Wednesday, 20th June 2018

Recent News

ನಿನ್ನೆ 45 ನಿಮಿಷ, ಮುಂದೆ 5 ನಿಮಿಷ ಮೋದಿ ಭಾಷಣವಿರುತ್ತೆ ಅಂತ ತಾಯಿ ಅಂದ್ರು: ಮೋದಿ ವಿರುದ್ಧ ರಾಹುಲ್ ವಾಗ್ದಾಳಿ

ಬೆಂಗಳೂರು: ಪ್ರಧಾನಿ ಮೋದಿಯವರು ಮುಂದಿನ ವರ್ಷ 15 ನಿಮಿಷ, ಅದರ ಮುಂದಿನ ವರ್ಷ 5 ನಿಮಿಷ ಸ್ವಾತಂತ್ರ್ಯ ಭಾಷಣ ಮಾಡಲಿದ್ದಾರೆ ಎಂದು ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಅವರು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಕಾಂಗ್ರೆಸ್ ಸಾರ್ಥಕ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿ ಕಳೆದ ವರ್ಷ ದೇಶದ ಜನರನ್ನು ಉದ್ದೇಶಿಸಿ ಸುದೀರ್ಘವಾಗಿ ಅಂದ್ರೆ ಸುಮಾರು 90 ನಿಮಿಷ ಭಾಷಣ ಮಾಡಿದ್ದರು. ಈ ವರ್ಷ 45 ನಿಮಿಷವಷ್ಟೇ ಮಾತನಾಡಿದ್ದಾರೆ. ಇದನ್ನು ನೋಡಿ ನನ್ನ ತಾಯಿ ಸೋನಿಯಾ ಗಾಂಧಿ ಅವರು ಮುಂದಿನ ವರ್ಷ 15 ವರ್ಷ, ಅದರ ಮುಂದಿನ ವರ್ಷ 5 ನಿಮಿಷಕ್ಕೆ ಇಳಿಯಲಿದೆ ಎಂದಿದ್ದಾರೆ ಎಂದು ತಿಳಿಸಿದ್ರು.

ಮೋದಿ ಸ್ವಚ್ಛ ಭಾರತ ಅಂತಾರೆ. ಆದ್ರೆ ನಾವು ಸಚ್ ಭಾರತ್ ಅಂತೀವಿ. ಮೋದಿಗೆ ಸತ್ಯದ ಮೇಲೆ ನಂಬಿಕೆ ಇಲ್ಲ. ಸತ್ಯ ಹೇಳಿ ಗೊತ್ತಿಲ್ಲ. ಜನರಿಗೆ ಹೇಳೋದಕ್ಕೆ ಏನು ಉಳಿದಿಲ್ಲ. ಮೋದಿ ಅತ್ಯಂತ ಹೆಚ್ಚು ನಿರುದ್ಯೋಗದ ಬಗ್ಗೆ ಮಾತಾಡಿಲ್ಲ. ಹೆಚ್ಚು ಉದ್ಯೋಗ ಸೃಷ್ಟಿ ಮಾಡುವ ಕೆಲಸ ಅವರಿಂದ ಆಗಲಿಲ್ಲ. ಆದ್ರೆ 30 ಸಾವಿರ ಉದ್ಯೋಗ ಗಳನ್ನ ನಮ್ಮ ಸಿದ್ದರಾಮಯ್ಯ ಸರ್ಕಾರ ಸೃಷ್ಟಿ ಮಾಡಿದೆ. ಇದನ್ನ ಅವರು ಹೇಳಲಿಲ್ಲ ಏಕೆ? ಚುನಾವಣೆಗೂ ಮೊದಲು ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಅಂತ ಹೇಳಿದ್ರು. ಏನಾಯಿತು ನಿಮ್ಮ ಗುರಿ ಅಂತ ಪ್ರಧಾನಿಯನ್ನು ಪ್ರಶ್ನಿಸಿದ್ರು.

ಈ ದೇಶದ ಪ್ರಧಾನಿಗಳು ನಿಜವಾದ ಪ್ರಧಾನಿಯಾಗಿ ಕೆಲಸ ಮಾಡಬೇಕಾದ ಕಾಲ ಈಗ ಬಂದಿದೆ. ಈಗಲಾದ್ರೂ ದೇಶದ ಜನರ ಪ್ರಶ್ನೆಗಳಿಗೆ ಉತ್ತರ ಕೊಡಿ. ಪ್ರಧಾನಿ ಸ್ಥಾನ ದೇಶದ ಜನರ ಚೈತನ್ಯ. ಅದಕ್ಕಾದ್ರೂ ಉತ್ತರ ಕೊಡಿ ಮಿಸ್ಟರ್ ಮೋದಿ ಅಂತ ರಾಹುಲ್ ಹೇಳಿದ್ರು.

