Wednesday, 23rd May 2018

Recent News

ಅತ್ಯಾಚಾರ ಕೇಸಲ್ಲಿ 7 ವರ್ಷ ಜೈಲುಶಿಕ್ಷೆ ಅನುಭವಿಸಿದ ನಿರಪರಾಧಿ!

– ವೆಂಕಟೇಶ್ ಪಾಲಿಗೆ ಕೊನೆಗೂ ನ್ಯಾಯದೇವತೆ ಕಣ್ಣು ಬಿಟ್ಟಳು
– ರೇಪ್ ತನಿಖೆಯ ಹಾದಿ ತಪ್ಪಿಸಿದ ಪೊಲೀಸರಿಗೆ ಯಾವ ಶಿಕ್ಷೆ?

ಕಾರವಾರ: ತನ್ನ ದ್ವಿಚಕ್ರ ವಾಹನವನ್ನು ಕೃತ್ಯ ನಡೆದಿದ್ದ ಜಾಗದಲ್ಲಿಟ್ಟು ಹೋಗಿದ್ದಕ್ಕೆ ಅಪರಾಧಿಯಾಗಿ 7 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಯಿತು ಅಂದ್ರೆ ನೀವು ನಂಬಲು ಸಾಧ್ಯವೇ? ಇಂತಹ ಎಡವಟ್ಟನ್ನು ಪೊಲೀಸರು ಮಾಡಿಬಿಟ್ಟಿದ್ದಾರೆ. ಆದರೆ 7 ವರ್ಷದ ಬಳಿಕ ಜೈಲು ಹಕ್ಕಿ ಸ್ವಚ್ಛಂದವಾಗಿ ಹಾರುತ್ತಿದೆ. ಆದರೆ ಮಾಡದ ತಪ್ಪಿಗೆ ಈ ಕುಟುಂಬ ನಿತ್ಯ ಅವಮಾನಕ್ಕೀಡಾಯಿತು. ಪೊಲೀಸರ ದೌರ್ಜನ್ಯಕ್ಕೆ ಬೆಚ್ಚಿಬಿದ್ದ ಒಂದೇ ಒಂದು ಸಣ್ಣ ತಪ್ಪಿಗೆ ಈತನ ಜೀವನದ 7 ಅಮೂಲ್ಯ ವರ್ಷ ಹಾಳಾಯಿತು.

ಹೌದು. ಆತ ಏಳು ವರ್ಷ ತನ್ನ ಪುಟ್ಟ ಮಕ್ಕಳನ್ನು ಎತ್ತಾಡಿಸದೇ ತನ್ನ ಕುಟುಂಬವನ್ನು ಬಿಟ್ಟು ಜೈಲಿನಲ್ಲೇ ನೋವನ್ನು ಅನುಭವಿಸಿದ್ದು, ಕೊನೆಗೂ ನ್ಯಾಯಾಲಯ ಆತ ನಿರಪರಾಧಿ ಎಂದು ಬಿಡುಗಡೆ ಮಾಡಿದೆ.

ಏನಿದು ಪ್ರಕರಣ: ಅಂದು ಅಕ್ಟೋಬರ್ 23, 2010 ಉತ್ತರ ಕನ್ನಡ ಜಿಲ್ಲೆಯ ಮುರಡೇಶ್ವರದ ಹಿರೇಧೋಮಿಯ ನಿವಾಸಿ ಮಹ್ಮದ್ ಸಾಧಿಕ್ ಎಂಬವರ ಮನೆಯ ಹಿಂಭಾಗದಲ್ಲಿ ಅದೇ ಮನೆಯಲ್ಲಿ ಕೆಲಸ ಮಾಡುವ ಯಮುನಾ ಎಂಬ ಯುವತಿಯನ್ನು ಅತ್ಯಾಚಾರವೆಸಗಿ ಅಮಾನುಷವಾಗಿ ಹತ್ಯೆಗೈಯಲಾಗಿತ್ತು. ಈ ವಿಷಯ ಸುತ್ತಮುತ್ತ ಹಬ್ಬಿ ಒಂದು ವಾರ ಕೋಮು ಗಲಭೆಯಾಗಿ ನಿಷೇಧಾಜ್ಞೆ ಜಾರಿಯಾಗುವ ಮಟ್ಟಿಗೆ ಈ ಹತ್ಯೆ ಪ್ರಾಮುಖ್ಯತೆ ಪಡೆದು ರಾಜ್ಯದಲ್ಲಿ ದೊಡ್ಡ ಸುದ್ದಿ ಮಾಡಿತ್ತು. ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿರುವಾಗಲೇ ಅದೇ ಊರಿನ ವಿವಾಹಿತ ವೆಂಕಟೇಶ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದೇವೆ. ಆತ ಕೃತ್ಯ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಅಂದಿನ ಭಟ್ಕಳ ಡಿವೈಎಸ್‍ಪಿ ಎಂ.ನಾರಾಯಣ್ ಘೋಷಿಸಿದ್ರು.

ಯಾರೂ ಸಿಗದಿದ್ದಾಗ ಈತ ಸಿಕ್ಕಾಕಿಕೊಂಡ!: ಬಳಿಕ ವೆಂಕಟೇಶ್‍ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಚಾರ್ಜ್‍ಶೀಟ್ ಸಲ್ಲಿಸಿದ್ರು. ವೆಂಕಟೇಶ್ ಮುರಡೇಶ್ವರದಲ್ಲಿ ಮೀನುಗಾರಿಕೆ ವೃತ್ತಿ ಮಾಡಿಕೊಂಡಿದ್ದು, ತನ್ನ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ಅತ್ಯಾಚಾರ ನೆಡೆದು ಕೊಲೆಯಾದ ಸ್ಥಳದಲ್ಲಿ ಪ್ರತಿ ದಿನ ತನ್ನ ಬೈಕ್ ನಿಲ್ಲಿಸಿ ಮುರಡೇಶ್ವರದ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುತಿದ್ದರು. ಅಂದು ವೆಂಕಟೇಶ್ ಗ್ರಹಚಾರ ಕೆಟ್ಟಿತ್ತೋ ಏನೋ, ಬೈಕ್ ನಿಲ್ಲಿಸಿದ ಹತ್ತಿರದಲ್ಲಿಯೇ ಯಮುನಾ ಎಂಬ ಯುವತಿ ಅತ್ಯಾಚಾರವಾಗಿ ಹೆಣವಾಗಿ ಬಿದ್ದಿದ್ದಳು. ಈಕೆಯ ತಂದೆ ನಾಗಪ್ಪ ಅವರು ಯುವತಿ ಕೆಲಸ ಮಾಡುತ್ತಿದ್ದ ಮನೆಯ ಮಾಲೀಕ ಮಹ್ಮದ್ ಸಾದಿಕ್ ಸೇರಿದಂತೆ ಒಂಭತ್ತು ಜನರ ಮೇಲೆ ದೂರು ದಾಖಲಿಸಿದ್ರು.

ಇದೇ ಸಂದರ್ಭದಲ್ಲಿ ಕೋಮು ಘರ್ಷಣೆ ಕೂಡ ದೊಡ್ಡದಾಗಿತ್ತು. ಜನರನ್ನ ಸಮಾಧಾನ ಮಾಡುವ ನಿಟ್ಟಿನಲ್ಲಿ ಪೊಲೀಸರು ಎಲ್ಲಿಲ್ಲದ ಸಾಹಸ ಮಾಡಿದ್ರು. ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಕೂಡ ದೊಡ್ಡ ಘರ್ಷಣೆಯ ಕಿಚ್ಚು ಹಚ್ಚಿಬಿಟ್ಟಿದ್ರು. ಇನ್ನೇನೂ ಮುರಡೇಶ್ವರ ರಣರಂಗವಾಗುತ್ತೆ ಎನ್ನುವುದರೊಳಗೆ ವೆಂಕಟೇಶ್ ಬಂಧಿಯಾಗಿದ್ದು, ಎಲ್ಲವನ್ನ ತಣ್ಣಗಾಗಿಸಿತ್ತು. ವೆಂಕಟೇಶ್ ನನ್ನು ಬಂಧಿಸಿ ಖಾಸಗಿ ಲಾಡ್ಜ್ ನಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡಿ ಬಲವಂತವಾಗಿ ತಾನೇ ಅಪರಾಧಿ ಎಂದು ಸಹಿ ಹಾಕಿಸಿ ವೀಡಿಯೋ ರೆಕಾರ್ಡ್ ಕೂಡ ಮಾಡಿಸಲಾಯ್ತು. ಹೀಗೆ ಪೊಲೀಸರು ಬಲವಂತವಾಗಿ ಅಪರಾಧಿ ಮಾಡಿದ್ರು.

