Monday, 25th June 2018

Recent News

ಜನರಿಗೆ ಕೊಟ್ಟ ಆಶ್ವಾಸನೆ ಈಡೇರಿಸದೇ ಕಾಗೆ ಹಾರಿಸಿದ ಶಾಸಕ ಶಿವರಾಜ್ ತಂಗಡಗಿ

ಕೊಪ್ಪಳ: ರಾಜಕೀಯ ನಾಯಕರು ಜನ ಸಮೂಹದ ಮುಂದೆ ಭಾಷಣ ಮಾಡುವಾಗ, ಕೊಟ್ಟ ಆಶ್ವಾಸನೆ ಈಡೇರಿಸದೇ ಕಾಗೆ ಹಾರಿಸೋದು ಇತ್ತೀಚೆಗೆ ಸಾಮಾನ್ಯವಾಗಿದೆ. ಆದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಪಕ್ಷದ ಶಾಸಕರೊಂದಿಗೆ ಸೇರಿ ದೇವರಿಗೂ ಕಾಗೆ ಹಾರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕನಕಗಿರಿ ಶಾಸಕ ಶಿವರಾಜ್ ತಂಗಡಗಿ ಮತ್ತು ರಾಹುಲ್ ಕನಕಗಿರಿಯ ಲಕ್ಷ್ಮೀ ನರಸಿಂಹ ಕನಕಾಚಲಪತಿ ದೇವರಿಗೆ ನೀಡಿದ್ದ ಆಶ್ವಾಸನೆಯನ್ನೇ ಮರೆತಿದ್ದಾರೆ. ಕಳೆದ ವಾರ ಹೈದರಾಬಾದ್ ಕರ್ನಾಟಕ ಪ್ರವಾಸದಲ್ಲಿದ್ದ ರಾಹುಲ್ ಗಾಂಧಿ ಫೆ.11 ರಂದು ಕೊಪ್ಪಳ ಜಿಲ್ಲೆ ಕಾರಟಗಿಯಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿದ್ದರು. ಈ ವೇಳೆ ರಾಹುಲ್ ಸನ್ಮಾನಿಸಿದ ಶಾಸಕ ಶಿವರಾಜ್ ತಂಗಡಗಿ ಬೆಳ್ಳಿ ಖಡ್ಗವನ್ನು ಉಡುಗೊರೆ ನೀಡಿದ್ದರು.

ಖಡ್ಗ ಕೈಗಿಡುತ್ತಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸಲಹೆಯಂತೆ ರಾಹುಲ್ ಗಿಫ್ಟ್ ತಿರಸ್ಕರಿಸಿದ್ದರು. ರಾಹುಲ್ ಈ ನಡೆಗೂ ಒಂದು ಫ್ಲ್ಯಾಶ್ ಬ್ಯಾಕ್ ಇದೆ. ಅದೇನೆಂದರೆ ಫೆ. 10 ರಂದು ಹೊಸಪೇಟೆಯಲ್ಲಿ ಕೂಡ್ಲಿಗಿ ಮಾಜಿ ಶಾಸಕ ನಾಗೇಂದ್ರ ರಾಹುಲ್ ಗಾಂಧಿಗೆ ಕೆಜಿಗಟ್ಟಲೇ ಚಿನ್ನ ಮತ್ತು ಬೆಳ್ಳಿ ಮಿಶ್ರಿತ ವಾಲ್ಮೀಕಿ ಮೂರ್ತಿಯನ್ನು ಉಡುಗೊರೆಯಾಗಿ ಮಾಡಿದ್ದರು. ಇದರಿಂದ ರಾಹುಲ್ ದುಬಾರಿ ಉಡುಗೊರೆ ಪಡೆದರು ಎಂದು ಮಾಧ್ಯಮದಲ್ಲಿ ದೊಡ್ಡ ಸುದ್ದಿಯಾಗಿ, ರಾಹುಲ್ ಮುಜುಗರಕ್ಕೆ ಈಡಾಗಿದ್ದರು.

ಕೂಡಲೇ ಎಚ್ಚೆತ್ತ ರಾಹುಲ್, ಗಿಫ್ಟ್ ವಾಪಾಸ್ ನೀಡಲು ನಿರ್ಧರಿಸಿದ್ದರು. ಆದರೆ ಸಿಎಂ ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ಸಲಹೆಯಂತೆ ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ನೀಡುವುದಾಗಿ ಘೋಷಣೆ ಮಾಡಿ ಪ್ರಕರಣಕ್ಕೆ ತೆರೆ ಎಳೆದಿದ್ದರು. ಈ ಕಾರಣಕ್ಕೆ ಶಾಸಕ ಶಿವರಾಜ್ ತಂಗಡಗಿ ನೀಡಿದ ಬೆಳ್ಳಿ ಖಡ್ಗವನ್ನು ರಾಹುಲ್ ನಿರಾಕರಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಈ ಬಗ್ಗೆ ಜನರ ಮುಂದೆ ಅನೌನ್ಸ್ ಮಾಡಿದ ಶಾಸಕ ಶಿವರಾಜ್ ತಂಗಡಗಿ, ಈ ಬೆಳ್ಳಿ ಖಡ್ಗವನ್ನು ಕನಕಾಚಲಪತಿ ದೇವಸ್ಥಾನಕ್ಕೆ ನೀಡುವುದಾಗಿ ತಿಳಿಸಿದ್ದರು.

ಆದರೆ ಕಾರ್ಯಕ್ರಮ ಮುಗಿದು 12 ದಿನ ಕಳೆದರೂ ಖಡ್ಗ ದೇವಸ್ಥಾನ ಸೇರಿಲ್ಲ. ಇದರಿಂದ ಶಾಸಕ ತಂಗಡಗಿ ಇದನ್ನು ತಮ್ಮ ಮನೆಯಲ್ಲೇ ಇಟ್ಟುಕೊಂಡರಾ ಅಥವಾ ಮಾಧ್ಯಮಗಳ ಬಾಯಿ ಮುಚ್ಚಿಸಲು ನಾಟಕ ಮಾಡಿ, ರಾಹುಲ್ ಗಾಂಧಿಯೇ ಖಡ್ಗವನ್ನು ತೆಗೆದುಕೊಂಡು ಹೋದರಾ ಎಂಬುದು ಸದ್ಯದ ಪ್ರಶ್ನೆಯಾಗಿದೆ.

Leave a Reply

Your email address will not be published. Required fields are marked *