ರಾಜಕೀಯ ಏನಿಲ್ಲ ನಾವು ಫ್ರೆಂಡ್ಸ್ ಅಂತಾರೆ ಸಿಎಂ- ಮತ್ತೆ ಸಂಪುಟ ಸೇರ್ತಾರಾ ಅಂಬರೀಷ್?

ಬೆಂಗಳೂರು: ಸಚಿವ ಸ್ಥಾನದಿಂದ ಕೈಬಿಟ್ಟ ಬಳಿಕ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಅಂಬರೀಷ್ ರೆಬೆಲ್ ಆಗಿದ್ರು. ನಂಜನಗೂಡು, ಗುಂಡ್ಲುಪೇಟೆ ಚುನಾವಣೆ ವೇಳೆಯೂ ಪ್ರಚಾರಕ್ಕೆ ಹೋಗಿರಲಿಲ್ಲ. ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಅಂಬರೀಷ್ ಹೆಸರು ಇರಲಿಲ್ಲ. ಆದ್ರೆ ಬುಧವಾರ ರಾತ್ರಿ ಸಿಎಂ ಸಿದ್ದರಾಮಯ್ಯ, ಏಕಾಏಕಿ ಅಂಬರೀಷ್ ಅವರ ಗಾಲ್ಫ್ ಕೋರ್ಟ್ ರಸ್ತೆಯಲ್ಲಿರೋ  ನಿವಾಸಕ್ಕೆ ತೆರಳಿ ಔತಣಕೂಟದಲ್ಲಿ ಭಾಗಿಯಾಗಿದ್ರು.

ಸುಮಾರು 2 ಗಂಟೆಗಳಿಗೂ ಹೆಚ್ಚು ಕಾಲ ಡಿನ್ನರ್ ನೆಪದಲ್ಲಿ ಚರ್ಚಿಸಿದ ನಾಯಕರು, ಆ ಬಳಿಕ ಹೊರಬಂದು ಹಿಂದೆ ಜೆ ಪಿ ನಗರದಲ್ಲಿದ್ದ ಅಂಬರೀಷ್ ಮನೆಗೂ ಹೋಗಿದ್ದೆ. ಆದ್ರೆ ಇಲ್ಲಿ ಊಟಕ್ಕೆ ಬಂದಿರಲಿಲ್ಲ. ಊಟಕ್ಕೆ ಕರೆದ್ರ ಹಂಗೆ ಬಂದೆ. ರಾಜಕಾರಣದವರಾಗಿದ್ದರಿಂದ ರಾಜಕೀಯ ಬಗ್ಗೆ ಚರ್ಚೆ ಮಾಡದೇ ಇರ್ತೀವಾ?. ಅಸಮಾಧಾನ, ಕೋಪ ಇದ್ರೆ ಸಮಾಧಾನ ಮಾಡ್ಬೇಕು. ಇವತ್ತಿಂದ ಅಲ್ಲ ಸುಮಾರು 40-45 ವರ್ಷದಿಂದಲೇ ನಾನು ಅಂಬರೀಷ್ ಫ್ರೆಂಡ್ಸ್. ರಾಜಕೀಯದಲ್ಲಿ ಎಳುಬೀಳುಗಳು ಇದ್ದೇ ಇರ್ತವೆ. ಆದ್ರೆ ಗೆಳತನಕ್ಕೆ ಧಕ್ಕೆ ಇಲ್ಲ ಅಂತಾ ಸಿಎಂ ಸಿದ್ದರಾಮಯ್ಯ ಹೇಳಿದ್ರು.

ಇತ್ತ ಅಂಬರೀಷ್ ಮಾಧ್ಯಮದೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಹಾಗೂ ಎಸ್ ಎಂ ಕೃಷ್ಣ ಅವರು ಮುಖ್ಯಮಂತ್ರಿಗಳು ಆಗಬೇಕೆಂದು ಆಸೆ ಪಟ್ಟೋನು ನಾನು. ನನ್ನ ಸಚಿವರನ್ನಾಗಿ ಮಾಡಿ ಅಂತಾ ಸಿಎಂ ಅವರನ್ನು ನಾನು ಕೇಳಿಲ್ಲ. ಮಿನಿಸ್ಟರ್ ಮಾಡಿದ್ದಾರೆ ಸಂತೋಷ. ಶಾಸಕರಾದ ಎಲ್ಲರಿಗೂ ಸಚಿವರಾಗಬೇಕೆಂಬ ಆಸೆ ಇದ್ದೇ ಇರತ್ತೆ. ಅವರಿಗೆ ಬಿಟ್ಟುಕೊಟ್ಟಿದ್ದೀವಿ ತೊಂದ್ರೆಯಿಲ್ಲ. ನನ್ನಷ್ಟದಂತೆ ನಾನು ಇಲ್ಲಿ ಇದ್ದೀನಿ ಅಂತಾ ಹೇಳಿದ್ರು.

ಒಟ್ಟಿನಲ್ಲಿ ಅಂಬಿಯನ್ನ ಸಂಪುಟದಿಂದ ಕೈ ಬಿಟ್ಟ ಬಳಿಕ ಸಿಎಂ ಮೊದಲ ಬಾರಿಗೆ ಅಂಬರೀಷ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರೋದು ಕುತೂಹಲ ಮೂಡಿಸಿದೆ. ಸಿಎಂ ವಿರುದ್ಧ ಸ್ವತಃ ಅಂಬರೀಷ್ ಬಹಿರಂಗವಾಗಿ ಕಿಡಿಕಾರಿದ್ರು. ಆದ್ರೀಗ ಮತ್ತೆ ದೋಸ್ತಿ ಕುದುರಿದ್ದು, ಅಂಬಿಯನ್ನ ಸಿದ್ದರಾಮಯ್ಯ ಸಮಾಧಾನ ಪಡಿಸಿದ್ದಾರೆ ಎನ್ನಲಾಗಿದೆ. ಅಂದಹಾಗೆ ಸಿಎಂಗಾಗಿ ನಾಟಿ ಕೋಳಿ ಸಾರು, ಮುದ್ದೆ ಸಿದ್ದಮಾಡಿಸಿದ್ರು. ಒಟ್ಟಿನಲ್ಲಿ ಮಾಜಿ ಸಚಿವ ಅಂಬರೀಷ್ ಅವರನ್ನು ಭೇಟಿ ಆಗಿ ಮಾತುಕತೆ ನಡೆಸಿರುವ ಹಿಂದೆ ಭಾರೀ ರಾಜಕೀಯ ತಂತ್ರಗಾರಿಕೆ ಅಡಗಿದೆ ಎನ್ನಲಾಗ್ತಿದೆ.

ಔತಣಕೂಟದಲ್ಲಿ ಸಚಿವರಾದ ಕೆ ಜೆ ಜಾರ್ಜ್, ಎ.ಬಿ.ಪಾಟೀಲ್, 1 ಸಾವಿರ ಕೋಟಿ ವೆಚ್ಚದಲ್ಲಿ `ಮಹಾಭಾರತ’ ಚಿತ್ರ ನಿರ್ಮಾಣ ಮಾಡಲು ಮುಂದಾಗಿರುವ ಕರಾವಳಿ ಮೂಲದ ಉದ್ಯಮಿ ಬಿ.ಆರ್. ಶೆಟ್ಟಿ ಉಪಸ್ಥಿತರಿದ್ರು.

You might also like More from author

Leave A Reply

Your email address will not be published.

badge