Sunday, 24th June 2018

12 ದಿನದ ಹೆಣ್ಣು ಮಗುವಿಗೆ ಬೆಂಕಿ ಹಚ್ಚಿ ಕೊಂದ ತಾಯಿ

ಕಾರವಾರ: ಹೆಣ್ಣು ಮಗು ಎಂದು ಪತಿ ತಾತ್ಸರಾ ಮಾಡಿದ್ದಕ್ಕೆ ತಾಯಿ ತನ್ನ ಕಂದಮ್ಮನನ್ನು ಕೊಲೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ವೆಂಕಟಾಪುರದಲ್ಲಿ ನಡೆದಿದೆ.

ಯಶೋಧಾ ಗೋಪಾಲ ಮೊಗೇರ್ ಮಗುವನ್ನು ಸುಟ್ಟು ಕೊಲೆಗೈದ ಪಾಪಿ ತಾಯಿ. ಮೂರುವರೆ ವರ್ಷಗಳ ಹಿಂದೆ ಬೆಳ್ನಿಯ ಗೋಪಾಲ್ ಮೊಗೇರ್ ಎಂಬವರನ್ನು ವಿವಾಹವಾಗಿದ್ದ ಯಶೋಧ, ಹೆರಿಗೆಗಾಗಿ ತನ್ನ ತಾಯಿ ಮನೆಯಾದ ವೆಂಕಟಾಪುರಕ್ಕೆ ಹೋಗಿದ್ದರು. ಹೆರಿಗೆಯಾಗಿ 12 ದಿನಗಳು ಕಳೆದರೂ ತನ್ನ ಪತಿ ಮಗು ಹೆಣ್ಣೆಂಬ ಕಾರಣಕ್ಕೆ ನೋಡಲು ಬಂದಿಲ್ಲ ಎಂದು ಮಾನಸಿಕವಾಗಿ ನೊಂದು ಈ ಕೃತ್ಯ ಎಸೆಗಿದ್ದಾಳೆ.

ಇದೇ ತಿಂಗಳ 9ರಂದು ಯಶೋದಾ ತನ್ನ ಮಗುವಿಗೆ ಬೆಂಕಿ ಹಚ್ಚಿದ್ದಳು. ಆದರೇ ತಕ್ಷಣದಲ್ಲಿ ಮನೆಯ ಸದಸ್ಯರು ಗಮನಿಸಿ ಸಾವು ಬದುಕಿನ ನಡುವೆ ಸುಟ್ಟು ಗಾಯಗೊಂಡ ಹಸುಳೆಯನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮಗು ಮೃತಪಟ್ಟಿದೆ. ಮಗು ಮೃತಪಟ್ಟ ನಂತರ ಆಕೆಯ ಸಹೋದರ ಪೊಲೀಸರಿಗೆ ಮಾಹಿತಿ ನೀಡಿದ್ದು ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಸಹೋದರನ ದೂರಿನನ್ವಯ ಭಟ್ಕಳ ಗ್ರಾಮಾಂತರ ಠಾಣೆ ಪೊಲೀಸರು ಮಾನಸಿಕವಾಗಿ ಕುಸಿದಿದ್ದ ತಾಯಿಯನ್ನು ಕಾರವಾರದ ಮಹಿಳಾ ಸಾಂತ್ವನ ಕೇಂದ್ರಕ್ಕೆ ರವಾನಿಸಿದ್ದಾರೆ. ಇಂದು ಬೆಳಗ್ಗೆ ಯಶೋಧಾಳನ್ನು ಕಾರವಾರದ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು.

Leave a Reply

Your email address will not be published. Required fields are marked *