Tuesday, 22nd May 2018

Recent News

ಅಗಲಿದ ಮಡದಿಗಾಗಿ ದೇವಸ್ಥಾನ ಕಟ್ಟಿ, ಪ್ರತಿಮೆ ಮಾಡಿ ಪ್ರತಿನಿತ್ಯ ಆರಾಧಿಸ್ತಾರೆ ಚಾಮರಾಜನಗರದ ರಾಜು!

ಚಾಮರಾಜನಗರ: ಈಗಿನ ಕಾಲದಲ್ಲಿ ಪತ್ನಿ ಜೀವಂತವಾಗಿ ಇರುವ ಸಂದರ್ಭದಲ್ಲೇ ಆಕೆಗೆ ವಿಚ್ಛೇದನ ನೀಡಿ ಬೇರೊಬ್ಬಳ ಜೊತೆ ಜೀವನ ನಡೆಸುತ್ತಿರುವ ಪತಿಯರನ್ನು ಕಾಣಬಹುದು. ಆದ್ರೆ ಇಲ್ಲೊಬ್ಬರು ತನ್ನ ಪತ್ನಿ ಸಾವನ್ನಪ್ಪಿದ ನಂತರ ಸಮಾಧಿ ಬಳಿ ದೇವಸ್ಥಾನ ಕಟ್ಟಿಸಿ, ತನ್ನಾಕೆಯ ಪ್ರತಿಮೆಗೆ ಪ್ರತಿನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ.

ಜಿಲ್ಲೆಯ ಯಳಂದೂರು ತಾಲೂಕಿನ ಕೃಷ್ಣಪುರದ ನಿವಾಸಿ ರಾಜು ಹಾಗೂ ರಾಜಮ್ಮ ಪರಸ್ಪರ ಪ್ರೀತಿಸಿ ಮದುವೆಯಾದವರು. ಇರುವಷ್ಟು ದಿನಗಳ ಕಾಲ ಅನ್ಯೋನ್ಯವಾಗಿಯೂ ಜೀವನ ನಡೆಸುತ್ತಿದ್ದರು. ಆದರೆ ರಾಜಮ್ಮ ಅವರು ಅನಾರೋಗ್ಯದ ಕಾರಣ ನಿಧನರಾಗಿ ರಾಜು ಅವರಿಂದ ದೂರವಾದರು. ಆದರೆ ರಾಜು ತನ್ನ ಪ್ರೇಯಸಿಯ ಕೊನೆ ಆಸೆಯಂತೆ ಕೂಲಿ, ನಾಲಿ ಮಾಡಿ ದೇವಸ್ಥಾನ ಕಟ್ಟಿಸಿದ್ದರು. ಅಷ್ಟೆಕ್ಕೆ ಸುಮ್ಮನಿರದ ರಾಜು, ದೇವಸ್ಥಾನದ ಸಮೀಪದಲ್ಲೇ ತನ್ನ ಪ್ರೇಯಸಿಗೊಂದು ಗುಡಿಯ ಕಟ್ಟಿಸಿದರು. ಹಗಲಿರುಳೆನ್ನದೆ ತನ್ನ ಮಡದಿಯ ಪ್ರತಿಮೆಯನ್ನು ತಾವೇ ಕೆತ್ತಿ ಪ್ರತಿಷ್ಠಾಪನೆಯನ್ನೂ ಕೂಡ ಮಾಡಿದ್ದಾರೆ. ಪ್ರತಿನಿತ್ಯ ತನ್ನ ನೆಚ್ಚಿನ ಮಡದಿಗೆ ಪೂಜೆ ಸಲ್ಲಿಸಿದ ಬಳಿಕ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಆ ಮೂಲಕ ತನ್ನ ನೆಚ್ಚಿನ ಮಡದಿಯನ್ನು ಆರಾಧಿಸುತ್ತಿದ್ದಾರೆ.

ರಾಜು ಶಿಲ್ಪಿಯಲ್ಲದಿದ್ದರೂ ತನ್ನ ಮಡದಿಯ ಪ್ರತಿಮೆಯನ್ನು ತಾವೇ ಕೆತ್ತಿದ್ದಾರೆ. ಮುಖದ ಭಾವಚಿತ್ರ ದೇವತೆ ಕುಳಿತುಕೊಳ್ಳುವ ರೀತಿಯಲ್ಲಿ ಪತ್ನಿ ಪ್ರತಿಮೆ ನಿರ್ಮಿಸಿರುವುದು ಗಮನ ಸೆಳೆಯುತ್ತದೆ. ಕಣ್ಣು, ಮೂಗೂತಿ, ಓಲೆ, ಬಳೆ, ಕಾಲುಂಗೂರ, ತಾಳಿ ಸೇರಿದಂತೆ ಎಲ್ಲವನ್ನೂ ಸುಂದರವಾಗಿ ನಿರ್ಮಿಸಿದ್ದಾರೆ. ಪ್ರತಿನಿತ್ಯ ಸ್ನಾನ ಮುಗಿಸಿದ ನಂತರ ಮೊದಲ ಪೂಜೆಯನ್ನ ಮಡದಿಗೆ ಸಲ್ಲಿಸುತ್ತಾರೆ. ನಂತರ ದೇವತೆಗಳಿಗೆ ಪೂಜೆ ಸಲ್ಲಿಸುವ ಕಾಯಕವನ್ನ ಅಂದಿನಿಂದ ಇಂದಿನವರೆಗೂ ಚಾಚು ತಪ್ಪದೆ ಅಳವಡಿಸಿಕೊಂಡು ಬಂದಿದ್ದಾರೆ. ಇತಿಹಾಸದಲ್ಲಿ ಷಹಜಾಹನ್ ತನ್ನ ಮಡದಿ ಮಮ್ತಾಜಳ ನೆನಪಿಗಾಗಿ ತಾಜ್ ಮಹಲ್ ಕಟ್ಟಿಸಿ ವಿಶಿಷ್ಠ ಎನಿಸಿದ್ದರು. ಆಧುನಿಕ ಯುಗದಲ್ಲಿ ಪತ್ನಿಗಾಗಿ ದೇವಾಲಯ ನಿರ್ಮಿಸಿ ರಾಜೂ ವಿಶಿಷ್ಠ ಎನಿಸಿದ್ದಾರೆ. ಯುವ ಪ್ರೇಮಿಗಳಿಗೆ ರಾಜು ಅವರು ಮಾದರಿ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಈಗಿನ ಕಾಲದಲ್ಲಿ ಪ್ರೀತಿಸಿ ಮದುವೆಯಾದ ಬಳಿಕ ಅದೆಷ್ಟೊ ಸಂಬಂಧಗಳಲ್ಲಿ ಬಿರುಕು ಬಿಟ್ಟಿರುವುದನ್ನು ಕಾಣುತ್ತೇವೆ. ಆದರೆ ರಾಜು ಅವರು ತನ್ನ ಪ್ರೇಯಸಿ ಸಾವನ್ನಪ್ಪಿದ ನಂತರವೂ ಮರೆಯದೆ, ಆಕೆಗೊಂದು ಗುಡಿಯ ಕಟ್ಟಿ, ಪ್ರತಿನಿತ್ಯ ಪೂಜೆ ಮಾಡಿ ಅಮರಗೊಳಿಸುತ್ತಿರುವುದನ್ನು ನೋಡಿದರೆ ನಿಜಕ್ಕೂ ಗ್ರೇಟ್ ಎನಿಸುತ್ತದೆ.

Leave a Reply

Your email address will not be published. Required fields are marked *