ ಆಗೋದನ್ನ ವಿಡಿಯೋದಲ್ಲಿ ನೋಡಬಹುದು. ಇದೇ ವೇಳೆ “ನಾನು ಇದೇನೋ ತುರ್ತು ಭೂಸ್ಪರ್ಶವಿರಬಹುದು ಎಂದುಕೊಂಡಿದ್ದೆ” ಅಂತ ವ್ಯಕ್ತಿಯೊಬ್ಬರು ಹೇಳೋದನ್ನ ಕೇಳಬಹುದು.

ಆಸ್ಟ್ರೇಲಿಯಾದ ನಾಗರೀಕ ವಿಮಾನಯಾನ ಸಂಸ್ಥೆಯ ವಕ್ತಾರರು ಈ ಬಗ್ಗೆ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದು, ಒಂದು ವೇಳೆ ಪೈಲೆಟ್‍ಗೆ ನಿರ್ದಿಷ್ಟ ಭೂಮಿಯ ಮಾಲೀಕನ ಸಮ್ಮತಿ ಇದ್ದರೆ ಹೆಲಿಕಾಪ್ಟರ್ ಲ್ಯಾಂಡ್ ಮಾಡೋದು ತಾಂತ್ರಿಕವಾಗಿ ಕಾನೂನು ಬಾಹಿರವಲ್ಲ ಎಂದಿದ್ದಾರೆ.

ಅಧಿಕಾರಿಗಳು ಪೈಲೆಟ್ ಯಾರೆಂಬುದನ್ನು ದೃಢಪಡಿಸಿಲ್ಲ. ಆದ್ರೆ ಆಸ್ಟ್ರೇಲಿಯಾದ ಪ್ರಸಿದ್ಧ ರೇಡಿಯೋ ಚಾನೆಲ್‍ನಲ್ಲಿ ತಾನು ಪೈಲೆಟ್ ಎಂದು ಮಾತನಾಡಿದ ವ್ಯಕ್ತಿ ನನಗೆ ಮ್ಯಾಕ್ ಡೊನಾಲ್ಡ್ಸ್ ಆವರಣದಲ್ಲಿ ಲ್ಯಾಂಡ್ ಮಾಡಲು ಅನುಮತಿ ಇದೆ. ಆಗಾಗ ನಾವು ಈ ರೀತಿ ಮಾಡುತ್ತೇವೆ ಎಂದು ಹೇಳಿಕೊಂಡಿದ್ದಾರೆ.

ಪೈಲೆಟ್ ಹೆಲಿಕಾಪ್ಟರನ್ನು ಲ್ಯಾಂಡಿಂಗ್ ಹಾಗೂ ಟೇಕ್ ಆಫ್ ಮಾಡುವಾಗಿನ ಸುರಕ್ಷತೆಯ ಬಗ್ಗೆ ಹಾಗೂ ಈ ವಿಡಿಯೋ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಆಸ್ಟ್ರೇಲಿಯಾದ ಮಾಧ್ಯಮಗಳು ವರದಿ ಮಾಡಿವೆ.

You might also like More from author

Leave A Reply

Your email address will not be published.

badge