Thursday, 21st June 2018

ಈಗಲೂ ನನಗೆ ಸಿದ್ದರಾಮಯ್ಯರೇ ಮುಖ್ಯಮಂತ್ರಿ: ಸಚಿವ ಪುಟ್ಟರಂಗ ಶೆಟ್ಟಿ

ಮೈಸೂರು: ನನಗೆ ಈಗಲೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಎಂದು ಹಿಂದುಳಿದ ವರ್ಗಗಳ ಖಾತೆಯ ಸಚಿವ ಪುಟ್ಟರಂಗ ಶೆಟ್ಟಿ ಹೇಳಿದ್ದಾರೆ.

ಇಂದು ವರುಣಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಪುಟ್ಟರಂಗ ಶೆಟ್ಟಿ, ಉಪ್ಪಾರರು ವಿಧಾನಸೌದದ ಮೆಟ್ಟಿಲು ತುಳಿದಿದ್ದಾರೆ ಅಂದರೆ ಅದಕ್ಕೆ ಸಿದ್ದರಾಮಯ್ಯ ಕಾರಣ. ನಾನು ಮಂತ್ರಿಯಾಗಿದ್ದರೆ ಅದು ಸಿದ್ದರಾಮಯ್ಯನವರಿಂದ. ಹೀಗಾಗಿ ನನ್ನ ಪಾಲಿಗೆ ಅವರೇ ಮುಖ್ಯಮಂತ್ರಿಗಳು ಎಂದು ಸಚಿವ ಪುಟ್ಟರಂಗಶೆಟ್ಟಿ ಬಹಿರಂಗವಾಗಿ ಹೇಳಿದರು.

ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಧರ್ಮಸೇನಾ ಅವರು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗದಿದ್ದರೂ ಮುಖ್ಯಮಂತ್ರಿಗಿಂತಲೂ ಉನ್ನತ ಸ್ಥಾನವಾದ ಸಮನ್ವಯ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಇದು ನಮಗೆ ಸಾಕು. ಜೊತೆಯಲ್ಲಿದ್ದವರೇ ಮೋಸ ಮಾಡಿದಾಗ ನೋವಾಗುತ್ತೆ. ಆದರೆ ನೀವು ಚಾಮುಂಡೇಶ್ವರಿ ಸೋಲಿನಿಂದ ಎದೆಗುಂದಬೇಡಿ ಎಂದು ಮಾಜಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡರು. ಅಲ್ಲದೇ ನಾನು ಮೊದಲೇ ಹೇಳಿದ್ದೆ ಚಾಮುಂಡೇಶ್ವರಿ ಕ್ಷೇತ್ರ ಬೇಡ ಎಂದು, ಆದರೆ ನನಗೆ ಭಯವಿಲ್ಲ ನಿನಗೇಕೆ ಭಯ ಎಂದು ನನ್ನನ್ನು ಸುಮ್ಮನಾಗಿಸಿದ್ದರು. ಈಗ ಇಲ್ಲಿನ ಜನರೇ ಕೈ ಬಿಟ್ಟಿದ್ದಾರೆ ಅಂತಾ ಬೇಸರ ವ್ಯಕ್ತಪಡಿಸಿದರು. ಇದನ್ನು ಓದಿ: ಅಧಿಕಾರ ಬಂದ ಮೇಲೆ ಎಲ್ಲರು ಕಣ್ಣಿಗೆ ಕಾಣ್ತಿದ್ದಾರಾ? ಪುಟ್ಟರಂಗ ಶೆಟ್ಟಿಗೆ ಮಾಜಿ ಸಿಎಂ ಪ್ರಶ್ನೆ

ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಮಗನನ್ನು ಭಾರೀ ಅಂತರದಿಂದ ಗೆಲ್ಲಿಸಿದ್ದಕ್ಕೆ ಹೃದಯಪೂರ್ವಕ ಧನ್ಯವಾದಗಳು. ನನಗೆ 30 ಸಾವಿರ ಅಂತರ ನೀಡಿದ್ದ ನೀವು, ನನ್ನ ಮಗನಿಗೆ ಅದರ ದುಪ್ಪಟ್ಟು ಮತ ನೀಡಿದ್ದೀರಿ. ಒಳ್ಳೆಯ ನಿರ್ಧಾರ ಮಾಡಿದ ನಿಮಗೆ ನನ್ನ ಧನ್ಯವಾದ ಎಂದು ಹೇಳಿದರು. ಇದೇ ವೇಳೆ ಕಾಂಗ್ರೆಸ್ ಸರ್ಕಾರ ಒಳ್ಳೆ ಕೆಲಸ ಮಾಡಿದರೂ ಜನ ಏಕೆ ಆಶೀರ್ವಾದ ಮಾಡಲಿಲ್ಲ ಎಂದು ತಮ್ಮನ್ನ ತಾವೇ ಪ್ರಶ್ನೆ ಮಾಡಿಕೊಂಡು ಬಳಿಕ ತಮ್ಮ ವ್ಯಂಗ್ಯದ ಶೈಲಿಯಲ್ಲಿ ಬಿಜೆಪಿ ವಿರುದ್ದ ವಾಗ್ದಾಳಿ ಕೂಡ ನಡೆಸಿದರು. ಇಷ್ಟೇಲ್ಲ ಆದರೂ ಒಮ್ಮೆಯೂ ಚಾಮುಂಡೇಶ್ವರಿ ಕ್ಷೇತ್ರದ ಹೆಸರು ಹೇಳದೆ ತಮ್ಮ ಸೋಲಿನ ನೋವನ್ನು ಹೇಳಿಕೊಳ್ಳದೇ ತಮ್ಮ ಒಳಗೆ ನುಂಗಿದರು.

 

 

Leave a Reply

Your email address will not be published. Required fields are marked *