Hug Me ಎಂದು ಚುಡಾಯಿಸಿದವ ಜೈಲು ಸೇರಿದ!

ಬೆಂಗಳೂರು: ರಸ್ತೆ ಬದಿ ನಿಂತು ಹಗ್ ಮಿ ಎಂದು ಪುಂಡಾಟಿಕೆ ತೋರಿಸಿದ್ದ ಯುವಕನನ್ನು ನಗರದ ವೈಯಾಲಿಕಾವಲ್ ಪೊಲೀಸರು ಬಂಧಿಸಿದ್ದಾರೆ.

ಮಣಿಕಂಠ (22) ಎಂಬಾತನೇ ಬಂಧಿತ ಯುವಕ. ನಿನ್ನೆ ಸಂಜೆ ವೈಯಾಲಿಕಾವಲ್‍ನಲ್ಲಿ ಈತ ಶಾಲಾ ವಿದ್ಯಾರ್ಥಿನಿಯರನ್ನು ಹಿಂಬಾಲಿಸಿ ನನ್ನನ್ನು ಅಪ್ಪಿಕೊಳ್ಳಿ ಎಂದು ಕೇಳಿಕೊಂಡಿದ್ದ. ಅದರಲ್ಲೂ 8ನೇ ಕ್ಲಾಸ್ ವಿದ್ಯಾರ್ಥಿನಿಯ ಬಳಿ ಅಸಭ್ಯವಾಗಿ ವರ್ತಿಸಿದ್ದ. ಈ ಹಿನ್ನೆಲೆಯಲ್ಲಿ ನಿನ್ನೆ ಸಂಜೆಯೇ ವಿದ್ಯಾರ್ಥಿನಿಯೊಬ್ಬಳ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ದೂರು ನೀಡಿದ 3 ಗಂಟೆ ಅವಧಿಯೊಳಗೆ ಇನ್ಸ್ ಪೆಕ್ಟರ್ ಶ್ರೀಧರ್ ಪೂಜಾರಿ ನೇತೃತ್ವದ ತಂಡ ಆರೋಪಿ ಮಣಿಕಂಠನನ್ನು ಬಂಧಿಸಿದೆ.

ಗಾಂಜಾ ಮತ್ತಿನಲ್ಲೇ ಈತ ಈ ರೀತಿ ವರ್ತಿಸಿದ್ದ ಎಂದು ಪೊಲೀಸ್ ತನಿಖೆ ವೇಳೆ ಬಯಲಾಗಿದೆ. ವಿಚಾರಣೆ ವೇಳೆ ಮಣಿಕಂಠ, ನಾನು ‘ಕಿಸ್ ಮಿ ಅಂದಿಲ್ಲ, ಹಗ್ ಮಿ’ ಅಂತಾ ಮಾತ್ರ ಹೇಳಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಬಂಧಿತ ಆರೋಪಿ ಈ ಹಿಂದೆಯೂ ಇದೇ ರೀತಿ ವರ್ತಿಸಿದ್ದ ಎನ್ನಲಾಗಿದೆ. ಆ ಸಂದರ್ಭದಲ್ಲೂ ಯುವತಿಯೊಬ್ಬಳು ದೂರು ನೀಡಿದ್ದಳು.

ಮಣಿಕಂಠ ಈ ಹಿಂದೆ ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿಯಾಗಿದ್ದ. ಅಂದು ಆತ ಅಪ್ರಾಪ್ತ ಬಾಲಕನಾಗಿದ್ದ. ಈ ಸಂಬಂಧ ಶ್ರೀರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

LEAVE A REPLY