ಎಂಇಎಸ್ ಸಂಘಟನೆಯ ವಿವಾದಾತ್ಮಕ ಟಿ-ಶರ್ಟ್ ಮಾರಾಟಗಾರರ ಬಂಧನ

ಬೆಳಗಾವಿ: ಎಂಇಎಸ್ ಸಂಘಟನೆ ಕಾಯಕರ್ತರು ವಿವಾದಾತ್ಮಕ ಬರಹವುಳ್ಳ ಟಿ-ಶರ್ಟ್ ಮಾರಾಟ ಮಾಡುತ್ತಿದ್ದ ಮೂವರನ್ನು ಶುಕ್ರವಾರ ಸಂಜೆ ಬೆಳಗಾವಿ ಪೊಲೀಸರು ನಗರದ ಮಾರುಕಟ್ಟೆಯಲ್ಲಿ ಬಂಧಿಸಿದ್ದಾರೆ.

ಈ ಟಿ-ಶರ್ಟ್‍ಗಳ ಮೇಲೆ “ನಾನು ಬೆಳಗಾವಿಯವನು ಮತ್ತು ಬೆಳಗಾವಿ ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದ್ದು” ಎಂಬ ಸಂದೇಶ ಬಿಂಬಿಸುವ ಟಿ-ಶರ್ಟ್ ಮತ್ತು ಶಾಲುಗಳನ್ನು ನಗರದ ಖಡೇ ಬಜಾರ್ ಮತ್ತು ಗಣಪತಿ ಗಲ್ಲಿಯಲ್ಲಿ ಮಾರಾಟ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ದಿಗ್ವಿಜಯ್ ಪಾಟೀಲ್ ಮತ್ತು ಪ್ರಕಾಶ್, ಶಾಹಿಜಿರಾವ್ ಬೋಸ್ಲೆ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣ ಪತ್ತೆಯಾಗಿದ್ದು ಹೀಗೆ: ಎಂಇಎಸ್ ಸಂಘಟನೆ ಕಾರ್ಯಕರ್ತನೊಬ್ಬ ಟಿ-ಶರ್ಟ್ ಹಾಕಿಕೊಂಡು ಸೆಲ್ಫಿ ಕ್ಲಿಕಿಸಿಕೊಂಡು ಫೋಟೋವನ್ನು ಫೇಸ್ ಬುಕ್ ಮತ್ತು ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದನು. ಸೆಲ್ಫಿ ಫೋಟೊದಿಂದಾಗಿ ಪ್ರಕರಣ ಬೆಳಕಿಗೆ ಬಂದಿದೆ.

ಇದೇ ತಿಂಗಳು 16 ರಂದು ನಗರದಲ್ಲಿ ಮರಾಠಾ ಮೋರ್ಚಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕಾಗಿ ಕರ್ನಾಟಕ ವಿರೋಧಿ ಟಿ-ಶರ್ಟ್‍ಗಳನ್ನು ಮಾರಾಟ ಮಾಡಲಾಗುತ್ತಿತ್ತು. ಆರೋಪಿಗಳ ವಿರುದ್ಧ ಕಲಂ 153 (ಎ) (ಗುಂಪುಗಳ ನಡುವೆ ದ್ವೇಷ ಭಾವನೆ ಕೆರಳಿಸುವ ಯತ್ನ) ಮತ್ತು ಕಲಂ 502 (ಪ್ರಚೋದನಕಾರಿ ಅಂಶ ಪ್ರಕಟಿಸಿ ಮಾರಾಟ ಮಾಟಲು ಯತ್ನ) ಅನ್ವಯ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You might also like More from author

Leave A Reply

Your email address will not be published.

badge