ಬಳ್ಳಾರಿಯಲ್ಲಿ ಬಡವರಿಗೆ ಮೋಸ ಮಾಡಿ ಮನಿ ಡಬ್ಲಿಂಗ್; ಪಬ್ಲಿಕ್ ಟಿವಿ ಸಿಬ್ಬಂದಿ ಮೇಲೆ ಹಲ್ಲೆ


ಬಳ್ಳಾರಿ: ಮನಿ ಡಬ್ಲಿಂಗ್ ದಂಧೆ ಚಿತ್ರೀಕರಣಕ್ಕೆ ತೆರಳಿದ್ದ ಪಬ್ಲಿಕ್ ಟಿವಿ ಸಿಬ್ಬಂದಿ ಮತ್ತು ಸಂಯುಕ್ತ ಕರ್ನಾಟಕದ ಪತ್ರಿಕೆಯ ವರದಿಗಾರರ ಗ್ಯಾಂಗ್ ಹಲ್ಲೆ ನಡೆಸಿದೆ.

ಚೆನ್ನೈ ಮೂಲದ ಬೆಸ್ಟ್ ಚಾಯ್ಸ್ ಜಾಹೀರಾತು ಕಂಪನಿಯ 20 ಜನರ ತಂಡವೊಂದು ಹೊಸಪೇಟೆ ಬಳಿಯ ಗುರು ಕಲ್ಯಾಣ ಮಂಟಪದಲ್ಲಿ 100 ರೂಪಾಯಿ ಕೊಟ್ರೆ 500 ನೀಡುತ್ತಿದೆ ಎನ್ನುವ ಖಚಿತ ಸುದ್ದಿ ಬಂದಿತ್ತು. ಈ ಸುದ್ದಿಯನ್ನು ಸೆರೆ ಹಿಡಿಯಲು ಪಬ್ಲಿಕ್ ಟಿವಿ ಸ್ಥಳಕ್ಕೆ ತೆರಳಿತ್ತು.

ಬಡ ಜನರ ಹಣವನ್ನು ಪಡೆದು ಹಣ ಪಡೆಯಲು ಚೀಟಿಗಳನ್ನು ನೀಡುವ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದಾಗ ಪಬ್ಲಿಕ್ ಟಿವಿ ವರದಿಗಾರ ಹಾಗೂ ಕ್ಯಾಮೆರಾಮ್ಯಾನ್ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೆ, ಕ್ಯಾಮೆರಾವನ್ನು ಧ್ವಂಸಗೊಳಿಸಿದ್ದು, ಮೆಮೊರಿ ಕಾರ್ಡ್ ಕಿತ್ತುಕೊಂಡಿದ್ದಾರೆ. ಘಟನೆಯಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರ ವಿವೇಕಾನಂದ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಅಷ್ಟೇ ಅಲ್ಲದೇ ಪೊಲೀಸರ ಮೇಲೆಯೇ ಡಬ್ಲಿಂಗ್ ಗ್ಯಾಂಗ್ ಕಲ್ಲು ತೂರಾಟ ನಡೆಸಿದೆ.

ಕಲ್ಲು ಹಿಡಿದು ಹಲ್ಲೆಗೆ ಮುಂದಾಗಿದ್ದ ಆರೋಪಿ ರಮೇಶ್ ಎದುರುಗಡೆ ಇದ್ದರೂ ಪೊಲೀಸರು ಆತನನ್ನು ಆತನನ್ನು ಅರೆಸ್ಟ್ ಮಾಡಲಿಲ್ಲ. ಈಗ ರಮೇಶ್ ಸ್ಥಳದಿಂದ ಪರಾರಿಯಾಗಿದ್ದಾನೆ. ಇವರ ದಂಧೆಗೆ ಪೊಲೀಸರು ಸಾಥ್ ನೀಡಿದ್ದಾರೆ ಎಂದು ಜನ ಆರೋಪಿಸಿದ್ದಾರೆ.

ತಿಳಿಯದವರಿಗೆ ತಿಳಿಸಿ: ಕಡಿಮೆ ಹಣ ನೀಡಿ ಹಳೇಯ 500, 1 ಸಾವಿರ ರೂ. ನೀಡುತ್ತೇನೆ ಯಾರೇ ಹೇಳಿದರೆ ಯಾವುದೇ ಕಾರಣಕ್ಕೆ ಆ ಹಣವನ್ನು ಸ್ವೀಕರಿಸಬೇಡಿ. ಈ ಆಸೆಗೆ ಹಣ ನೀಡಿದರೆ ನಿಮ್ಮಲ್ಲಿ ಈಗ ಇರುವ ಹಣವು ಬೇರೆಯವರ ಪಾಲಾಗುತ್ತದೆ. ಹಳೇಯ ನೋಟುಗಳು ಈಗ ಚಲಾವಣೆಯಲ್ಲಿ ಇಲ್ಲ. ಈ ವಿಚಾರ ನಿಮಗೆ ತಿಳಿದಿದ್ದರೆ ಬಡವರಿಗೆ ತಿಳಿಸಿ, ಅವರಲ್ಲಿರುವ ಅಲ್ಪಸ್ವಲ್ಪ ಹಣವನ್ನು ಉಳಿಸಲು ಸಹಕರಿಸಿ. ಈ ದಂಧೆಗೆ ಸಹಕರಿಸದಂತೆ ಅವರಿಗೆ ತಿಳಿಹೇಳಿ.

loading...

LEAVE A REPLY