ಇದನ್ನೂ ಓದಿ: ಕಿರು ಭಾಷಣ ಮಾಡಿ ಕೊಟ್ಟ ಮಾತನ್ನು ಉಳಿಸಿದ ಪ್ರಧಾನಿ ಮೋದಿ

ಗೋರಖ್‍ಪುರದ ಆಸ್ಪತ್ರೆಯಲ್ಲಿ ಮಕ್ಕಳು ಸತ್ತ ಬಗ್ಗೆ ಏಕೆ ಮಾತಾಡಿಲ್ಲ. ಇವರು ಕೆಟ್ಟ ವ್ಯವಸ್ಥೆ, ನಿಯಮಗಳೇ ಮಕ್ಕಳ ಸಾವಿಗೆ ಕಾರಣ. ಇದೇನಾ ನಿಮ್ಮ ಅಭಿವೃದ್ಧಿ? ಮಿಸ್ಟರ್ ಮೋದಿ ನೀತಿ ಏನು? ಬಡವರು ಸರ್ಕಾರಿ ಆಸ್ಪತ್ರೆಗೆ ಹೋಗಿ ಸಾಯೋದಾ? ಶ್ರೀಮಂತರು ಖಾಸಗಿ ಆಸ್ಪತ್ರೆಗೆ ಹೋಗ್ತಾರೆ. ಇದು ಮಿಸ್ಟರ್ ಮೋದಿ ನೀತಿ ಅಂತ ಕಿಡಿಕಾರಿದ್ರು.

ಚೀನಾದ ಜೊತೆ ಜೋಕಾಲಿ: ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರೇ, ನಿಮ್ಮ ಮನೆಗೆ ಅತಿಥಿಗಳ ಜೊತೆ ಕಳ್ಳರು ಬಂದ್ರೆ ಜೋಕಾಲಿ ಆಡ್ತೀರಾ ಅಂತಾ ರಾಹುಲ್ ಪ್ರಶ್ನಿಸಿದ್ರು. ಅದಕ್ಕೆ ಸಿಎಂ ನೋ ನೋ ಅಂದ್ರು. ಹೌದು. ಆದ್ರೆ ಇಲ್ಲಿ ಪ್ರಧಾನಿ ಮೋದಿ ಹಾಗೇ ಮಾಡಿದ್ದಾರೆ. ಚೀನಾದ ಅಧ್ಯಕ್ಷರನ್ನು ತಬ್ಬಿಕೊಂಡು ಜೋಕಾಲಿ ಆಡ್ತಾರೆ. ಅಧ್ಯಕ್ಷರ ಜತೆಯಲ್ಲೇ ಚೀನಾ ಸೈನಿಕರು ನಮ್ಮ ಗಡಿಯೊಳಗೆ ನುಗ್ಗುತ್ತಾರೆ. ಇದು ಮೋದಿ ಅವರ ಪ್ರೀತಿನಾ ಎಂದು ಪ್ರಶ್ನಿಸಿದ್ರು.

ಮೋದಿ ನೀತಿ ಕಾರಣ: ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಸುವ್ಯವಸ್ಥೆ ಇದ್ರೆ ಪಾಕಿಸ್ತಾನ ನಮ್ಮ ಮೇಲೆ ಕಾಲು ಕೆರೆದುಕೊಂಡು ಬರುವುದಿಲ್ಲ. ಪರ ರಾಷ್ಟ್ರಗಳು ಸಹ ನಮ್ಮ ಮೇಲೆ ತಿರುಗಿ ಬೀಳ್ತಿರಲಿಲ್ಲ. ಹತ್ತು ವರ್ಷಗಳ ಕಾಲ ಶಾಂತಿ ಸುವ್ಯವಸ್ಥೆ ಕಾಪಾಡಿದ್ದು ಒಂದೇ ತಿಂಗಳಲ್ಲಿ ಶಾಂತಿ ಕದಡುವ ಕೆಲಸವನ್ನು ಮೋದಿ ಮಾಡಿದ್ರು. ಮೋದಿ ನೀತಿಯಿಂದಲೇ ಎಲ್ಲ ರಾಷ್ಟ್ರಗಳು ನಮಗೆ ಶತ್ರು ರಾಷ್ಟ್ರಗಳಾಗ್ತಿವೆ ಅಂತ ಗುಡುಗಿದ್ರು.