ಅತ್ಯಾಚಾರವಾಗಿ ಹತ್ಯೆಯಾಗಿದ್ದ ಯುವತಿಯ ಕೈಯಲ್ಲಿ ಅಪರಾಧಿಯ ಕೂದಲುಗಳು ದೊರಕಿದ್ದವು. ಜೊತೆಗೆ ಸ್ಥಳದಲ್ಲಿ ವೀರ್ಯದ ಅಂಶವೂ ಪತ್ತೆಯಾಗಿತ್ತು. ಇದನ್ನು ಹೈದ್ರಬಾದ್ ನ (ಸಿ.ಡಿ.ಎಫ್.ಡಿ) ವಿಧಿ ವಿಜ್ಞಾನ ಇಲಾಖೆಗೆ ಕಳುಹಿಸಿದ್ದು, ಶವಪರೀಕ್ಷೆಯನ್ನು ಮಣಿಪಾಲದ ಕಿಮ್ಸ್ ನಲ್ಲಿ ಡಾ ಶಂಕರ್ ಬಕ್ಕಣ್ಣನವರ್ ನೆಡೆಸಿದ್ರು. ಇದಲ್ಲದೇ ಐದು ಬಾರಿ ವೆಂಕಟೇಶ್ ನ ಡಿಎನ್‍ಎ ಪರಿಕ್ಷೆ ಸಹ ಮಾಡಿಸಲಾಯ್ತು. ವಿಶೇಷ ಅಂದ್ರೆ ಅತ್ಯಾಚಾರವಾಗಿ ಹತ್ಯೆಯಾಗಿದ್ದ ಯುವತಿಯ ಕುಟುಂಬದವರೂ ಪೊಲೀಸರ ಒತ್ತಡಕ್ಕೆ ಮಣಿದು ವೆಂಕಟೇಶ್ ಹೆಸರನ್ನ ಎಫ್.ಐ.ಆರ್.ನಲ್ಲಿ ಸೇರಿಸುವಂತಾಯ್ತು. ಹೀಗೆ ತನಿಖೆ ನಡೆಸುತ್ತಿದ್ದ ಅಂದಿನ ಭಟ್ಕಳದ ಡಿವೈಎಸ್‍ಪಿ ಎಂ. ನಾರಾಯಣ್ ಒಬ್ಬ ನಿರಪರಾಧಿಯನ್ನ ಅಪರಾಧಿಯಾಗಿ ಕಟಕಟೆಯಲ್ಲಿ ನಿಲ್ಲಿಸಿದ್ರು.

ಅತ್ಯಾಚಾರ ಮಾಡಿ ಕೊಲೆ ಮಾಡಿದ ಅಪರಾಧವಿದ್ದಿದ್ದರಿಂದ ಬಂಧನದ ಮೂರು ತಿಂಗಳೊಳಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಹೀಗಾಗಿ ವೆಂಕಟೇಶ್ ಗೆ ಬೇಲ್ ಕೂಡ ಸಿಗಲಿಲ್ಲ. ಇಡೀ ಊರೇ ವೆಂಕಟೇಶ್ ಕುಟುಂಬದ ವಿರುದ್ಧ ನಿಂತುಬಿಟ್ಟಿತ್ತು. ಚಿಕ್ಕ ಮಕ್ಕಳನ್ನು ಎದೆಯಲ್ಲಿ ಅವಚಿ ಜೀವನ ಮಾಡಲು ಪತ್ನಿ ಮಾದೇವಿಗೆ ಕಷ್ಟವಾಗಿತ್ತು. ಇಂತಹ ಪರಿಸ್ಥಿತಿಯಲ್ಲೂ ತನ್ನ ಗಂಡ ನಿರಪರಾಧಿ ಎಂಬುದನ್ನ ಅರಿತಿದ್ದ ಈಕೆ ನ್ಯಾಯಕ್ಕಾಗಿ ಮುರಡೇಶ್ವರದ ವಕೀಲ ರವಿಕಿರಣ್ ಅವರ ಮೊರೆ ಹೋದ್ರು.

