Monday, 28th May 2018

ಶೀಲ ಶಂಕಿಸಿ ಪತ್ನಿಯ ಮುಖಕ್ಕೆ ಆಸಿಡ್ ಎರಚಿದ ಪಾಪಿ ಪತಿ

ಜೈಪುರ್: ಪತ್ನಿಯ ಶೀಲದ ಮೇಲೆ ಸಂಶಯ ಪಟ್ಟು ಆಕೆಯ ಮೇಲೆ ಆಸಿಡ್ ಎರಚಿದ ಘಟನೆ ಶನಿವಾರ ಸಂಜೆ ರಾಜಸ್ಥಾನದ ಜೈಪುರ್ ಜಿಲ್ಲೆಯ ಮಾಲಾಪದದಲ್ಲಿ ನಡೆದಿದೆ.

ಭಾಗಿರಥಿ ಮಹಾಲಿಕ್ (45) ಪತ್ನಿಗೆ ಆಸಿಡ್ ಹಾಕಿದ ಆರೋಪಿ ಪತಿ. ಆಸಿಡ್ ದಾಳಿಯಿಂದ 40 ವರ್ಷದ ಮಹಿಳೆಯ ಮುಖ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಮಹಿಳೆ ಆಸಿಡ್ ದಾಳಿಯಿಂದ ಬಳಲುತ್ತಿದ್ದಾಗ ಅಕ್ಕಪಕ್ಕದ ಮನೆಯವರು ರಕ್ಷಿಸಿ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲೆ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ನನ್ನ ತಂದೆ, ತಾಯಿಯ ಶೀಲದ ಮೇಲೆ ಯಾವಾಗಲೂ ಸಂಶಯಪಡುತ್ತಿದ್ದನು. ಮನೆಗೆ ಬಂದ ತಕ್ಷಣ ನನ್ನ ತಾಯಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಚಿತ್ರಹಿಂಸೆ ನೀಡುತ್ತಿದ್ದನು ಎಂದು 20 ವರ್ಷದ ಮಗಳೇ ತಂದೆಯ ವಿರುದ್ಧ ದೂರು ನೀಡಿದ್ದು, ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.

ಈ ಘಟನೆ ಶನಿವಾರ ನಡೆದಿದ್ದು, ಮನೆಗೆ ಬಂದ ತಕ್ಷಣ ಭಾಗಿರಥಿ ತನ್ನ ಹೆಂಡತಿಯ ಜೊತೆ ಜಗಳವಾಡಿ ಆಕೆಯ ಮೇಲೆ ಆಸಿಡ್ ಎರಚಿದ್ದಾನೆ. ಭಾನುವಾರ ಪೊಲೀಸರು ಭಾಗಿರಥಿಯನ್ನು ವಶಕ್ಕೆ ಪಡೆದಿದ್ದಾರೆ. ನಂತರ ಭಾಗಿರಥಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಆತನ ಜಾಮೀನು ಅರ್ಜಿಯನ್ನು ಕೂಡ ತಿರಸ್ಕರಿಸಿದೆ ಎಂದು ಜೈಪುರ್ ನ ಉಪ-ವಿಭಾಗದ ಪೊಲೀಸ್ ಅಧಿಕಾರಿಯಾದ ಪ್ರಶಾಂತ್ ಕುಮಾರ್ ಮಾಲಾ ತಿಳಿಸಿದ್ದಾರೆ.

Leave a Reply

Your email address will not be published. Required fields are marked *