Friday, 25th May 2018

Recent News

ಅಂಗನವಾಡಿ ನೌಕರರ ಧರಣಿ: ಸಾವಿರಾರು ಮಹಿಳೆಯರಿಗೆ ಒಂದೇ ಶೌಚಾಲಯ

– ನಿತ್ಯ ಕರ್ಮ ಮುಗಿಸಲು ಸಾಲುಗಟ್ಟಿದ ಮಹಿಳೆಯರು

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗಹ್ರಹಿಸಿ ಅಂಗನವಾಡಿ ನೌಕರರು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದು, ಸಾವಿರಾರು ಮಂದಿ ಪ್ರತಿಭಟನೆ ಮಾಡ್ತಿರುವ ಜಾಗದಲ್ಲಿ ಮೂಲಭೂತ ಸೌಲಭ್ಯಗಳೇ ಸರಿಯಾಗಿಲ್ಲ.

ಸಾವಿರಾರು ಮಂದಿಗೆ ಇರೋದು ಒಂದೇ ಶೌಚಾಲಯ. ರಾತ್ರಿಯಿಡೀ ರಸ್ತೆಯಲ್ಲಿ ಮಲಗಿದ್ದ ಸಾವಿರಾರು ಮಹಿಳೆಯರು ಬೆಳಗಿನ ಜಾವವೇ ನಿತ್ಯ ಕರ್ಮಗಳನ್ನು ಮುಗಿಸಲು ಮುಗಿಬಿದ್ದಿದ್ದಾರೆ. ಸಾಲುಗಟ್ಟಿ ನಿಂತಿದ್ದಾರೆ. ಈ ಸರತಿ ಸಾಲಿನ ಉದ್ದವೇ ಸರಿಸುಮಾರು ಅರ್ಧ ಕಿಲೋಮೀಟರ್‍ನಷ್ಟಿದೆ. ಮುಖ ತೊಳಿಯಲು ಸರಿಯಾಗಿ ನೀರು ಕೂಡ ಸಿಕ್ತಿಲ್ಲ.

ಅಂಗನವಾಡಿ ನೌಕರರು ವೇತನ ಹೆಚ್ಚಳ ಮತ್ತು ವಿವಿಧ ಬೇಡಿಕೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂಪಾರ್ಕ್‍ನಲ್ಲಿ ಸೋಮವಾರ ಪ್ರತಿಭಟನೆ ಹಮ್ಮಿಕೊಂಡಿದ್ದರು. ಬಜೆಟ್‍ನಲ್ಲಿ ಅಂಗನಾವಡಿ ಕಾರ್ಯಕರ್ತೆಯರಿಗೆ ನಾಲ್ಕು ಸಾವಿರ ರೂಪಾಯಿ ಭತ್ಯೆ ಹೆಚ್ಚಿಸುವ ಭರವಸೆ ನೀಡಿ ಕೇವಲ ಒಂದು ಸಾವಿರ ಏರಿಸಿರೋದನ್ನ ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಇವರ ಬೇಡಿಕೆಗೆ ಸರ್ಕಾರ ಸ್ಪಂದಿಸದ ಕಾರಣ ಅಹೋರಾತ್ರಿ ಧರಣಿ ನಡೆಸಿದ್ದಾರೆ. ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ನಗರದ ಫ್ರೀಡಂಪಾರ್ಕ್‍ನ ಮುಖ್ಯ ರಸ್ತೆಯ ಮೇಲೆ ಮಲಗಿ ಇಡೀ ರಾತ್ರಿ ಕಳೆದಿದ್ದಾರೆ. ಕೆಲವರಂತೂ ತಮ್ಮ ಮಕ್ಕಳ ಜೊತೆಯೇ ರಸ್ತೆಯ ಮೇಲೆ ಮಲಗಿರೋ ದೃಶ್ಯ ಕಂಡು ಬಂತು. ಫ್ರೀಡಂಪಾರ್ಕ್ ರಸ್ತೆ ಬಳಿ ಪ್ರತಿಭಟನೆಯಿಂದ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ಟ್ರಾಫಿಕ್ ಜಾಮ್ ಉಂಟಾಗಿದೆ.

 

Leave a Reply

Your email address will not be published. Required fields are marked *