ಘಟನೆಯ ಸಂಪೂರ್ಣ ಮಾಹಿತಿ ತಿಳಿದಿದ್ದ ವಕೀಲ ರವಿಕಿರಣ್ ನ್ಯಾಯಾಲಯದಲ್ಲಿ ವಾದ ಮಂಡನೆ ಮಾಡಿದ್ರೆ, ತನಿಖೆಯ ಭಾರ ಹೊತ್ತಿದ್ದ ಭಟ್ಕಳದ ಡಿವೈಎಸ್‍ಪಿ ಎಂ. ನಾರಾಯಣ್ 2011ರಲ್ಲಿ ವಿಧಿವಿಜ್ಞಾನ ಇಲಾಖೆಯಿಂದ ಬಂದಿದ್ದ ವರದಿಯನ್ನ ಒಂದು ವರ್ಷಗಳ ಕಾಲ ನ್ಯಾಯಾಲಯಕ್ಕೆ ನೀಡಲಿಲ್ಲ. ಹೀಗಾಗಿ ನ್ಯಾಯಾಲಯದಲ್ಲೂ ವಾದ ಪ್ರತಿವಾದಗಳು ದೀರ್ಘಾವಧಿ ನಡೆದು 51 ಜನರ ಸಾಕ್ಷಿ ಹೇಳಿಕೆ ನಂತರ ಡಿಎನ್‍ಎ ವರದಿ ಆಧರಿಸಿ ಇದೇ ತಿಂಗಳ 28 ರಂದು ಕಾರವಾರ ನ್ಯಾಯಾಲಯ ಅತ್ಯಾಚಾರ ಮತ್ತು ಹತ್ಯೆಯಲ್ಲಿ ವೆಂಕಟೇಶ್ ಪಾತ್ರವಿಲ್ಲವೆಂದು, ನಿರಪರಾಧಿ ಎಂದು ತೀರ್ಪು ನೀಡಿ ಬಿಡುಗಡೆಗೊಳಿಸುವ ಮೂಲಕ ನ್ಯಾಯವನ್ನು ಎತ್ತಿಹಿಡಿದಿದೆ.

ಇನ್ನು 2010 ರಿಂದ ಈವರೆಗೆ ಮಾಡದ ತಪ್ಪಿಗೆ ವೆಂಕಟೇಶ್ ಜೈಲು ಶಿಕ್ಷೆ ಅನುಭವಿಸಿದ್ದಾರೆ. ತನಿಖೆಯನ್ನು ಸಮರ್ಪಕವಾಗಿ ಮಾಡದ ಭಟ್ಕಳದ ಅಂದಿನ ಡಿವೈಎಸ್‍ಪಿ ಎಂ.ನಾರಾಯಣ್ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಲು ವೆಂಕಟೇಶ್ ಕುಟುಂಬ ತೀರ್ಮಾನಿಸಿದೆ.

ಪೊಲೀಸರು ಮಾಡಿದ ಮೋಸದಿಂದ ಒಬ್ಬ ನಿರಪರಾಧಿಯ ಜೀವನದ ಅಮೂಲ್ಯ ಕ್ಷಣಗಳು ವ್ಯರ್ಥವಾಗಿ ಹೋಗಿದೆ. ಗಂಡನಿಲ್ಲದೆ, ತಂದೆಯಿಲ್ಲದೆ ಹೆಂಡತಿ ಮಕ್ಕಳು ಕಷ್ಟದ ಜೀವನ ಸಾಗಿಸಿದ್ದಾರೆ. ಇವರ ಹಿಂದಿನ ಜೀವನವನ್ನ ಮತ್ತೆ ಮರಳಿ ನೀಡಲಾಗದು. ಆದ್ರೆ ಕೊನೆ ಪಕ್ಷ ಅತ್ಯಾಚಾರವಾಗಿ ಹತ್ಯೆಯಾಗಿದ್ದ ಯಮುನಾಳ ಸಾವಿಗೆ ನ್ಯಾಯ ಸಿಗಬೇಕಿದೆ. ತನಿಖೆಯ ದಿಕ್ಕು ತಪ್ಪಿಸಿ ಅನ್ಯಾಯವೆಸಗಿದ ಅಂದಿನ ಭಟ್ಕಳ ಡಿವೈಎಸ್‍ಪಿಗೆ ಶಿಕ್ಷೆಯಾಗಬೇಕು ಅಂತಾ ಇದೀಗ ಬಿಡುಗಡೆಗೊಂಡ ವೆಂಕಟೇಶ್ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *