Wednesday, 21st March 2018

Recent News

ಎಂಜಿನಿಯರಿಂಗ್ & ಶಾಲಾ ವಿದ್ಯಾರ್ಥಿಗಳಿಂದ ಮಿನಿ ಫಾರೆಸ್ಟ್ ನಿರ್ಮಾಣ – 2000ಕ್ಕೂ ಅಧಿಕ ಸಸಿ ನೆಟ್ಟು ಪರಿಸರ ಪ್ರೇಮ ಮೆರೆದ ವಿದ್ಯಾರ್ಥಿ ಸಮೂಹ

ಬೆಳಗಾವಿ: ವೀಕೆಂಡ್ ಬಂದರೆ ಸಾಕು ಇಂದಿನ ವಿದ್ಯಾರ್ಥಿಗಳು ರಜೆಯಲ್ಲಿ ಮೋಜು ಮಸ್ತಿ ಎಂದು ಎಂಜಾಯ್ ಮಾಡುತ್ತಾರೆ. ಆದರೆ ಈ ವಿದ್ಯಾರ್ಥಿಗಳು ಮಾಡಿದ ಶ್ರಮದಾನದಿಂದ ಮುಂದಿನ ಪೀಳಿಗೆಗೆ ಪ್ರಕೃತಿಯ ವರದಾನವಾಗಿದೆ. ಗ್ರೀನ್ ಸೇವರ್ಸ್ ಸಂಸ್ಥೆವತಿಯಿಂದ ಪ್ರಕೃತಿ ಮಡಿಲಲ್ಲಿ ಸಾವಿರಾರು ಸಸಿಗಳನ್ನ ನೆಟ್ಟು ಮುಂದಿನ ಪೀಳಿಗೆಗೆ ವಿದ್ಯಾರ್ಥಿಗಳು ನೈಸರ್ಗಿಕ ವಾತಾವರಣವನ್ನ ಕೊಡುಗೆಯಾಗಿ ನೀಡಿದ್ದಾರೆ.

ಜಿಲ್ಲೆಯ ಜೆಐಟಿ, ಕೆಎಲ್‍ಇ ಮತ್ತು ಎಂಜಿನಿಯರಿಂಗ್ ಸೇರಿದಂತೆ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಬೆಳಗಾವಿ ಗ್ರೀನ್ ಸೇವರ್ಸ್ ಸಂಸ್ಥೆ ವತಿಯಿಂದ ಮಿನಿ ಫಾರೆಸ್ಟ್ ನಿರ್ಮಾಣ ಮಾಡಿದ್ದಾರೆ. ಬೆಳಗಾವಿಯ ಹೊರವಲಯದ ರಾಜಗೋಳ ಹೊರವಲಯದಲ್ಲಿ ಮಿನಿ ಫಾರೆಸ್ಟ್ ನಿರ್ಮಾಣ ಮಾಡಲಾಗಿದ್ದು, ಸುಮಾರು ಎರಡು ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ. ಈ ಸಸಿ ನೆಡುವ ಕಾರ್ಯಕ್ಕೆ ಶಾಲಾ ಕಾಲೇಜಿನ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಭಾಗವಸಿದ್ದಾರೆ. ವೀಕೆಂಡ್ ನಲ್ಲಿ ಹರಟೆ, ಮೋಜು ಮಸ್ತಿ ಮಾಡದೇ ಪ್ರಕೃತಿಯ ಸೇವೆಗಾಗಿ ಸೇವೆ ಸಲ್ಲಿಸಿದ್ದಾರೆ.

ಗ್ರೀನ್ ಸೇವರ್ಸ್ ಸಂಸ್ಥೆ 2016 ರಿಂದ ಇದೇ ಸೇವೆ ಸಲ್ಲಿಸುತ್ತಿದೆ. ಗ್ರೀನ್ ಸೇವರ್ಸ್ ಸಂಸ್ಥೆಯಿಂದ ಸಸಿಗಳನ್ನು ಖರೀದಿಸಿ ಖಾಲಿ ಇರುವ ಜಾಗದಲ್ಲಿ ಸಸಿ ನೆಡುತ್ತಾರೆ. ಎರಡು ವರ್ಷಗಳಿಂದ ಸುಮಾರು ನೂರಕ್ಕೂ ಹೆಚ್ಚು ಈ ರೀತಿ ಗ್ರೀನ್ ಪ್ಲಾಂಟ್ ತಯಾರಿಸಿದ್ದು, ನಾಲ್ಕು ಮಿನಿ ಫಾರೆಸ್ಟ್ ನಿರ್ಮಾಣ ಮಾಡಿದ್ದಾರೆ. ಇಲ್ಲಿಯವರೆಗೆ ಸುಮಾರು 9000 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿದ್ದಾರೆ.

ಎಲ್ಲಾ ವರ್ಗದ, ಎಲ್ಲಾ ವಯಸ್ಸಿನವರು ಹಾಗೂ ಸಮಾನಮನಸ್ಕರಿಂದ ಕಟ್ಟಿದ ಈ ಗ್ರೀನ್ ಸೇವರ್ಸ್ ತಂಡ ಪ್ರಕೃತಿ ಮಡಿಲಲ್ಲಿ ಪರಿಸರ ಬೆಳೆಸಲು, ಉಳಿಸಲು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಖಾಲಿ ಜಾಗ ಇದ್ದರೆ ಸಾಕು ನಮಗೆ ಮಾಹಿತಿ ನೀಡಿದರೆ ನಾವೇ ಸಸಿ ತಂದು ನೆಡುತ್ತೇವೆ ಎಂದು ಗ್ರೀನ್ ಸೇವರ್ಸ್ ಸದಸ್ಯ ಕೀರ್ತಿ ಸೂರಂಜನ್ ಹೇಳಿದ್ದಾರೆ.

ಮರ ಬೆಳೆಸಿ ಕಾಡು ಉಳಿಸಿ ಎಂಬುದು ಕೇವಲ ನಾಮಫಲಕಕ್ಕೆ ಸೀಮಿತವಾಗಿರುವ ಕಾಲದಲ್ಲಿ ಮುಂದಿನ ಪೀಳಿಗೆಗೆ ನೈಸರ್ಗಿಕ ವಾತಾವರಣ ನೀಡಿ ಪರಿಸರ ಕಾಳಜಿಯಿಂದ ಗ್ರೀನ್ ಸೇವರ್ಸ್ ತಂಡ ಮಾಡಿರುವ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ.

Leave a Reply

Your email address will not be published. Required fields are marked *