ಕೇಂದ್ರಕ್ಕೆ ಸ್ಪಷ್ಟವಾದ ವಿದೇಶಾಂಗ ನೀತಿ ಇಲ್ಲ. ಇತಿಹಾಸದಲ್ಲಿ ಮೊದಲ ಬಾರಿಗೆ ರಷ್ಯಾ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಪೂರೈಕೆ ಮಾಡಿದೆ. ಕಳೆದ ಮೂರು ವರ್ಷ ದಲ್ಲಿ ಸ್ನೇಹ ಸಂಪಾದನೆಯಲ್ಲಿ ವಿಫಲರಾಗಿದ್ದಾರೆ. ಪಕ್ಕದ ರಾಷ್ಟ್ರಗಳಲ್ಲಿ ಅಸಹನೆ ಸೃಷ್ಟಿ ಮಾಡಿದ್ದಾರೆ ಅಂತ ರಾಹುಲ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ್ರು.

ರಾಹುಲ್ ಎಡವಟ್ಟು: ಕಾರ್ಯಕ್ರಮದ ಆರಂಭದಲ್ಲಿ ಮಾಜಿ ಸಚಿವ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಕನ್ನಡದಲ್ಲಿ ಸ್ವಾಗತ ಭಾಷಣ ಮಾಡುತ್ತಿದ್ದರು. ರಾಹುಲ್ ಗಾಂಧಿಯವರಿಗೆ ಸ್ವಾಗತಿಸಿದಾಗ ಅವರು ಸುಮ್ಮನೆ ಕುಳಿತಿದ್ದರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಮ್ಮ ಹೆಸರು ಹೇಳುತ್ತಿದ್ದಾರೆ ಅಂದ ತಕ್ಷಣ ರಾಹುಲ್ ಎದ್ದು ನಿಂತು ಸಭೆಗೆ ಕೈ ಮುಗಿದರು.

ನಾಯಕರು ತಬ್ಬಿಬ್ಬು: ಸಾರ್ಥಕ ಸಮಾವೇಶವನ್ನು ತಮ್ಮ ಎಡಗೈಯಿಂದ ದೀಪ ಬೆಳಗಿಸಿ ಉದ್ಘಾಟಿಸಿದ ರಾಹುಲ್ ಗಾಂಧಿ ನೇರವಾಗಿ ಡಯಾಸ್ ಏರಿ ಮಾತು ಆರಂಭಿಸಿದರು. ಭಾಷಣಕ್ಕೆ ಕರೆಯುವ ಮೊದಲೇ ರಾಹುಲ್ ಗಾಂಧಿ ಮಾತನ್ನು ಆರಂಭಿಸಿದ್ದನ್ನು ಕಂಡು ನಾಯಕರು ಒಮ್ಮೆ ತಬ್ಬಿಬ್ಬಾದರು.

ರಾಹುಲ್ ಗಾಂಧಿ ಭಾಷಣ ಮಾಡುತ್ತಿದ್ದಂತೆಯೇ ಸಮಾವೇಶಕ್ಕೆ ಸೇರಿದ್ದ ಮಂದಿ ಅರ್ಧಕ್ಕೆ ಎದ್ದು ಹೋಗುತ್ತಿದ್ದರು. ಇದು ಕಾಂಗ್ರೆಸ್ ನಾಯಕರಿಗೆ ಅಸಮಾಧಾನವನ್ನುಂಟು ಮಾಡಿತ್ತು.

ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಕಾಂಗ್ರೆಸ್ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸಿ.ವೇಣುಗೋಪಾಲ್, ಬಿ.ಕೆ.ಹರಿಪ್ರಸಾದ್, ಕೆ.ಎಚ್.ಮುನಿಯಪ್ಪ, ಕೆ.ರಹಮಾನ್ ಖಾನ್, ಮಾರ್ಗರೇಟ್ ಅಳ್ವಾ, ಕಾರ್ಯಾಧ್ಯಕ್ಷರುಗಳಾದ ಎಸ್.ಆರ್.ಪಾಟೀಲ್, ಡಿ.ಕೆ.ಶಿವಕುಮಾರ್, ರಾಮಲಿಂಗಾರೆಡ್ಡಿ, ಜಾರ್ಜ್ ಸೇರಿದಂತೆ ಸಚಿವರು, ನಾಯಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *