Sunday, 17th December 2017

ನಡುರಸ್ತೆಯಲ್ಲೇ ಮಗುವಿಗೆ ಜನ್ಮ ಕೊಟ್ಟ ತಾಯಿ- ಹೆರಿಗೆ ಮಾಡಿಸಿದ ವೃದ್ಧ ಭಿಕ್ಷುಕಿ

ರಾಯಚೂರು: ಮಹಿಳೆಯೊಬ್ಬರು ನಡುರಸ್ತೆಯಲ್ಲೇ ಮಗುವಿಗೆ ಜನ್ಮ ಕೊಟ್ಟಿದ್ದಾರೆ. ಮಾನ್ವಿ ಪಟ್ಟಣದ ಬಸವ ವೃತ್ತದಲ್ಲಿ ಮಹಿಳೆ ಮಗುವಿಗೆ ಜನ್ಮ ಕೊಟ್ಟಿದ್ದಾರೆ. ಈ ಸಮಯದಲ್ಲಿ ರಸ್ತೆಯ ಬದಿ ಮಲಗಿದ್ದ ವೃದ್ಧ ಭಿಕ್ಷುಕಿ ಹೆರಿಗೆ ಮಾಡಿಸಿದ್ದಾರೆ.

ಯಲ್ಲಮ್ಮ ಎಂಬವರು ರಸ್ತೆಯಲ್ಲಿ ಮಗುವಿಗೆ ಜನ್ಮನೀಡಿದ ಮಹಿಳೆ. ಯಲ್ಲಮ್ಮ ಮಾನ್ವಿ ಪಟ್ಟಣದ ಸಣ್ಣಬಜಾರ್ ಬಡಾವಣೆಯ ನಿವಾಸಿ. ರಕ್ತಹೀನತೆಯಿಂದ ಬಳಲುತ್ತಿದ್ದ ಯಲ್ಲಮ್ಮ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಪತಿ ರಾಮಣ್ಣನೊಂದಿಗೆ ತೆರಳಿದ್ದರು.

ತಪಾಸಣೆ ಬಳಿಕ ಮಾನ್ವಿಗೆ ಮರಳಿದ ದಂಪತಿ ಬಸ್ ಇಳಿಯುತ್ತಿದ್ದಂತೆ ಯಲ್ಲಮ್ಮರಿಗೆ ಹರಿಗೆ ನೋವು ಕಾಣಿಸಿಕೊಂಡಿದೆ. ಅಷ್ಟರಲ್ಲೇ ಯಲ್ಲಮ್ಮ ಅವರು ರಸ್ತೆಯಲ್ಲೇ ಬಿದ್ದು ಒದ್ದಾಡಿದ್ದಾರೆ. ಇದನ್ನು ಗಮನಿಸಿದ ವಯೋವೃದ್ಧೆ ಭಿಕ್ಷುಕಿಯೊಬ್ಬರು ಮಾನವೀಯತೆ ಮೆರೆದು ಸ್ಥಳೀಯರ ಸಹಾಯದಿಂದ ಹೆರಿಗೆ ಮಾಡಿಸಿದ್ದಾರೆ.

ಈಗಾಗಲೇ ಮೂರು ಗಂಡು ಮಕ್ಕಳಿರುವ ಯಲ್ಲಮ್ಮ ತಮ್ಮ ಆಸೆಯಂತೆ ನಾಲ್ಕನೇ ಬಾರಿಗೆ ಹೆಣ್ಣು ಮಗುವಿಗೆ ಜನ್ಮನೀಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ತಾಯಿ ಮತ್ತು ಮಗುವನ್ನು ಮಾನ್ವಿ ತಾಲೂಕು ಆಸ್ಪತ್ರೆಗೆ ದಾಖಲಾಸಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ.

 

Leave a Reply

Your email address will not be published. Required fields are marked *